ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ; ಸಹೋದರ ನಿಖಿಲ್ ಕುಮಾರಸ್ವಾಮಿ ಹೀಗಂದಿದ್ದೇಕೆ?
ದೇವೇಗೌಡರ ಮೊಮ್ಮಗ ಹಾಗೂ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಅತ್ಯಾಚಾರ ಕೇಸ್‌ನಲ್ಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಮನೆ ಕೆಲಸ ಮಾಡುವ ಮಹಿಳೆ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಕೇಸ್‌ನಲ್ಲಿ ಪ್ರಜ್ವಲ್ ಅಪರಾಧಿ ಎಂದು ತೀರ್ಪು ನೀಡಿದೆ. ಇದರಿಂದ ದೇವೇಗೌಡರ ಕುಟುಂಬಕ್ಕೆ ಭಾರೀ ಹಿನ್ನಡೆಯಾಗಿದ್ದು, ಈ ತೀರ್ಪಿನಿಂದ ಶಾಕ್‌ನಲ್ಲಿದ್ದಾರೆ. ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಬಗ್ಗೆ ಸಹೋದರ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಅವರ ಮಾತುಗಳು ಅಚ್ಚರಿ ಮೂಡಿಸಿವೆ.
ಇಂದು ಚಿತ್ರದುರ್ಗದ ಕಾರ್ಯಕ್ರಮದ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಪ್ರಜ್ವಲ್‌ಗೆ ನೀಡಿರುವ ತೀರ್ಪಿನ ಬಗ್ಗೆ ರಿಯಾಕ್ಷನ್ ಕೊಟ್ಟಿದ್ದಾರೆ. ಪ್ರಜ್ವಲ್ ರೇವಣ್ಣ ವಿರುದ್ಧ ಕೋರ್ಟ್‍ನಲ್ಲಿ ತೀರ್ಪು ಪ್ರಕಟಗೊಂಡಿದೆ. ಕೋರ್ಟ್ ತೀರ್ಪಿನ ಬಗ್ಗೆ ಹೆಚ್ಚಿನ ವಿಶ್ಲೇಷಣೆಯ ಅಗತ್ಯವಿಲ್ಲ ಎಂದಿದ್ದಾರೆ ನಿಖಿಲ್. ಪ್ರಜ್ವಲ್ ರೇವಣ್ಣ ಮೇಲೆ ಈ ಆರೋಪ ಕೇಳಿಬಂದ ತಕ್ಷಣವೇ ಅವರನ್ನ ಪಕ್ಷದಿಂದ ಅಮಾನತು ಮಾಡಲಾಗಿತ್ತು. ನಮ್ಮ ಪಕ್ಷದ ವರಿಷ್ಠರು ಆಗಲೇ ಕ್ರಮ ತೆಗೆದುಕೊಂಡು ಪ್ರಜ್ವಲ್‌ನ ಪಕ್ಷದಿಂದ ಅಮಾನತಿನಲ್ಲಿ ಇಟ್ಟಿದ್ದರು. ಆ ಸಮಯದಲ್ಲಿ ಪ್ರಜ್ವಲ್ ಅಪರಾಧಿಯೋ? ಅಲ್ಲವೋ ಎಂಬ ಬಗ್ಗೆ ತೀರ್ಪು ಬಂದಿರಲಿಲ್ಲ ಎಂದಿದ್ದಾರೆ.

ಹಾಗಾಗಿ ಈ ವಿಚಾರದಲ್ಲಿ ವರಿಷ್ಠರ ತೀರ್ಮಾನದ ಸ್ಪಷ್ಟತೆಯನ್ನ ಅರ್ಥ ಮಾಡಿಕೊಳ್ಳಬೇಕು. ಈ ವಿಷಯದ ಬಗ್ಗೆ ಇದಕ್ಕಿಂತ ಹೆಚ್ಚಾಗಿ ನಾನು ಮಾತನಾಡುವುದಿಲ್ಲ. ಕೋರ್ಟ್ ನೀಡಿರುವ ತೀರ್ಪಿಗೆ ಯಾರೇ ಆದರೂ ತಲೆಬಾಗಬೇಕಾಗುತ್ತೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಈ ಹಿಂದೆಯೂ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡಿದ್ದ ನಿಖಿಲ್, ಪ್ರಜ್ವಲ್ ಕೇಸ್‌ನಿಂದಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆಘಾತಕ್ಕೆ ಒಳಗಾಗಿದ್ದು, ತಂದೆ ಕುಮಾರಣ್ಣನ ಜೊತೆ ಹಾಸನಕ್ಕೆ ತೆರಳಿ ಆತ್ಮಸ್ಥೈರ್ಯ ತುಂಬುತ್ತೇವೆ ಎಂದಿದ್ದರು.
ಈ ಘಟನೆಯಿಂದ ದೇವೇಗೌಡರು ಕೂಡ ಆಘಾತಕ್ಕೆ ಒಳಗಾಗಿದ್ದಾರೆ. ಇಳಿವಯಸ್ಸಿನಲ್ಲಿ ಅವರಿಗೆ ಆಗಿರುವ ನೋವು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಅವರು ಸಾಕಷ್ಟು ನೊಂದಿದ್ದು, ವಿಶ್ರಾಂತಿಯಲ್ಲಿದ್ದಾರೆ. ಪ್ರಜ್ವಲ್‌ದು ಎನ್ನಲಾದ ಆ ಅಶ್ಲೀಲ ವಿಡಿಯೋಗಳನ್ನ ನಾನು ನೋಡಲಿಲ್ಲ. ಆದರೆ ಬೇರೆಯವರಿಂದ ಆ ವಿಡಿಯೋಗಳ ಬಗ್ಗೆ ಮಾಹಿತಿ ತಿಳಿದಿದ್ದೇನೆ. ಪ್ರಜ್ವಲ್ ಆರೋಪಿ ಸ್ಥಾನದಲ್ಲಿದ್ದು, ತನಿಖೆ ನಡೆಯುತ್ತಿದೆ. ಅವರು ತಪ್ಪು ಮಾಡಿದ್ದರೆ ಖಂಡಿತವಾಗಿಯೂ ಶಿಕ್ಷೆ ಅನುಭವಿಸುತ್ತಾರೆ ಎಂದು ನಿಲುವು ವ್ಯಕ್ತಪಡಿಸಿದ್ದರು.
ಇನ್ನು ಅಶ್ಲೀಲ ವಿಡಿಯೋ ಹಂಚಿದವರು ಮಹಿಳೆಯರ ಘನತೆಗೆ ಕುತ್ತು ತಂದಿದ್ದಾರೆ. ಕೊನೆಯ ಪಕ್ಷ ಮಹಿಳೆಯರ ಮುಖವನ್ನು ತೋರಿಸಬಾರದಿತ್ತು. ಹಾಸನ ಸಂಸದರ ವಿಚಾರ ಮುಂದಿಟ್ಟುಕೊಂಡು ಪ್ರಧಾನಿಯವರನ್ನು ಎಳೆದು ತರುವ ಕೆಲಸವನ್ನು ಕಾಂಗ್ರೆಸ್ ಮಾಡಕೂಡದು. ಅವರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದರು. ಈಗಲೂ ಕಾನೂನಿನ ಪ್ರಕಾರ ಆಗಿರುವುದು ಸರಿ ಎಂಬರ್ಥದಲ್ಲಿ ನಿಖಿಲ್ ಮಾತನಾಡಿದ್ದಾರೆ. ಇನ್ನು ನೆನ್ನೆ ಕೋರ್ಟ್ ತೀರ್ಪು ಬಂದಾಗಿನಿಂದಲೂ ಅವರ ಕುಟುಂಬಸ್ಥರು ಯಾರೂ ಹೊರಗೆ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯೆಯೂ ಕೊಡಲಿಲ್ಲ. ಮೊದಲ ಬಾರಿಗೆ ಆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ.












Click it and Unblock the Notifications