ಸಿಎಂ ಬದಲಿಸಲು ಶಾಸಕರು ದೆಹಲಿ ಹೋಟೆಲ್‌ಗಳಲ್ಲಿ ಸೇರಿದ್ದಾರೆ: ನಿಖಿಲ್ ಕುಮಾರಸ್ವಾಮಿ
ರಾಜ್ಯ ಕಾಂಗ್ರೆಸ್‌ನಲ್ಲಿ ದಿನಕ್ಕೊಂದು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಸಿಎಂ ಬದಲಾವಣೆ ವಿಚಾರವಾಗಿ ನಾಯಕರ ಹೇಳಿಕೆಗಳು ಸಂಚಲನ ಸೃಷ್ಟಿಸುತ್ತಿವೆ. ಸದ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರದ ರಾಜಕಾರಣವು ದೆಹಲಿ ಅಂಗಳದಲ್ಲಿದೆ. ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರೈಸಿರುವ ಹಿನ್ನೆಲೆ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡುವಂತೆ ಬೆಂಬಲಿತ ಶಾಸಕರು ದೆಹಲಿಗೆ ಗುಂಪು ಗುಂಪಾಗಿ ತೆರಳಿ ಹೈಕಮಾಂಡ್ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ. ಕರ್ನಾಟಕದ ಜನರು ಕಾಂಗ್ರೆಸ್‌ಗೆ ಬಲವಾದ ಜನಾದೇಶವನ್ನು ನೀಡಿದರು ಕೂಡ ತಮ್ಮದೇ ಆದ ಮುಖ್ಯಮಂತ್ರಿಯನ್ನು ನಂಬಲು ಸಾಧ್ಯವಾಗದ ಪರಿಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಂದು ನಿಂತಿದೆ ಎಂದಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯ ಮಾತುಕತೆ ಪ್ರೀತಿಯಿಂದ ನಡೆಯುವುದಿಲ್ಲ. ಶಾಸಕರು ವಿಶ್ವಾಸ ಕಳೆದುಕೊಂಡಾಗ ಅದು ನೆಡೆಯುತ್ತದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ICUನಲ್ಲಿದೆ
ಶಾಸಕರು ವಿಶ್ವಾಸ ಕಳೆದುಕೊಂಡರೆ ಇದರ ಅರ್ಥ ಸಿಎಂ ವಿಫಲರಾಗಿದ್ದಾರೆ, ಸರ್ಕಾರ ಕುಸಿದಿದೆ ಮತ್ತು ಪಕ್ಷವು ಈಗಾಗಲೇ ಐಸಿಯುನಲ್ಲಿದೆ ಎಂದರ್ಥ. ತಮ್ಮದೇ ಮುಖ್ಯಮಂತ್ರಿಯನ್ನು ಬದಲಾಯಿಸಲು ಕಾಂಗ್ರೆಸ್ ಶಾಸಕರು ದೆಹಲಿಯ ಹೋಟೆಲ್‌ಗಳಲ್ಲಿ ಸಾಲುಗಟ್ಟಿ ನಿಂತಿರುವುದು ಯಾವುದೇ ಸರ್ಕಾರ ಪಡೆಯಬಹುದಾದ ದೊಡ್ಡ ವೈಫಲ್ಯದ ಪ್ರಮಾಣ ಪತ್ರವಾಗಿದೆ. ಮುಖ್ಯಮಂತ್ರಿ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ, ಸರ್ಕಾರ ದಿಕ್ಕನ್ನು ಕಳೆದುಕೊಂಡಿದೆ ಮತ್ತು ಕರ್ನಾಟಕವು 2.5 ವರ್ಷಗಳನ್ನು ಕಳೆದುಕೊಂಡಿದೆ ಎಂದು ನಿಖಿಲ್ ವಾಗ್ದಾಳಿ ನಡೆಸಿದ್ದಾರೆ.
ಬಹುಮತದ ಸರ್ಕಾರ ಅಲ್ಲಾಡುತ್ತಿದೆ
ನವೆಂಬರ್ ಕ್ರಾಂತಿಯ ಗುಮ್ಮ ಕಾಂಗ್ರೆಸ್ ಪಾಳಯದೊಳಗೆ ಬಂದಿದ್ದೇ ತಡ, ಬಹುಮತದ ಸರ್ಕಾರ ಅಲ್ಲಾಡುತ್ತಲೇ ಇದೆ. ಮುಖ್ಯಮಂತ್ರಿ ಗದ್ದುಗೆ ಅಲುಗಾಡುತ್ತಿರುವ ಕಾರಣ ಸಿದ್ದರಾಮಯ್ಯ ರಾಜ್ಯವನ್ನು ಮರೆತೇ ಬಿಟ್ಟಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಎಲ್ಲರೂ ದೆಹಲಿ ದಂಡಯಾತ್ರೆಯಲ್ಲಿ ಮುಳುಗಿದ್ದಾರೆ, ರಾಜ್ಯವು ಅಭಿವೃದ್ಧಿಯಲ್ಲಿ 10 ವರ್ಷಗಳಷ್ಟು ಹಿಂದಕ್ಕೆ ಸರಿದಿದೆ. ಸರ್ಕಾರಕ್ಕೆ ಸರ್ಕಾರವೇ ಕುರ್ಚಿ ಜಗಳದಲ್ಲಿ ಮುಳುಗಿಸುವಂತೆ ಮಾಡಿದ ಕಾಂಗ್ರೆಸ್ ಹೈಕಮಾಂಡ್ ನಡೆ ಖಂಡನೀಯ. ಬಹುಮತಗಳಿದ್ದರೂ ರಾಜ್ಯಕ್ಕೊಬ್ಬ ಪರ್ಮನೆಂಟ್ ಮುಖ್ಯಮಂತ್ರಿಯನ್ನು ನೇಮಿಸಲಾಗದಷ್ಟು ಕಾಂಗ್ರೆಸ್ ಅಸಹಾಯಕರಾಗಿರುವುದು ದುರಂತವೇ ಸರಿ ಎಂದು ಬಿಜೆಪಿ ಕೂಡ ತಿರುಗೇಟು ನೀಡಿದೆ.
'ಕೈ' ಹೈಕಮಾಂಡ್ ನಿರ್ದೇಶಿತ ಪುಕ್ಕಟೆ ನಾಟಕ ಪ್ರದರ್ಶನ ನಡೆಯುತ್ತಿದೆ. ಸೀರಿಯಲ್ ಮಾದರಿಯಲ್ಲಿದ್ದ ರಾಜ್ಯ ಕಾಂಗ್ರೆಸ್ಸಿಗರ ಕುರ್ಚಿ ಕಚ್ಚಾಟ ಸಿನಿಮಾ ಸ್ವರೂಪ ಪಡೆದುಕೊಂಡಿದೆ ಎಂದು ಹೇಳಿದೆ. ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳಿರುವಾಗ ಯಾವ ಪುರುಷಾರ್ಥಕ್ಕಾಗಿ ಬೆಳಗಾವಿ ಅಧಿವೇಶನ ಮಾಡುತ್ತೀರಿ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೇಳಿದ್ದಾರೆ. ತರಾತುರಿಯಲ್ಲಿ ಅಧಿವೇಶನ ನಡೆಸಿದರೆ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ಬೆಳಗಾವಿಯ ಅಧಿವೇಶನಕ್ಕೆ ಬರುವ ಮುನ್ನ ಕಾಂಗ್ರೆಸ್ ನಾಯಕರು ಕುರ್ಚಿ ಕಾಳಗವನ್ನು ಇತ್ಯರ್ಥ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.












Click it and Unblock the Notifications