ಮಂಗಳೂರು: ಐಸಿಯುನಿಂದ ಹಾರಿ ಪ್ರಾಣಬಿಟ್ಟ ಯುವಕ

ಇಲ್ಲಿನ ಕೊಡಿಯಾಲಬೈಲಿನಲ್ಲಿರುವ ಯೆನೆಪೋಯಾ ಆಸ್ಪತ್ರೆಯಲ್ಲಿ ಈ ದುರ್ಘಟನೆ ನಡೆದಿದೆ. ಆಸ್ಪತ್ರೆಯ ನಾಲ್ಕನೆಯ ಮಹಡಿಯಲ್ಲಿರುವ ತೀವ್ರ ನಿಗಾ ಘಟಕದಲ್ಲಿ (ICU) ಸದರಿ ಯುವಕ ಚಿಕಿತ್ಸೆ ಪಡೆಯುತ್ತಿದ್ದ.
ಏನಾಗಿತ್ತೆಂದರೆ... ಕೊಟೆಕಾರಿನ ಮದೂರು ನಿವಾಸಿ ಲತೀಶ್ ಪೂಜಾರಿ (29) ಹೋಟೆಲೊಂದರಲ್ಲಿ ಸೋಮವಾರ (ಜನವರಿ 27) ಬೆಳಗಿನ ಜಾವ ವಿಷ ಬೆರೆಸಿದ ಮದ್ಯ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಗಲಿಬಿಲಿಗೊಂಡ ಲತೀಶ್ ಪೂಜಾರಿ ತನ್ನ ಸ್ನೇಹಿತನಿಗೆ ಫೋನ್ ಮಾಡಿ, ರಕ್ಷಿಸುವಂತೆ ಕೋರಿದ.
ಸ್ನೇಹಿತ, ತಕ್ಷಣ 108 ಆ್ಯಂಬುಲೆನ್ಸ್ ವಾಹನಕ್ಕೆ ಫೋನ್ ಮಾಡಿ ವಿಷಯ ತಿಳಿಸಿದ್ದ. ತಕ್ಷಣ ಆತನನ್ನು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ, ಲತೀಶ್ ಪೂಜಾರಿ ಮನೆಯವರಿಗೂ ವಿಷಯ ತಲುಪಿಸಲಾಯಿತು. ಸ್ಥಳಕ್ಕೆ ಬಂದ ಸಂಬಂಧಿಗಳು ವೆನ್ ಲಾಕ್ ಆಸ್ಪತ್ರೆಯಲ್ಲಿ ಸೌಲಭ್ಯಗಳು ಸರಿಯಿಲ್ಲವೆಂದು ತಕ್ಷಣ ಆತನನ್ನು ಯೆನೆಪೋಯಾ ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆಗೆ ಸ್ಪಂದಿಸತೊಡಗಿದ್ದ ಲತೀಶ್ ಪೂಜಾರಿ ಮಂಗಳವಾರ ಸಂಜೆಯಷ್ಟೊತ್ತಿಗೆ ಚೇತರಿಸಿಕೊಳ್ಳತೊಡಗಿದ. ಆದರೆ ವೈದ್ಯರು ಆತನಿಗೆ ಅಧಿಕ ಔಷಧ ನೀಡಿದ್ದರಿಂದ ಆತ ಮಾನಸಿಕ ಸ್ಥಿಮಿತ ಕಳೆದುಕೊಂಡ ಎಂದು ಸಂಬಂಧಿಗಳು ಆರೋಪಿಸಿದ್ದಾರೆ.
ರಾತ್ರಿ 9 ಗಂಟೆಯಲ್ಲಿ ಆಸ್ಪತ್ರೆಯ ICU ಘಟಕದಲ್ಲಿದ್ದ ಕಿಟಕಿಯ ಗಾಜುಗಳನ್ನು ಒಡೆದುಹಾಕಿದ. ಆದರೆ ICU ಘಟಕದೊಳಕ್ಕೆ ರೋಗಿಯ ಸಂಬಂಧಿಗಳಿಗೆ ಪ್ರವೇಶ ಇರುವುದಿಲ್ಲವಾದ್ದರಿಂದ ಲತೀಶ್ ಪೂಜಾರಿ ಗಾಜುಗಳನ್ನು ಒಡೆದುಹಾಕಿರುವುದು ಅವರ ಗಮನಕ್ಕೆ ಬಂದಿಲ್ಲ. ಡಾಕ್ಟರು ಮತ್ತು ನರ್ಸ್ ಗಳೇ ಅವನನ್ನು ಸಂಭಾಳಿಸಿದ್ದಾರೆ. ಅದಾದನಂತರ ರಾತ್ರಿ 11 ಗಂಟೆಯಲ್ಲಿ ಅದೇ ಕಿಟಕಿಯಿಂದ ಹಾರಿ ಪ್ರಾಣ ಬಿಡಲು ಲತೀಶ್ ಪೂಜಾರಿ ಯತ್ನಿಸಿದಾಗ ಅಲ್ಲಿದ್ದವರು ಅವನನ್ನು ಬಚಾವು ಮಾಡಿದ್ದರು. ಅದೂ ಸಹ ಪೋಷಕರ ಗಮನಕ್ಕೆ ಬಾರದೇ ಹೋಗಿದೆ.
ಆದರೆ ರಾತ್ರಿ 12.30ರಲ್ಲಿ ಎಲ್ಲರೂ ನಿದ್ದೆಗೆ ಜಾರಿದಾಗ ಲತೀಶ್ ಪೂಜಾರಿ ಅದೇ ಕಿಟಕಿಯಿಂದ ಹಾರಿ ಪ್ರಾಣ ಬಿಟ್ಟಿದ್ದಾನೆ. ಆಸ್ಪತ್ರೆ ಸಿಬ್ಬಂದಿ ಪೋಷಕರಿಗೆ 1.30ರಲ್ಲಿ ವಿಷಯ ತಿಳಿಸಿದ್ದಾರೆ.












Click it and Unblock the Notifications