ಫೆಬ್ರವರಿಯಲ್ಲಿ 4 ಕಡೆ ನರೇಂದ್ರ ಮೋದಿ ಸಮಾವೇಶ
ಬೆಂಗಳೂರು, ಜ.23 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರಕ್ಕಾಗಿ ನಾಲ್ಕು ಸಮಾವೇಶಗಳನ್ನು ಕರ್ನಾಟಕದಲ್ಲಿ ಆಯೋಜಿಸಲು ರಾಜ್ಯ ಬಿಜೆಪಿ ಘಟಕ ತೀರ್ಮಾನ ಕೈಗೊಂಡಿದೆ. ಫೆಬ್ರವರಿ ತಿಂಗಳಿನಲ್ಲಿ ನರೇಂದ್ರ ಮೋದಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಲಿದ್ದಾರೆ.
ಬುಧವಾರ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ರಾಷ್ಟ್ರೀಯ ನಾಯಕ ವೆಂಕಯ್ಯನಾಯ್ಡು ನೇತೃತ್ವದಲ್ಲಿ ನಡೆದ ಹಿರಿಯ ನಾಯಕರ ಸಭೆಯಲ್ಲಿ ನರೇಂದ್ರ ಮೋದಿ ಅವರ ಸಮಾವೇಶಗಳ ಕುರಿತು ಚರ್ಚೆ ನಡೆಸಲಾಗಿದೆ. ಚುನಾವಣೆ ನಿಗದಿಯಾದ ನಂತರ ಮತ್ತೊಮ್ಮೆ ಮೋದಿ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಫೆಬ್ರವರಿ 12ರಂದು ಬೆಳಗ್ಗೆ ದಾವಣಗೆರೆಯಲ್ಲಿ ಮತ್ತು ಸಂಜೆ ಮಂಗಳೂರಿನಲ್ಲಿ ನರೇಂದ್ರ ಮೋದಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಫೆ.18ರಂದು ಬೆಳಗ್ಗೆ ಗುಲ್ಬರ್ಗಾದಲ್ಲಿ ಹಾಗೂ ಸಂಜೆ ಹುಬ್ಬಳ್ಳಿಯಲ್ಲಿ ಮೋದಿ ಸಮಾವೇಶಗಳನ್ನು ಆಯೋಜಿಲಾಗಿದೆ.
ನರೇಂದ್ರ ಮೋದಿ ಅವರು ನೀಡಿದ ದಿನಾಂಕಗಳನ್ನು ಆಧರಿಸಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಈ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಫೆ.21ರಂದು ಚಿತ್ರದುರ್ಗದಲ್ಲಿ ಬಿಜೆಪಿ ಹಿಂದುಳಿದ ವರ್ಗ ಮತ್ತು ದಲಿತರ ಸಮಾವೇಶ ನಡೆಸಲಿದೆ. ಆದರೆ, ಈ ಸಮಾವೇಶದಲ್ಲಿ ಮೋದಿ ಭಾಗವಹಿಸಲಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. [ಅಹಿಂದ ಮತ ಸೆಳೆಯಲು ಬಿಜೆಪಿ ಸಮಾವೇಶ]
ಮಾರ್ಚ್ ನಲ್ಲಿ ಮತ್ತೆ ಸಮಾವೇಶ : ರಾಜ್ಯದಲ್ಲಿ ನರೇಂದ್ರ ಮೋದಿ ಅವರ ಎಂಟು ಸಮಾವೇಶವನ್ನು ನಡೆಸಲು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಅದರ ಅನ್ವಯ ಮಾರ್ಚ್ ತಿಂಗಳಿನಲ್ಲಿ ನಾಲ್ಕು ಸಮಾವೇಶಗಳನ್ನು ಆಯೋಜಿಸಲಾಗುತ್ತದೆ. ಆದರೆ, ಈ ಕುರಿತು ದಿನಾಂಕಗಳನ್ನು ಅಂತಿಮಗೊಳಿಸಿಲ್ಲ. ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಈ ಸಮಾವೇಶಗಳ ಸ್ಥಳ ಮತ್ತು ದಿನಾಂಕ ಅಂತಿಮಗೊಳ್ಳಲಿದೆ.












Click it and Unblock the Notifications