‘ಕೈ’ ನಾಯಕರಿಗೆ ಒಮರ್ ಅಬ್ದುಲ್ಲಾ ಇವಿಎಂ ಪಾಠ: ಏನಿದರ ಸೂಚನೆ?
ಬೆಂಗಳೂರು, ಡಿಸೆಂಬರ್ 18: ಕಾಂಗ್ರೆಸ್‌ಗೆ ಮಿತ್ರ ಪಕ್ಷಗಳೇ ಕಂಟಕವಾಗುವ ಎಲ್ಲ ಲಕ್ಷಣಗಳು ಇದೀಗ ಗೋಚರಿಸುತ್ತಿದೆ. ಕಾಂಗ್ರೆಸ್ ನೇತೃತ್ವದಲ್ಲಿ ಹತ್ತಾರು ಪಕ್ಷಗಳನ್ನು ಒಟ್ಟಾಗಿ ಸೇರಿಸಿಕೊಂಡು ಐಎನ್ ಡಿಐಎ(ಇಂಡಿಯಾ) ಒಕ್ಕೂಟ ರಚಿಸಿ ಲೋಕಸಭಾ ಚುನಾವಣೆಯನ್ನು ಎದುರಿಸಿ ಒಂದಷ್ಟು ಸಾಧನೆ ಮಾಡಿದ್ದೇವೆ ಎನ್ನುವ ಹೊತ್ತಿನಲ್ಲಿಯೇ ಪ್ರಭಾವಿ ಮಿತ್ರ ಪಕ್ಷಗಳು ದೂರ ಸರಿಯುವ ಸುಳಿವುಗಳನ್ನು ನೀಡುತ್ತಿರುವುದು ಎಲ್ಲೋ ಒಂದು ಕಡೆ ಪ್ರಮುಖ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇದಕ್ಕೆಲ್ಲ ಕಾರಣವಾಗಿರುವುದು ಲೋಕಸಭೆ ಚುನಾವಣೆ ನಂತರದ ವಿಧಾನಸಭಾ ಚುನಾವಣೆಗಳು ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಕಾರಣ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ನ ಕಳಪೆ ಸಾಧನೆ ಬಹುಶಃ ಮಿತ್ರಪಕ್ಷಗಳಲ್ಲಿ ಆತಂಕವನ್ನು ಹುಟ್ಟು ಹಾಕಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನೆರಳಲ್ಲಿದ್ದರೆ ಈಗಿರುವ ಸ್ಥಾನಗಳನ್ನು ಕಳೆದುಕೊಳ್ಳಬೇಕಾಗಿ ಬರಬಹುದು ಎಂಬ ಭಯ ಆವರಿಸಲಾರಂಭಿಸಿದೆ. ಹೀಗಾಗಿ ಅವು ಕುಂಟು ನೆಪಗಳನ್ನು ನೀಡುತ್ತಾ ಸಖ್ಯದಿಂದ ದೂರವಿದ್ದು ತಮ್ಮತನವನ್ನು ಉಳಿಸಿಕೊಳ್ಳುವ ಮತ್ತು ಕೇಂದ್ರದೊಂದಿಗೆ ಉತ್ತಮ ಬಾಂಧವ್ಯದ ಮೂಲಕ ತಮ್ಮ ರಾಜ್ಯದ ಅಭಿವೃದ್ಧಿಯತ್ತ ಚಿಂತನೆ ಮಾಡುತ್ತಿರುವಂತೆ ಕಾಣಿಸುತ್ತಿದೆ.

ಇತ್ತೀಚೆಗಿನ ಬೆಳವಣಿಗೆಯನ್ನು ಗಮನಿಸಿದರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿದಿನವೂ ಬೆಂಕಿಯನ್ನು ಉಗುಳುತ್ತಿದ್ದ ಟಿಎಂಸಿ ಮುಖ್ಯಸ್ಥೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮೌನಕ್ಕೆ ಜಾರಿದ್ದಾರೆ. ಹಾಗೆಯೇ ಇಂಡಿಯಾ ಒಕ್ಕೂಟವನ್ನು ನಾನೇ ಮುನ್ನಡೆಸುವ ಎಂಬ ಹೇಳಿಕೆ ನೀಡಿ ಕಾಂಗ್ರೆಸ್ ಗೆ ಶಾಕ್ ನೀಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಅವರು ಇಂಡಿಯಾ ಒಕ್ಕೂಟದಿಂದ ಅಂತರ ಕಾಪಾಡಿಕೊಂಡೇ ಇಲ್ಲಿವರೆಗೆ ಬಂದಿದ್ದಾರೆ. ಇನ್ನು ಎಎಪಿಯ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿಯಲ್ಲಿ ಅಧಿಕಾರ ಉಳಿಸಿಕೊಳ್ಳುವುದೇ ಬಹುಮುಖ್ಯವಾಗಿದೆ.
ಕಾಂಗ್ರೆಸ್‌ಗೆ ಮಿತ್ರಪಕ್ಷಗಳ ಹಿಡಿತ ತಪ್ಪುತ್ತಿದೆಯಾ?
ಸದ್ಯದಲ್ಲಿಯೇ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮುನ್ನಡೆಯಲು ಅವರು ತಯಾರಿಲ್ಲ ಎಂಬ ಸಂದೇಶವನ್ನು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತೇವೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಮಹಾರಾಷ್ಟ್ರವಿಧಾನಸಭಾ ಚುನಾವಣೆ ಬಳಿಕ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಮಂಕಾಗಿದೆ. ಕಾಂಗ್ರೆಸ್ ಜೊತೆಗೆ ಚುನಾವಣೆಗೆ ಹೋಗಿದ್ದರಿಂದ ಸೋಲಾಗಿದೆ ಎಂಬ ಮಾತುಗಳು ಪಕ್ಷದೊಳಗೆ ಕೇಳಿ ಬರುತ್ತಿವೆ. ಅಷ್ಟೇ ಅಲ್ಲದೆ ಶರದ್ ಪವಾರ್ ನೇತೃತ್ವದ ಎನ್ ಸಿಪಿ ಕೂಡ ನೆಲಕಚ್ಚಿದೆ.

ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಗೆ ಒಂದಿಷ್ಟು ಲಾಭವಾಗಿರುವುದನ್ನು ಬಿಟ್ಟರೆ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದಂತೆ ಜತೆಗಿರುವ ಎಲ್ಲ ಪ್ರಾದೇಶಿಕ ಪಕ್ಷಗಳು ಸಂಕಷ್ಟ ಅನುಭವಿಸಿವೆ. ಹೀಗಾಗಿಯೇ ಮುಂದಿನ ವಿಧಾನಸಭಾ ಚುನಾವಣೆ ಬರುತ್ತಿದ್ದಂತೆಯೇ ನಿಧಾನವಾಗಿ ಕಾಂಗ್ರೆಸ್ ನಿಂದ ಅಂತರ ಕಾಪಾಡಿಕೊಂಡು ಸ್ವತಂತ್ರವಾಗಿ ಸ್ಪರ್ಧೆ ಮಾಡುವ ಉತ್ಸಾಹ ತೋರುತ್ತಿವೆ. ಇದು ಹೀಗೆಯೇ ಮುಂದುವರೆದರೆ ಮಿತ್ರಪಕ್ಷಗಳ ಮೇಲಿನ ಹಿಡಿತ ಕಾಂಗ್ರೆಸ್‌ನಿಂದ ತಪ್ಪಿಹೋಗುವ ಎಲ್ಲ ಲಕ್ಷಣಗಳು ಗೋಚರಿಸಲಾರಂಭಿಸಿದೆ.
ಕೈನಾಯಕರಿಗೆ ಒಮರ್ ಅಬ್ದುಲ್ಲಾ ಇವಿಎಂ ಪಾಠ
ಇವತ್ತು ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳಿಗೆ ಸೋಲಾಗಲು ಕಾಂಗ್ರೆಸ್ ನಾಯಕರ ಕೆಲವೊಂದು ಹೇಳಿಕೆಗಳು ಮತ್ತು ಅವರ ನಿರ್ಧಾರಗಳು ಕಾರಣ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಮತ್ತು ಅದನ್ನೇ ಕಾಂಗ್ರೆಸ್ ಮುಂದುವರೆಸಿದರೆ ತಮಗೆ ಸಂಕಷ್ಟ ಎಂಬುದು ಕೂಡ ಮಿತ್ರ ಪಕ್ಷಗಳ ನಾಯಕರಿಗೆ ಅರಿವಾಗಿದೆ. ಸಾಮಾನ್ಯವಾಗಿ ಸೋಲು ಕಂಡಾಗಲೆಲ್ಲ ಕಾಂಗ್ರೆಸ್ ನಾಯಕರು ಮೊದಲ ಪ್ರತಿಕ್ರಿಯೆ ಇವಿಎಂ ಮೇಲಿರುತ್ತದೆ. ಅದರಲ್ಲೂ ಮಹಾರಾಷ್ಟ್ರ ಚುನಾವಣೆಯಲ್ಲಿ ಸೋತಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಿಂದ ಆರಂಭಗೊಂಡು ರಾಹುಲ್ ಗಾಂಧಿ ಅವರ ತನಕ ಎಲ್ಲರೂ ಇವಿಎಂನ್ನು ದೂಷಣೆ ಮಾಡಲಾರಂಭಿಸಿದ್ದರು. ಆದರೆ ಇವರದ್ದೇ ಮಿತ್ರಪಕ್ಷಗಳು ಅದೇ ಇವಿಎಂನಿಂದಲೇ ಗೆಲುವು ಕಂಡಿದ್ದರು ಎಂಬುದನ್ನು ಮರೆತಿದ್ದರು.

ಮಹಾರಾಷ್ಟ್ರದ ಸೋಲನ್ನು ಕಾಂಗ್ರೆಸ್‌ಗೆ ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ಹೀಗಾಗಿ ಇವಿಎಂ ಬಗ್ಗೆ ದೊಡ್ಡ ಮಟ್ಟದಲ್ಲಿ ಆರೋಪ ಮಾಡಿದ್ದರು. ಅಲ್ಲದೆ, ಜೋಡೋ ಯಾತ್ರೆ ರೀತಿಯಲ್ಲಿಯೇ ಇವಿಎಂ ವಿರುದ್ಧ ಹೋರಾಟ ಮಾಡುವುದಾಗಿಯೂ ಘೋಷಣೆ ಮಾಡಿದ್ದರು. ಇದೇ ವೇಳೆ ತಮ್ಮದೇ ಒಕ್ಕೂಟದ ನ್ಯಾಷನಲ್ ಕಾನ್ಫರೆನ್ಸ್ ಜಮ್ಮು ಕಾಶ್ಮೀರದಲ್ಲಿ ಇದೇ ಇವಿಎಂನಿಂದ ಗೆಲುವು ಸಾಧಿಸಿದೆ ಎಂಬುದನ್ನು ಕಾಂಗ್ರೆಸ್ ನಾಯಕರೆಲ್ಲರೂ ಮರೆತಿದ್ದು ದುರಂತವೇ.. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಇದೀಗ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಕಾಂಗ್ರೆಸ್ ನಾಯಕರ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ.

ಕಾಂಗ್ರೆಸ್‌ಗೆ ಇದು ಸಲಹೆನಾ? ಎಚ್ಚರಿಕೆನಾ?
ಇವಿಎಂ ಬಗ್ಗೆ ಅವರು ನೀಡಿರುವ ಹೇಳಿಕೆಗಳನ್ನು ಗಮನಿಸಿದರೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಇಂಡಿಯಾ ಒಕ್ಕೂಟದಿಂದ ದೂರವಾಗುವ ಲಕ್ಷಣಗಳು ಕಂಡು ಬಂದಿವೆ. ಸದ್ಯಕ್ಕೆ ಈ ಪಕ್ಷ ಜಮ್ಮುಕಾಶ್ಮೀರದಲ್ಲಿ ಅಧಿಕಾರ ಹಿಡಿದಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದ ನೆರಳು ಬೇಕಾಗಿಲ್ಲ. ಅದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಜತೆಗಿದ್ದರೂ ಯಾವುದೇ ಪ್ರಯೋಜನವಿಲ್ಲ ಎಂಬುದು ಅವರಿಗೆ ತಿಳಿದಿದೆ. ಹೀಗಾಗಿಯೇ ಇವಿಎಂ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರನ್ನು ಒಮರ್ ಅಬ್ದುಲ್ಲಾ ಕುಟುಕಿದ್ದಾರೆ. ಇದು ಕಾಂಗ್ರೆಸ್ ನಾಯಕರಿಗೆ ನುಂಗಲಾರದ ತುತ್ತು ಎಂದರೂ ತಪ್ಪಾಗಲಾರದು.












Click it and Unblock the Notifications