ಜಿಲ್ಲಾವಾರು ಈರುಳ್ಳಿ ಬೆಲೆ; ಬಂಗಾರದಂತೆ ಈರುಳ್ಳಿ ಅಳೆಯುತ್ತಿರುವ ವ್ಯಾಪಾರಿಗಳು
ಈರುಳ್ಳಿ ಬೆಲೆ ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದ್ದು, ಪ್ರತಿ ಕೆ.ಜಿ ಈರುಳ್ಳಿಗೆ 200 ರೂಪಾಯಿ ಮಾರಾಟ ಬೆಲೆಯಿದೆ. ಹೋಲ್ ಸೇಲ್ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಗೆ ಬೆಲೆ 5,500 ರೂ ಇಂದ 14,000 ರೂನಷ್ಟಿದೆ. ಬೆಂಗಳೂರು ಮಾತ್ರವಲ್ಲ, ಎಲ್ಲೆಡೆಯೂ ಈರುಳ್ಳಿ ಬೆಲೆ ಗಗನಮುಖಿಯಾಗಿದೆ. ತಮ್ಮ ದಿನನಿತ್ಯದ ಆಹಾರ, ತಿಂಡಿ ತಿನಿಸಿಗೆ ಈರುಳ್ಳಿಯನ್ನೇ ಅವಲಂಬಿಸಿದ್ದವರೂ ಈಗ ಈರುಳ್ಳಿಯಿಂದ ದೂರವಿರಲು ಪ್ರಯತ್ನಿಸುತ್ತಿದ್ದಾರೆ. ಈರುಳ್ಳಿ ಬೆಲೆ ಕಡಿಮೆಯಾಗುವವರೆಗೂ ಈರುಳ್ಳಿ ಕಡೆ ಮುಖ ಮಾಡುವುದೇ ಬೇಡ ಎಂದು ತೀರ್ಮಾನಿಸಿದವರೂ ಇದ್ದಾರೆ.
ಬೆಲೆ ಏರಿಕೆಯಿಂದಾಗಿ ಈರುಳ್ಳಿ ಕತ್ತರಿಸುವಾಗ ಮಾತ್ರವಲ್ಲ, ಈರುಳ್ಳಿ ತರುವಾಗಲೂ ಕಣ್ಣೀರು ಹಾಕುವಂತೆ ಆಗಿದೆ. ಆದರೆ ಜನವರಿ ಮಧ್ಯಭಾಗದ ತನಕ ಬೆಲೆ ಏರಿಕೆ ಇದೇ ರೀತಿ ಮುಂದುವರೆಯುವ ಸಾಧ್ಯತೆಯಿದ್ದು, ಈರುಳ್ಳಿ ಪೂರೈಕೆ ಹೆಚ್ಚಾದರೆ, ಬೆಲೆ ತಗ್ಗುವ ಭರವಸೆಯೂ ವ್ಯಕ್ತವಾಗಿದೆ. ಅಂದ ಹಾಗೆ ಬೇರೆ ಜಿಲ್ಲೆಗಳಲ್ಲಿ ಈರುಳ್ಳಿ ವಹಿವಾಟು ಹೇಗೆ ಸಾಗುತ್ತಿದೆ ನೋಡೋಣ...

ಶಿವಮೊಗ್ಗ; "ಈರುಳ್ಳಿ ಕೊಡಲ್ಲ" ಎಂಬ ನಾಮಫಲಕ
ಶಿವಮೊಗ್ಗ ತರಕಾರಿ ಮಾರುಕಟ್ಟೆಯಲ್ಲಿ ಉತ್ತಮ ಈರುಳ್ಳಿ ಬೆಲೆ 180-200 ರೂ ತಲುಪಿದ್ದು, ಮಧ್ಯಮ ಗುಣಮಟ್ಟದ ಈರುಳ್ಳಿ 150-160 ರೂ ಆಗಿದೆ. ಕಳಪೆ ಈರುಳ್ಳಿಗಳೂ ಇದ್ದು, ಅವು ಕೆ.ಜಿಗೆ 80-100 ರೂಗೆ ಮಾರಾಟ ಆಗುತ್ತಿವೆ. ಹೀಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಈರುಳ್ಳಿ ಖರೀದಿಯೇ ಕುಸಿದಿದೆ. ನೂರು ಜನ ಕೊಂಡುಕೊಳ್ಳುತ್ತಿದ್ದ ಜಾಗದಲ್ಲಿ ಐವತ್ತು ಜನ ಖರೀದಿಸುತ್ತಿದ್ದಾರೆ.
ಪಾನಿಪೂರಿ, ಗೋಬಿಮಂಚೂರಿ, ಮಸಾಲೆ ಮಂಡಕ್ಕಿ, ಎಗ್ ರೈಸ್, ರಸ್ತೆ ಬದಿಯ ವ್ಯಾಪಾರಿಗಳು ತಮ್ಮ ತಿನಿಸುಗಳಲ್ಲಿ ಈರುಳ್ಳಿ ಕೊಡುವುದಿಲ್ಲ ಎಂದು ನಾಮ ಫಲಕವನ್ನೇ ಹಾಕಿಕೊಂಡಿದ್ದಾರೆ. ಬಹುತೇಕ ಬೇಕರಿಗಳಲ್ಲಿ ಟೋಸ್ಟ್ ಮತ್ತು ಈರುಳ್ಳಿಯಿಂದ ತಯಾರಾಗುವ ತಿನಿಸುಗಳನ್ನು ತಯಾರಿಸುವುದನ್ನೇ ಕೈ ಬಿಟ್ಟಿದ್ದಾರೆ.
ಉಳ್ಳವರಿಗಷ್ಟೇ ಉಳ್ಳಾಗಡ್ಡಿ, ಮಿಕ್ಕವರಿಗೆ ಕಣ್ಣೀರೇ ಗಟ್ಟಿ!

ಮುಂದಿನ ವಾರ ಮೈಸೂರಿನಲ್ಲಿ ಈರುಳ್ಳಿ ಬೆಲೆ ಇಳಿಕೆ?
ಮೈಸೂರಿನಲ್ಲಿ ಈರುಳ್ಲಿ ಚಿಲ್ಲರೆ ಮಾರಾಟ ದರ 180 ರೂ ಇಂದ 150 ರೂಗಳವರೆಗೆ ಇದೆ. ಆದರೆ ಕೆಲವೆಡೆ 130 ರೂ ಇದೆ. ನಗರದ ವಿವಿಧ ಬಡಾವಣೆಗಳಲ್ಲಿ ಈರುಳ್ಳಿ ದರ 170-180 ರೂಪಾಯಿ ಇದೆ. ಈರುಳ್ಳಿಯ ದುಬಾರಿ ದರದಿಂದಾಗಿ ಕೆಲವು ಅಂಗಡಿಗಳಲ್ಲಿ ಈರುಳ್ಳಿ ಮಾರಾಟವನ್ನೇ ನಿಲ್ಲಿಸಲಾಗಿದೆ. ಇಲ್ಲಿನ ಎಪಿಎಂಸಿಯಲ್ಲಿ ಈರುಳ್ಳಿ ಸಗಟು ಮಾರಾಟಗಾರರೊಬ್ಬರನ್ನು ಮಾತಾಡಿಸಿದಾಗ, ಈರುಳ್ಳಿ ದರ ದಿನೇ ದಿನೇ ಸ್ವಲ್ಪ ಕಡಿಮೆ ಆಗುತ್ತಿದ್ದು, ಮುಂದಿನ ವಾರ 70-80 ರೂಗೆ ಬಂದು ನಿಲ್ಲಲಿದೆ ಎಂದರು. ಸೋಮವಾರ ಮಹಾರಾಷ್ಟ್ರದಿಂದ 10-12 ಲಾರಿಗಳಷ್ಟು ಹೆಚ್ಚು ಈರುಳ್ಳಿ ಬಂದಿದ್ದು ದರ ಕುಸಿಯುವ ಸಾಧ್ಯತೆ ಇದೆ ಎಂದೂ ತಿಳಿಸಿದರು. ಇಂದು ಬೆಳಿಗ್ಗೆ ಸಗಟು ದರ ಉತ್ತಮ ಈರುಳ್ಳಿಗೆ 120-130 ಇದ್ದು, ಮಧ್ಯಾಹ್ನದ ನಂತರ ದರ ಕಡಿಮೆ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಪೂನಾ ಈರುಳ್ಳಿ ದರ್ಬಾರ್
ಬೆಲೆ ಏರಿಕೆಯಿಂದಾಗಿ ರಾಜ್ಯಕ್ಕೆ ಈಜಿಪ್ಟ್ ಈರುಳ್ಳಿ ಮಾರುಕಟ್ಟೆ ಪ್ರವೇಶಿಸಿದೆ. ಚಿತ್ರದುರ್ಗದಲ್ಲೂ ಪೂನಾ ಈರುಳ್ಳಿ ಬಂದಿದ್ದು, ಅದರ ಬೆಲೆ 140-160 ರವರೆಗೂ ಇದೆ. ಚಿತ್ರದುರ್ಗದ ಲೋಕಲ್ ಈರುಳ್ಳಿ 60-100 ರವರೆಗೆ ಮಾರಾಟವಾಗುತ್ತಿದೆ. ಈರುಳ್ಳಿ ಖರೀದಿ ಮಾಡಲು ಮಾರುಕಟ್ಟೆಗೆ ಹೋದವರು ಬರಿಗೈಯಲ್ಲಿ ವಾಪಸ್ ಬರುತ್ತಿದ್ದಾರೆ.
ಚಿತ್ರದುರ್ಗ 60-80 ರೂ
ಹಿರಿಯೂರು ಪೂನಾ ಈರುಳ್ಳಿ 140-150 ರೂ
ಹೊಳಲ್ಕೆರೆ 50-80 ರೂ
ಹೊಸದುರ್ಗ 50-90 ರೂ
ಮೊಳಕಾಲ್ಮೂರು 70-100 ರೂ
ಚಳ್ಳಕೆರೆ 60-90 ರೂವರೆಗೆ ಲೋಕಲ್ ಈರುಳ್ಳಿ ಮಾರಾಟವಾಗಿದೆ. ಈರುಳ್ಳಿ ಬೆಲೆಯ ಏರಿಕೆ ಹಿನ್ನಲೆಯಲ್ಲಿ ಸಣ್ಣ ಈರುಳ್ಳಿ ಬಳಕೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಬೆಂಗಳೂರು ನಗರದ ಮಾರುಕಟ್ಟೆಯಲ್ಲಿ ದಾಖಲೆ ಬರೆದ ಉಳ್ಳಾಗಡ್ಡಿ

ದಾವಣಗೆರೆ ದೋಸೆಯಲ್ಲಿ ಈರುಳ್ಳಿ ಕ್ಯಾನ್ಸಲ್
ದಾವಣಗೆರೆಯಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ 130 ರಿಂದ 150 ರೂಪಾಯಿ ಇದೆ. ಬೆಲೆ ಏರಿಕೆಯಿಂದಾಗಿ ಹೋಟೆಲ್ ಗಳಲ್ಲಿ ಈರುಳ್ಳಿ ಕೊಡುವುದನ್ನೇ ನಿಲ್ಲಿಸಿದ್ದಾರೆ. ಈರುಳ್ಳಿ ದೋಸೆ ಮಾಡುವುದನ್ನೇ ಕೈ ಬಿಟ್ಟಿದ್ದಾರೆ. ಗ್ರಾಹಕರು ಈರುಳ್ಳಿಯನ್ನು ಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಬಂಗಾರದಂತೆ ಈರುಳ್ಳಿ ಅಳೆಯುತ್ತಿರುವ ವ್ಯಾಪಾರಿಗಳು
ಈರುಳ್ಳಿ ಬಗ್ಗೆ ವ್ಯಾಪಾರಿಗಳೂ ಹೆಚ್ಚೇ ನಿಗಾ ವಹಿಸುತ್ತಿದ್ದಾರೆ. ಈರುಳ್ಳಿಯನ್ನು ಒಂದು ಗ್ರಾಂ ಕೂಡ ಹೆಚ್ಚಾಗದಂತೆ, ತೂಕದಲ್ಲಿ ಒಂದು ಚೂರೂ ವ್ಯತ್ಯಾಸವಾಗದಂತೆ ತೂಕ ಮಾಡುತ್ತಿದ್ದಾರೆ. ಮೊದಲೆಲ್ಲ ಒಂದು ಈರುಳ್ಳಿ ಹೆಚ್ಚೇ ಹಾಕುತ್ತಿದ್ದವರು, ಬೆಲೆ ಏರಿಕೆ ಆದಾಗಿಂದ ತೂಕದ ತಕ್ಕಡಿಯ ಮೇಲೆ ನಿಗಾ ಇಟ್ಟಿದ್ದಾರೆ. ಬಂಗಾರದಂತೆ ಈರುಳ್ಳಿಯನ್ನು ಜಾಗರೂಕತೆಯಿಂದ ಅಳೆಯುತ್ತಿದ್ದಾರೆ.
ಈರುಳ್ಳಿ ದಾಸ್ತಾನು: ಇಸ್ರೇಲ್, ಬ್ರೆಜಿಲ್ ನಿಂದ ಭಾರತ ಕಲಿಯಬೇಕಿದೆ

ಮಂಗಳೂರಿನಲ್ಲಿ ಟರ್ಕಿ ಈರುಳ್ಳಿ ದರ್ಬಾರ್
ಈರುಳ್ಳಿ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲೇ ಕೇಂದ್ರ ಸರ್ಕಾರ ಟರ್ಕಿ ಈರುಳ್ಳಿಯನ್ನು ಆಮದು ಮಾಡಿಕೊಂಡಿದೆ. ಎರಡು ದಿನಗಳ ಹಿಂದೆ ಮಂಗಳೂರಿಗೆ ಈ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದ್ದು, ಮೊದಲ ದಿನವೇ ಕೆ.ಜಿಗೆ 120ರಿಂದ 130 ರೂ. ದರ ನಿಗದಿಯಾಗಿತ್ತು. ಈ ಟರ್ಕಿ ಈರುಳ್ಳಿ ಬಂದ ನಂತರ ಈರುಳ್ಳಿ ಬೆಲೆ ಕುಸಿಯುವ ನಿರೀಕ್ಷೆಯಿದ್ದು, ಆ ನಿರೀಕ್ಷೆ ಸುಳ್ಳಾಗಿದೆ. ಮಾಮೂಲಿ ಈರುಳ್ಳಿಯೂ 180ರಿಂದ 200ರವರೆಗೂ ಇದೆ. ಈರುಳ್ಳಿ ಬೆಲೆ ಏರಿಕೆ ಬಿಸಿಯಿಂದ ಇಲ್ಲಿನ ಹೋಟೆಲ್ ಗಳಲ್ಲಿ ಈರುಳ್ಳಿ ಬದಲು ಕ್ಯಾಬೇಜ್ ಬಳಕೆಯನ್ನು ಹೆಚ್ಚಿಸಲಾಗಿದೆ.