20 ಎಕರೆ ಜಮೀನು ಏಕಕಾಲಕ್ಕೆ ಬಿತ್ತಿದ ಬಲರಾಮರು..!

Posted By: ಬಾಗಲಕೋಟೆ ಪ್ರತಿನಿಧಿ
Subscribe to Oneindia Kannada

ಬಾಗಲಕೋಟೆ, ಅಕ್ಟೋಬರ್ 11: ಅಲ್ಲಿ ಹತ್ತಾರು ಎಕರೆ ಗದ್ದೆಗೆ ಬಿತ್ತನೆ ಏಕಕಾಲಕ್ಕೆ ನಡೆಯುತ್ತಿತ್ತು. ಬಿತ್ತನೆ ಮಾಡುತ್ತಿದ್ದ ರೈತರು ಮೇಲಿಂದ ಮೇಲೆ ಬದಲಾಗುತ್ತಲೇ ಇದ್ದರು. ಅಬ್ಬಾ ಸಾಕಪ್ಪಾ ಕಾಲು ನೋವು ನೀನೆ ಒಂದೆರಡು ಸಾಲು ಬಿತ್ತೋ ಮಾರಾಯಾ ಎಂದು ಹೊರಟು ಹೋಗುತ್ತಿದ್ದರು.

ಆಗ ಬಿತ್ತನೆ ಕಾಳಿನ ಜೋಳಿಗೆ ಮತ್ತೊಬ್ಬರ ಹೆಗಲೇರುತ್ತಿತ್ತು. ಮತ್ತೆ ಆ ರೈತನದ್ದೂ ಅದೇ ರಾಗ. ಒಂದು ಹತ್ತು ಸಾಲು ಬಿತ್ತನೆ ಮಾಡಿ ನನ್ನಿಂದಾಗೋದಿಲ್ಲ ಎನ್ನುತ್ತಿದ್ದ. ಹೀಗೆ ಬಿತ್ತನೆ ಮಾಡುತ್ತಿದ್ದ ರೈತರು ಮಾತ್ರ ಮೇಲಿಂದ ಮೇಲೆ ಬದಲಾದರೂ ಆ ಇಬ್ಬರು ಬಲ ಭೀಮರು ಮಾತ್ರ ಬದಲಾಗಲೇ ಇಲ್ಲ.

ಆ ಇಬ್ಬರು ಬಾಹುಬಲಿಗಳ ಶಕ್ತಿ ಒಂದಿನಿತೂ ಕಡಿಮೆಯಾಗಲಿಲ್ಲ. ಎಕರೆಗಟ್ಟಲೆ ಗದ್ದೆಗೆ ಬಿತ್ತನೆ ಮಾಡಿ ಮುಗಿಸೋವರೆಗೂ ಅವರು ವಿರಾಮ ತೆಗೆದುಕೊಳ್ಳಲಿಲ್ಲ. 'ಅವರು' ಬೇರೆ ಯಾರೂ ಅಲ್ಲ. ಬಾಗಲಕೋಟೆ ತಾಲ್ಲೂಕಿನ ಮನ್ನಿಕಟ್ಟಿ ಗ್ರಾಮದ ಅಶೋಕ ಮೆಳ್ಳಿ ಎಂಬುವರ ಎರಡು ಎತ್ತುಗಳು.

 20 ಎಕರೆಗೆ ಬಿತ್ತನೆ

20 ಎಕರೆಗೆ ಬಿತ್ತನೆ

ಅರೆ ಇದೇನು? ಇದರಲ್ಲೇನಿದೆ ವಿಶೇಷ ಅಂತ ಅನ್ನಿಸಬಹುದು. ಆದರೆ ಈ ಎತ್ತುಗಳ ಸಾಹಸ ಶಕ್ತಿ ಕಂಡರೆ ನೀವು ಹೌಹಾರ್ತಿರಿ. ಎತ್ತುಗಳು ಇಲ್ಲಿ ಬರೊಬ್ಬರಿ ಇಪ್ಪತ್ತು ಎಕರೆ ಭೂಮಿಯನ್ನು ಯಾವುದೇ ಹಗ್ಗ, ಕೊರಳಲ್ಲಿ ಜತ್ತಿಗೆ ಕಟ್ಟದೆ ಬಿತ್ತನೆ ಮಾಡಿವೆ.

 ಬಾಹುಬಲಿಗಿಂತ ಕಡಿಮೆಯಿಲ್ಲ

ಬಾಹುಬಲಿಗಿಂತ ಕಡಿಮೆಯಿಲ್ಲ

ಕೇವಲ ಒಂಬತ್ತು ತಾಸುಗಳಲ್ಲಿ ಇಪ್ಪತ್ತು ಎಕರೆ ಜೋಳ ಬಿತ್ತನೆ ಕೂರಿಗೆ ಎಳೆದು ನಾವು ಬಲಭೀಮ, ಬಾಹುಬಲಿಗಿಂತ ಕಡಿಮೆಯಿಲ್ಲ ಎಂದು ಸಾಧಿಸಿ ತೋರಿಸಿವೆ.

ಇವು ಗ್ರಾಮದ ಅಶೋಕ ಮೆಳ್ಳಿ ಎಂಬ ರೈತರ ಎತ್ತುಗಳಾಗಿದ್ದು, ನಾಲ್ಕು ವರ್ಷದ ಹಿಂದೆ ಇವುಗಳನ್ನು 1 ಲಕ್ಷ ರೂ. ಕೊಟ್ಟು ಖರೀದಿ ಮಾಡಿದ್ದಾರೆ. ಅಂದಿನಿಂದ ತುಂಬ ಪ್ರೀತಿಯಿಂದ ಬೆಳೆಸಿದ ಪರಿಣಾಮ ಎಲ್ಲ ಮಾತುಗಳನ್ನು ಕೇಳುವ ಈ ಎತ್ತುಗಳು ಹಗ್ಗ ಯಾಕೆ ಬೇಕು ನಿನ್ನ ಆಜ್ಞೆ ಸಾಕು ಅನ್ನದಾತ ಎನ್ನುತ್ತಿವೆ.

 ರಾಮ ಮತ್ತು ಲಕ್ಷಣ

ರಾಮ ಮತ್ತು ಲಕ್ಷಣ

ಹಗ್ಗ ಜತ್ತಿಗೆ ಇಲ್ಲದಿದ್ದರೂ ಬಿತ್ತನೆ ಮಾಡಿ ರೈತನ ಆಜ್ಞೆ ಪಾಲಿಸಿವೆ. ಇದರಿಂದ ಹರ್ಷಗೊಂಡಿರುವ ರೈತ ಅಶೋಕ ನನಗೆ ಈ ಎತ್ತುಗಳೆಂದರೆ ಪಂಚಪ್ರಾಣ ಅಂತಾರೆ. ಈ ಎತ್ತುಗಳಲ್ಲಿ ಬಲಭೀಮ, ಬಾಹುಬಲಿ ಶಕ್ತಿಯಿದೆ ಎಂದರೆ ತಪ್ಪಿಲ್ಲ ಬಿಡಿ. ಆದರೆ, ಈ ಮುದ್ದಾದ ಎತ್ತುಗಳ ಹೆಸರು ರಾಮ-ಲಕ್ಷ್ಮಣ.

ಹೆಸರಿಗೆ ತಕ್ಕಂತೆ ಇವು ಪರಾಕ್ರಮಿಗಳು. ಇದಕ್ಕೆ ಈ ಎತ್ತುಗಳು ಬಿತ್ತನೆಯಲ್ಲಿ ಮಾಡಿದ ಸಾಧನೆಯೇ ಸಾಕ್ಷಿ. ಈ ಎತ್ತುಗಳಿಗೆ ಕೇವಲ ಇಂದಲ್ಲ ಎಂದಿಗೂ ಕೂಡ ಹಗ್ಗ ಮತ್ತು ಜತ್ತಿಗೆಯನ್ನು ಕಟ್ಟಿಲ್ಲವಂತೆ. ಪ್ರತಿ ಸಾರಿಯೂ ಬಿತ್ತನೆ ವೇಳೆ ಇವುಗಳ ಹೆಗಲ ಮೇಲೆ ನೊಗ ಇಟ್ಟು ಕೂರಿಗೆ ಕಟ್ಟಿದರೆ ಸಾಕು ಸಾಲು ಹಿಡಿದು ಇವು ಸಾಗುತ್ತವೆ. ರೈತನ ಮಾತನ್ನು ಅರ್ಥೈಸಿಕೊಂಡು ಕೃಷಿಯಲ್ಲಿ ಸಹಕಾರ ನೀಡುತ್ತವೆ.

 ಸಾಹಸ ನೋಡೋಕೆ ನೆರೆದಿದ್ದ ಜನ

ಸಾಹಸ ನೋಡೋಕೆ ನೆರೆದಿದ್ದ ಜನ

ಟ್ರ್ಯಾಕ್ಟರ್ ನಿಂದ ಮಾಡುವ ಕಾರ್ಯವನ್ನು ಈ ಎತ್ತುಗಳ ಮಾಡಿ ಸೈ ಎನ್ನಿಸಿಕೊಂಡಿವೆ. ಇನ್ನು ಈ ಎತ್ತುಗಳ ಸಾಹಸ ನೋಡೋಕೆ ಅಂತಾನೆ ಕಲಬುರ್ಗಿ, ರಾಯಚೂರು, ವಿಜಯಪುರ, ಕೊಪ್ಪಳ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು ಜಮಾಯಿಸಿದ್ದರು.

ಎತ್ತುಗಳ ಈ ಅದ್ಭುತ ಸಾಧನೆ ಕಂಡು ಶಹಬ್ಬಾಷ್ ಗಿರಿ ನೀಡಿದರು. ಹಗ್ಗ ಜತ್ತಿಗೆ ಕಟ್ಟಿಯೇ ಬಿತ್ತನೆ ಮಾಡೋದು ಕಠಿಣ ಅಂತಹದ್ದರಲ್ಲಿ ಈ ಎತ್ತುಗಳು ಹಗ್ಗ ಜತ್ತಿಗೆಯಿಲ್ಲದೆ ಬಿತ್ತನೆ ಕಾರ್ಯ ಮಾಡೋದನ್ನು ಕಂಡು ಆಚ್ಚರಿ ವ್ಯಕ್ತಪಡಿಸಿದರು.

ನಾವು ಕೂಡ ಈ ರೈತನಂತಾಗಬೇಕು. ಇದೇ ರೀತಿ ಎತ್ತುಗಳನ್ನು ಬೆಳೆಸಬೇಕು. ಇದು ಎಲ್ಲ ರೈತರಿಗೂ ಮಾದರಿ ಅಂತ ಹರ್ಷ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The pair of oxen have sown for 20 acres of land at one time in Mannikatti village of Bagalkot taluk.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ