ಎಐ ಜಗತ್ತಿನಲ್ಲಿ ಹೊಸ ಸೋಷಿಯಲ್ ಮೀಡಿಯಾ: Moltbook ಹೊಸದು, ಅದರ ಹಳೇ ಆವೃತ್ತಿ ಗೊತ್ತಾ: ರಾಜಾರಾಂ ತಲ್ಲೂರು ಬರಹ
New AI: ಎಐ ಜಗತ್ತಿನಲ್ಲಿ ಹೊಸ ಸೋಷಿಯಲ್ ಮೀಡಿಯಾ: Moltbook ಹೊಸದು, ಅದರ ಹಳೇ ಆವೃತ್ತಿ ಗೊತ್ತಾ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
Moltbook ಎಂಬುದು ಇತ್ತೀಚೆಗೆ (ಜನವರಿ 2026) ಆರಂಭಗೊಂಡಿರುವ ಒಂದು ಸೋಷಿಯಲ್ ಮೀಡಿಯಾ. ಅದರ ವಿಶೇಷ ಎಂದರೆ, AI ಆಧರಿತ chatbotಗಳೇ ಅಲ್ಲಿ ಪೋಸ್ಟ್ ಮಾಡುವುದು, ಚರ್ಚೆ ಮಾಡುವುದು. ಅದು AI-only Social Network. ಇದು ಹೊಸ ಆವೃತ್ತಿ ಆದರೆ, ಇದರ ಹಳೇ ಆವೃತ್ತಿ ನಮ್ಮ ರಾಜಕಾರಣದಲ್ಲಿನ ಸೋಷಿಯಲ್ ಮೀಡಿಯಾ ಬಳಕೆ.

ಈಗೀಗ ಎಲ್ಲ ರಾಜಕಾರಣಿಗಳೂ FB ಅಥವಾ X ಖಾತೆ, Insta ಇತ್ಯಾದಿ ಖಾತೆಗಳನ್ನು ಹೊಂದಿರುತ್ತಾರೆ, ಅವರ ಖಾತೆಯನ್ನು ಬೇರೆ ಯಾರೋ ಗೋಸ್ಟ್ ಹ್ಯಾಂಡ್ಲಿಂಗ್ ಮಾಡುತ್ತಿರುತ್ತಾರೆ. ಅವರನ್ನೀಗ ಸೋಷಿಯಲ್ ಮೀಡಿಯಾ ಟೀಮ್ ಎಂದೇ ಗುರುತಿಸಲಾಗುತ್ತದೆ. ಈ ಗೋಸ್ಟ್‌ಗಳೇ ಪೋಸ್ಟ್ ಹಾಕಿಕೊಂಡು, ರಾಜಕಾರಣಿಗಳಿಗಿಂತ ಒಂದು ಕೈ ಮಿಗಿಲೆಂಬಂತೆ ರಾಜಕೀಯ ಮಾಡುವುದು ನಿಜಕ್ಕೂ ಅಸಂಗತದ ಪರಮಾವಧಿ. ಅದಕ್ಕೆ ಲೇಟೆಸ್ಟ್ ಉದಾಹರಣೆ ಇವತ್ತೇ ಇಲ್ಲಿ ನೋಡಲು ಸಿಕ್ಕಿತು.
ಆಗ ನನಗೆ ತಕ್ಷಣ ನೆನಪಾದದ್ದು ಈ Moltbook!!! ಆ ಉದಾಹರಣೆ ಏನೆಂದರೆ, ಬೆಳಗ್ಗೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಲೆಟರ್‌ಹೆಡ್ ಬಳಸಿಕೊಂಡು, ಯಾವುದೋ ಒಬ್ಬರು ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ ಎಂಬ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ರಾಜಕಾರಣಿಗಳ ಪುಟಗಳಲ್ಲೇ ಓಡಾಟ ನಡೆಸುತ್ತಿದೆ. ಸರಿಯಾಗಿ ಗಮನಿಸಿದರೆ ಅದು ಫೇಕ್ ಇರಬಹುದೆಂಬ ಯೋಚನೆ ಯಾರಿಗಾದರೂ ಬರುತ್ತದೆ. ರಾಜಕಾರಣಿಗಳೆಲ್ಲ ಇದನ್ನು ಕಂಡಿದ್ದಾರೋ ಇಲ್ಲವೋ. ಆದರೆ ಅವರ ಸೋಷಿಯಲ್ ಮೀಡಿಯಾ ಟೀಮ್ ಭರಾಟೆಯಿಂದ ಅದನ್ನು ಪ್ರಸಾರ ಮಾಡಿದೆ. ಅಲ್ಲಿಂದ ಕೆಲವು ಮೇನ್‌ಸ್ಟ್ರೀಮ್ ಮಾಧ್ಯಮಗಳೂ ಅದನ್ನು ಹೆಕ್ಕಿಕೊಂಡಿರುವುದನ್ನು ಗಮನಿಸಿದೆ.
ಸಂಜೆ ಹೊತ್ತಿಗೆ ಮುಖ್ಯಮಂತ್ರಿಗಳ ಸೋಷಿಯಲ್ ಮೀಡಿಯಾ ಖಾತೆಯಿಂದ ಅದು "ಫೇಕ್" ಎಂದು ಎಚ್ಚರಿಸುವ ಪ್ರಕಟಣೆ ಹೊರಬಿದ್ದಿದೆ. ವಿಷಯ ಅದಲ್ಲ. ಇಲ್ಲಿ ಜವಾಬ್ದಾರಿಯುತ ಹುದ್ದೆಗಳಲ್ಲಿರುವ ಜನರ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುವ ತಂಡಗಳ ಬೇಜವಾಬ್ದಾರಿ ಗಮನಾರ್ಹ. ಅದನ್ನು ಬೇಜವಾಬ್ದಾರಿ ಎಂದು ಬೊಟ್ಟುಮಾಡುವುದು ಇನ್ನೊಂದು ತಂಡ.
ಇವೆಲ್ಲವೂ ಥರ್ಡ್ ಪಾರ್ಟಿಗಳೇ! ರಾಜಕಾರಣಿಗಳ ಹೆಸರಲ್ಲಿ ಅವರು ವ್ಯವಹರಿಸುತ್ತಿರುತ್ತಾರೆ ಮತ್ತು ತಮ್ಮ ಉದ್ಯೋಗದಾತರಿಗೆ ಒಳ್ಳೆಯ / ಕೆಟ್ಟ ಹೆಸರುಗಳನ್ನು ತರುತ್ತಿರುತ್ತಾರೆ. ರಾಜಕಾರಣಿಗಳು ಈ ಪೋಸ್ಟ್ ವ್ಯವಹಾರಗಳಲ್ಲಿ ನೇರ ಭಾಗಿ ಆಗದಿದ್ದರೂ, ಅದರ ಕ್ರೆಡಿಟ್/ಡೆಬಿಟ್‌ಗೆ ಅವರು ನೇರ ಹೊಣೆ. ಈ ಹಿಂದೆ ಕೂಡ ಇಂತಹ ಹಲವು ಘಟನೆಗಳು ನಡೆದದ್ದಿದೆ. ಸಹಜ ಬುದ್ಧಿಮತ್ತೆ ಸೃಷ್ಟಿಸಿರುವ ಕೃತಕ ಬುದ್ಧಿಮತ್ತೆಗಳು ಅರ್ಥಾತ್, Chatbot ಗಳೇ ತಮ್ಮತಮ್ಮೊಳಗೆ ವ್ಯವಹರಿಸುವುದು ಒಂಥರಾ ಹೀಗೇ ಅಲ್ವಾ ?












Click it and Unblock the Notifications