ಸಿದ್ದರಾಮಯ್ಯ ರಾಜಕೀಯ ಭವಿಷ್ಯ ಹೇಳಿದ ಕಟೀಲ್!
ಬೆಂಗಳೂರು, ಸೆಪ್ಟಂಬರ್ 11, ಮಂಗಳೂರಿನಲ್ಲಿ ಮತ್ತು ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಸಮಾರಂಭಗಳಿಗೆ ಆಗಮಿಸಿದ್ದ ಜನಸಾಗರ ಕಂಡು ಸಿದ್ದರಾಮಯ್ಯ ಅವರು ಸ್ಥಿಮಿತ ಕಳೆದುಕೊಂಡಂತಿದೆ. ಹೀಗಾಗೇ ಅವರು ಸುಳ್ಳು, ವ್ಯರ್ಥ ಆರೋಪಗಳ ಮೂಲಕ ನಾಟಕ ಮುಂದುವರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿ ಕಾರಿದರು.
ಸಿದ್ದರಾಮಯ್ಯ ವಿರುದ್ಧ ಬೆಂಗಳೂರಿನಲ್ಲಿ ವಾಗ್ದಾಳಿ ನಡೆಸಿರುವ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜನ ನಿರ್ಧರಿಸಿದ್ದಾರೆ. ಕಾಂಗ್ರೆಸ್ಸಿಗರ ಅಧಿಕಾರದ ಕನಸು ಕೇವಲ ಹಗಲುಗನಸಾಗಿ ಉಳಿಯಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಜನರು ಸೋಲಿಸಿ ರಾಜಕೀಯವಾಗಿ ಮೂಲೆಗುಂಪು ಮಾಡಲಿದ್ದಾರೆ. ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ ಎಂದು ನಳಿನ್‍ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಎಂದರೆ ಡೋಂಗಿತನ, ಹಿಂದೂ ವಿರೋಧಿತನದ ಸಂಕೇತ. ರಾಷ್ಟ್ರವಿರೋಧಿ ಶಕ್ತಿಗಳ ಜೊತೆ ಕೈ ಜೋಡಿಸುವ ಮತ್ತು ಧರ್ಮಗಳನ್ನು ಒಡೆಯುವ ಸಿದ್ದರಾಮಯ್ಯರ ಸ್ವಾರ್ಥ ರಾಜಕಾರಣ ಜನರಿಗೆ ಸ್ಪಷ್ಟವಾಗಿ ತಿಳಿದಿದೆ. ನೀವು ಟ್ವೀಟ್‍ಗಳ ಮೂಲಕ ಹಾಗೂ ಹೇಳಿಕೆಗಳ ಮೂಲಕ ನಿಮ್ಮನ್ನೇ ನೀವು ಜನರ ಮುಂದಿಟ್ಟು ಅಪಹಾಸ್ಯಕ್ಕೆ ಸಿಲುಕುತ್ತಿದ್ದೀರಿ. ಬಿಜೆಪಿ ಸರ್ಕಾರ ಜನ ಪರವಾಗಿದೆ. ಬಿಜೆಪಿ ಯಾವತ್ತೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಮತ್ತು ಸಶಕ್ತೀಕರಣದ ಪ್ರಯತ್ನದಲ್ಲಿರುವುದು ಜನರಿಗೆ ತಿಳಿದಿದೆ ಎಂದು ಕಟಿಲ್ ಹೇಳಿದರು.

ಪ್ರಚಾರದಲ್ಲಿರಲು ಸಿದ್ದು ಸುಳ್ಳು ಹೇಳಿಕೆ
ಒಮ್ಮೆ ನಿರುದ್ಯೋಗ ಸಮಸ್ಯೆ ಎನ್ನುವ ಸಿದ್ದರಾಮಣ್ಣ, ಮತ್ತೆ ಪ್ಲೇಟ್ ಬದಲಿಸಿ 40ಪರ್ಸೆಂಟ್ ಭ್ರಷ್ಟಾಚಾರ ಎಂದು ರಾಗ ಎಳೆಯುತ್ತಾರೆ. ಆರ್ಕಾವತಿ ಹಗರಣ ಸೇರಿ ವಿವಿಧ ಭ್ರಷ್ಟಾಚಾರ ಹಗರಣಗಳನ್ನು ಬಿಜೆಪಿ ಸರಕಾರ ಬಯಲಿಗೆ ಎಳೆಯಲಿದೆ ಎಂದು ತಿಳಿಸಿದ ಬಳಿಕ ಸಿದ್ದರಾಮಣ್ಣನಿಗೆ ಚಳಿ ಜ್ವರ ಬಂದಂತಿದೆ. ಅದಕ್ಕಾಗಿಯೇ ಸದಾ ಪ್ರಚಾರದಲ್ಲಿರಲು ಸುಳ್ಳು ಸುಳ್ಳು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಸಿದ್ದರಾಮಯ್ಯನವರು ಸ್ಪಷ್ಟ ಮಾಹಿತಿ ಇಲ್ಲದೆ ಆರೋಪಗಳನ್ನು ಮಾಡುತ್ತಿದ್ದಾರೆ. ಬಾಯಿ ಚಪಲಕ್ಕಾಗಿ ಮಾತನಾಡುತ್ತಿದ್ದಾರೆ. ಮಳೆ ಹಾನಿ ಸಂಬಂಧ ನೀವು ಮತ್ತು ನಿಮ್ಮ ಪಕ್ಷದವರು ಎಷ್ಟು ಪ್ರವಾಸ ಮಾಡಿದ್ದೀರಿ?. ಕಾಟಾಚಾರಕ್ಕೆ ಬಾದಾಮಿಗೆ ಹೋಗಿ ಬಂದಿದ್ದಲ್ಲವೇ?. ನಿಮ್ಮ ಅಸಲಿಯತ್ತು ನಮಗೆ ಮಾತ್ರವಲ್ಲದೆ ಜನರಿಗೂ ಗೊತ್ತಿದೆ. ನಕಲಿ ಸಮಾಜವಾದಿಗಳು, ನಕಲಿ ಬುದ್ಧಿಜೀವಿಗಳ ಜೊತೆ ಸೇರಿ ಮಾತನಾಡುವ ನಿಮ್ಮನ್ನು ಜನರು ನಂಬಲಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಿದ್ದರಾಮಯ್ಯ ಪ್ರವಾಸ ಬಗ್ಗೆ ವ್ಯಂಗ್ಯವಾಡಿದರು.

ಕೋವಿಡ್ ಲಸಿಕೆ ವಿರುದ್ಧ ಕಾಂಗ್ರೆಸ್‌ನಿಂದ ಅಪಪ್ರಚಾರ
ಬಿಜೆಪಿ ಮಳೆಹಾನಿಗೆ ಸಂಬಂಧಿಸಿದ ಪರಿಹಾರ ಮೊತ್ತ ಹೆಚ್ಚಿಸಿ 5ಲಕ್ಷ ರೂ.ನಂತೆ ಪರಿಹಾರ ಕೊಟ್ಟಿದೆ. ಕಾಂಗ್ರೆಸ್ ಅವಧಿಯಲ್ಲಿ ಆದ ರಾಜಕಾಲುವೆ ಒತ್ತುವರಿ ಮತ್ತು ಆ ಸಮಸ್ಯೆ ಪರಿಹರಿಸುವ ದೃಷ್ಟಿಯಿಂದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ಕೊಡಲಾಗಿದೆ. ಇದರ ಕೆಲಸವೂ ನಡೆಯುತ್ತಿದೆ. ಕೋವಿಡ್ ಸಂದರ್ಭ ಮಾತ್ರವಲ್ಲದೆ ನೆರೆ ಪರಿಹಾರ ಕಾಮಗಾರಿಯಲ್ಲೂ ಸರ್ಕಾರ ಹಾಗೂ ಪಕ್ಷದ ಕಾರ್ಯಕರ್ತರು ಜನರ ನೆರವಿಗೆ ಧಾವಿಸಿದ್ದಾರೆ. ನಿಮ್ಮ ಪಕ್ಷ ಕೋವಿಡ್ ಲಸಿಕೆ ವಿರುದ್ಧ ಪ್ರಚಾರ ಮಾಡಿದ್ದು ಜನರು ಮರೆತಿಲ್ಲ ಎಂದರು.
ಕಾಮನ್ ಮ್ಯಾನ್ ಸಿಎಂ ಖ್ಯಾತಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಬೆಂಗಳೂರಿನ ಅಭಿವೃದ್ಧಿಗೆ 6 ಸಾವಿರ ಕೋಟಿ ಮೊತ್ತ ನೀಡಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕಳೆದ ಹಲವು ದಶಕಗಳಲ್ಲೇ ಅತ್ಯಧಿಕ ಮಳೆ ಭಾರತದಾದ್ಯಂತ ಮತ್ತು ಬೆಂಗಳೂರಿನಲ್ಲೂ ಬಂದಿದೆ. ಮಳೆ, ಅತಿವೃಷ್ಟಿಯನ್ನು ಎದುರಿಸಲು ಬಿಜೆಪಿ ತಕ್ಷಣವೇ ಮುಂದಾಗಿದೆ. ಜನರ ಬದುಕನ್ನು ಕಟ್ಟಿಕೊಡಲು ಕೂಡಲೇ ಸ್ಪಂದಿಸಿದೆ ಎಂದು ವಿವರಿಸಿದರು.

ಕಾಂಗ್ರೆಸ್ ಇದ್ದಿದ್ದರೆ ದೇಶಿ ಲಸಿಕೆ ಕನಸಾಗುತ್ತಿತ್ತು
ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ಶ್ಲಾಘನೆಗೆ ಪಾತ್ರವಾಗಿದೆ. ಗರೀಬ್ ಕಲ್ಯಾಣ್ ಯೋಜನೆಯಡಿ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಲಾಗಿದೆ. ರಾಜ್ಯದ ಸುಮಾರು 7 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್ ಎರಡು ಡೋಸ್ ಲಸಿಕೆ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದರೆ ದೇಶೀಯ ಲಸಿಕೆ ತಯಾರಿ ಕೇವಲ ಕನಸಾಗಿಯೇ ಉಳಿಯುತ್ತಿತ್ತು. ಜೊತೆಗೆ ಆರೋಗ್ಯ ಕ್ಷೇತ್ರದ ಕನಿಷ್ಠ ಸೌಲಭ್ಯಗಳಿಂದಾಗಿ ಬೀದಿ ಬೀದಿಗಳಲ್ಲಿ ಜನರು ಸಾಯುವಂತಾಗುತ್ತಿತ್ತು ಎಂದು ತಿರುಗೇಟು ನೀಡಿದ್ದಾರೆ.

ಜನ ಆಶೋತ್ತರಗಳಿಗೆ ಸ್ಪಂದಿಸಿ: ಸಿದ್ದುಗೆ ಸವಾಲ್
ಸಿದ್ದರಾಮಯ್ಯನವರೇ ನಿಮಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಗೌರವ, ಬದ್ಧತೆ ಇದ್ದರೆ ಜನರ ಆಶೋತ್ತರ ಮತ್ತು ಕಷ್ಟಕಾರ್ಪಣ್ಯಕ್ಕೆ ಸ್ಪಂದಿಸಬೇಕು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಘನತೆ ಎತ್ತಿ ಹಿಡಿಯಬೇಕು. ನೀವು ತಾಕತ್ತಿದ್ದರೆ ಈ ವಿಚಾರವಾಗಿ ಚರ್ಚೆಗೆ ಬಂದರೆ ನಾವೂ ಚರ್ಚೆಗೆ ಸಿದ್ಧರಿದ್ದೇವೆ ಎಂದು ಕಟೀಲ್ ಸವಾಲು ಹಾಕಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಂಗಳೂರಿನಲ್ಲಿ 3,800 ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದಾರೆ. ಭಾರತದ ಭವಿಷ್ಯವನ್ನು ಉಜ್ವಲಗೊಳಿಸುವ ದೃಷ್ಟಿಯಿಂದ ಸರ್ಕಾರ ನಡೆಸುತ್ತಿದ್ದೇವೆ. ರಸ್ತೆಗಳ ಅಭಿವೃದ್ಧಿ, ರೈಲ್ವೆ ಸಂಪರ್ಕ, ವಾಯುಯಾನ ಮಾತ್ರವಲ್ಲದೆ ಜಲ ಸಾರಿಗೆಯನ್ನೂ ನಾವು ಅಭಿವೃದ್ಧಿ ಪಡಿಸುತ್ತಿದ್ದೇವೆ. ಜನಪರ ಅಭಿವೃದ್ಧಿ ಹಾಗೂ ಜನರ ಸಶಕ್ತೀಕರಣ ಕಾರ್ಯ ಬಿಜೆಪಿ ಸರ್ಕಾರಗಳಿಂದ ಆಗುತ್ತಿದೆ. ಇಷ್ಟಿದ್ದರೂ ಸಿದ್ದರಾಮಯ್ಯರ ಕಣ್ಣಿಗೆ ಪೊರೆ ಬಂದು ಅವರು ಕಪ್ಪು ಕನ್ನಡಕ ಹಾಕಿದ್ದರಿಂದ ಅಭಿವೃದ್ಧಿ ಕಾರ್ಯ ಕಂಡೂ ಕಾಣದಂತೆ ಜಾಣಗುರುಡರಾಗಿ ಅವರು ವರ್ತಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.












Click it and Unblock the Notifications