ಮುರುಘಾ ಮಠದ ಆಸ್ತಿ; ಹೈಕೋರ್ಟ್‌ನಲ್ಲಿ ಕರ್ನಾಟಕ ಸರ್ಕಾರದ ವಾದವೇನು?
ಬೆಂಗಳೂರು, ಜನವರಿ 24; ಮುರುಘಾಮಠದ ಮಠಾಧಿಪತಿ ಮಠದ ಆಸ್ತಿ ಮಾಲೀಕನಾಗುವುದಿಲ್ಲ. ಹಾಗಾಗಿ ಆಸ್ತಿ ಉಳಿಸಲು ಆಡಳಿತಾಧಿಕಾರಿ ನೇಮಕ ಅನಿವಾರ್ಯವಾಗಿತ್ತು ಎಂದು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಹೇಳಿದೆ.
ಈ ಹೇಳಿಕೆ ಮೂಲಕ ಕರ್ನಾಟಕ ಸರ್ಕಾರ ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ. ಎಸ್. ವಸ್ತ್ರದ್ ನೇಮಕ ಮಾಡಿರುವುದನ್ನು ಬಲವಾಗಿ ಸಮರ್ಥಿಸಿಕೊಂಡಿದೆ. ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಸದ್ಯ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮುರುಘಾ ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿರುವ ಆದೇಶ ರದ್ದು ಕೋರಿ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ ಹಾಗೂ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಸಲ್ಲಿಸಿರುವ ಅರ್ಜಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಮಠಾಧಿಪತಿ ಬಂಧನದಲ್ಲಿರುವುದರಿಂದ ಮಠದ ಆಡಳಿತ ನಿರ್ವಹಣೆ ಸಾಧ್ಯವಿಲ್ಲ. ದೈನಂದಿನ ಆಡಳಿತ ನಿರ್ವಹಣೆ ಮಾಡಲು ಆಸ್ತಿಯನ್ನು ಉಳಿಸಲು ಆಡಳಿತಾಧಿಕಾರಿ ನೇಮಿಸಲಾಗಿದೆ. ಒಂದು ವೇಳೆ ಬಂಧನಕ್ಕೆ ಒಳಗಾಗಿರುವ ಮುರುಘಾ ಶರಣರಿಗೆ ಜಾಮೀನು ಸಿಕ್ಕರೆ ಆನಂತರ ಸರಕಾರ ಆಡಳಿತಾಧಿಕಾರಿ ನೇಮಕ ನಿರ್ಧಾರ ಮರುಪರಿಶೀಲನೆ ಮಾಡಬಹುದು ಎಂದು ಹೇಳಿದರು.

ಜನವರಿ 30ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಮಠಾಧಿಪತಿ ಮಠದ ಎಂದಿಗೂ ಆಸ್ತಿಯ ಮಾಲೀಕನಾಗಲು ಸಾಧ್ಯವಿಲ್ಲ. ಮಠದ ಆಸ್ತಿಯ ನಿರ್ವಹಣೆ ಮಾತ್ರ ಮಠಾಧಿಪತಿಯ ಕರ್ತವ್ಯವಾಗಿರುತ್ತದೆ. ಮಠಾಧಿಪತಿ ಅನುಪಸ್ಥಿತಿಯಲ್ಲಿಆಡಳಿತಾಧಿಕಾರಿ ನೇಮಕ ಅನಿವಾರ್ಯವಾಗಿತ್ತು ಎಂದು ಹೇಳಿದರು. ಸರಕಾರದ ವಾದವನ್ನು ದಾಖಲಿಸಿಕೊಂಡ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿತು.
ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಪೀಠಾಧಿಪತಿ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಅಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾರಣ, ಮುರುಘಾ ಮಠಕ್ಕೆ ಸೇರಿದ ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಹಾಗೂ ನೂರಾರು ವಿದ್ಯಾಸಂಸ್ಥೆಗಳ ದೈನಂದಿನ ಆಡಳಿತ ಕುಸಿದು ಹೋಗಬಾರದು ಎಂಬ ಏಕೈಕ ಸದುದ್ದೇಶದಿಂದ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ ಎಂದು ಹೈಕೋರ್ಟ್‌ಗೆ ಸ್ಪಷ್ಟಪಡಿಸಿದರು.

ರಕ್ಷಣೆಗಾಗಿ ತನ್ನ ಅಧಿಕಾರ ಚಲಾಯಿಸಿದೆ
ರಿಲಿಜಿಯಸ್ ಡಿನಾಮಿನೇಶನ್ (ಧಾರ್ಮಿಕ ಪಂಥ) ಮತ್ತು ಮಠಾಧಿಪತಿ ಎಂಬುದರ ವ್ಯಾಖ್ಯಾನ ಬೇರೆ ಬೇರೆಯಾಗುತ್ತದೆ. ಮಠ ಒಂದು ಸಾರ್ವಜನಿಕ ಟ್ರಸ್ಟ್. ಹೀಗಾಗಿ, ಮಠದ ಅಧೀನದಲ್ಲಿರುವ ಆಸ್ತಿಗಳನ್ನು ಸಂರಕ್ಷಿಸುವ ಸಲುವಾಗಿ ಮತ್ತು ಸಂಸ್ಥೆಗಳ ನಿರಾತಂಕ ಆಡಳಿತದ ಮುಂದುವರಿಕೆ ಹಾಗೂ ರಕ್ಷಣೆಗಾಗಿ ತನ್ನ ಅಧಿಕಾರ ಚಲಾಯಿಸಿದೆ ಎಂದರು.
ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್‌ನ ಎರಡನೇ ಹೆಚ್ಚುವರಿ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಸಲ್ಲಿಸಿರುವ ಮಧ್ಯಂತರ ದೋಷಾರೋಪ ಪಟ್ಟಿಯಲ್ಲಿ ಪೀಠಾಧಿಪತಿ ಕ್ರಿಮಿನಲ್ ಪ್ರಕರಣದ ಆರೋಪಿಯಾಗಿದ್ದು ಮಠದ ಆಡಳಿತ ನಡೆಸುವಂತಿಲ್ಲ ಎಂಬ ಅಂಶವನ್ನು ಸ್ಪಷ್ಟವಾಗಿ ನಮೂದು ಮಾಡಿದ್ದಾರೆ.
ಅಂತೆಯೇ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ-1988ರ ಕಲಂ 8 (2) ಅಡಿಯಲ್ಲಿ ಈಗಿನ ಪೀಠಾಧಿಕಾರಿ ತನ್ನ ಯಾವುದೇ ಕರ್ತ್ಯವಗಳನ್ನು ನಿರ್ವಹಿಸಲು ನಿರ್ಬಂಧ ಹೇರಬೇಕು ಎಂಬ ಅಂಶವನ್ನೂ ಸೇರ್ಪಡೆ ಮಾಡಿ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಕೋರಲಾಗಿದೆ ಎಂದರು.

ಅರ್ಜಿದಾರರ ವಾದವೇನು?
ಸಂವಿಧಾನದ 26ನೇ ವಿಧಿಯಡಿ ಯಾವುದೇ ಒಬ್ಬ ನಾಗರಿಕ ಧಾರ್ಮಿಕ ಸಂಸ್ಥೆಗಳ ಸ್ಥಾಪನೆಗೆ ಮುಕ್ತ ಅವಕಾಶ ಹೊಂದಿ ಅದನ್ನು ಮೂಲಭೂತ ಹಕ್ಕಿನ ಅವಕಾಶದ ಅಡಿ ರಕ್ಷಣೆ ಪಡೆದಿರುವುದು ದಿಟ. ಆದರೆ, ಕ್ಲಿಷ್ಟಕರ ಸಂದರ್ಭಗಳಲ್ಲಿ, ನೈತಿಕ ಮತ್ತು ಆರೋಗ್ಯದ ಪ್ರಶ್ನೆ ಉದ್ಭವಿಸಿದ ಗಳಿಗೆಗಳಲ್ಲಿ ಈ ಹಕ್ಕಿನ ಸಾಂವಿಧಾನಿಕ ಮತ್ತು ನೈತಿಕ ರಕ್ಷಣೆಗಾಗಿ ಅದನ್ನು ನಿರ್ಬಂಧಿಸುವ ಅಧಿಕಾರವನ್ನೂ ಸರ್ಕಾರ ಹೊಂದಿದೆ.
ಆದಾಗ್ಯೂ, ಈಗಿನ ಆಡಳಿತಾಧಿಕಾರಿ ನೇಮಕದ ನಿರ್ಧಾರ ಕೇವಲ ತಾತ್ಕಾಲಿಕ ಹಾಗೂ ಹಂಗಾಮಿ ವ್ಯವಸ್ಥೆ. ಹೀಗಾಗಿ, ಸಂವಿಧಾನದ 162ನೇ ವಿಧಿಯ ಅನುಸಾರ ಚಿತ್ರದುರ್ಗದ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸಂವಿಧಾನಬಾಹಿರವಲ್ಲ ಎಂದು ಪ್ರತಿಪಾದಿಸಿದರು.
ಅರ್ಜಿದಾರರ ಪರ ವಕೀಲರು ಮುರುಘಾಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಸ್ವಾಮಿಜಿ ಪೋಕ್ಸೊ ಪ್ರಕರಣ ಸಂಬಂಧ 2022ರ ಸೆಪ್ಟೆಂಬರ್ 1ರಿಂದ ನ್ಯಾಯಾಂಗ ಬಂಧನದಲ್ಲಿದ್ದು, ಸದ್ಯ ಮಠದ ಉಸ್ತುವಾರಿ ಬೇರೆಯವರಿಗೆ ವಹಿಸಲಾಗಿದೆ. ಅದನ್ನೇ ನೆಪ ಮಾಡಿಕೊಂಡು ಸರಕಾರ ಆಡಳಿತಾಧಿಕಾರಿಯನ್ನು ನೇಮಿಸಿ ಅಧಿಕಾರ ಚಲಾಯಿಸಿದೆ ಎಂದು ವಿವರಿಸಿದರು.

ನೇಮಕ ಸಂವಿಧಾನಬಾಹಿರ
ಒಂದು ವೇಳೆ ಮಠ ಮತ್ತು ಟ್ರಸ್ಟ್ ವ್ಯವಹಾರಗಳು ಸೂಕ್ತ ರೀತಿಯಲ್ಲಿನಡೆಯುತ್ತಿಲ್ಲ ಎಂದಾದರೆ ಸಿವಿಲ್ ಪ್ರಕ್ರಿಯಾ ಸಂಹಿತೆ-1908ರ (ಸಿಪಿಸಿ) ಸೆಕ್ಷನ್ 92ರ ಅನುಸಾರ ಪರಿಹಾರ ಪಡೆಯಲು ಮುಕ್ತ ಅವಕಾಶಗಳಿತ್ತು. ಅದು ಬಿಟ್ಟು ಏಕಾಏಕಿ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿರುವುದು ಸಂವಿಧಾನಬಾಹಿರ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ, ಪೋಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದು, ರಾಜ್ಯ ಸರ್ಕಾರ ಪಿ. ಎಸ್. ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಅವರು 2022ರ ಡಿಸೆಂಬರ್ 15ರಂದು ಅಧಿಕಾರ ಸ್ವೀಕರಿಸಿದ್ದಾರೆ. ಸರ್ಕಾರದ ನಡೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿದೆ.

ಆರೋಪಿ ನ್ಯಾಯಾಂಗ ಬಂಧನದಲ್ಲಿ
ಪೀಠಾಧಿಪತಿಯು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ (ಪೋಕ್ಸೊ) ಮತ್ತು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪ ಹೊತ್ತು 2022ರ ಸೆಪ್ಟೆಂಬರ್ 1ರಿಂದ ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಆರೋಪ ಪಟ್ಟಿಯಲ್ಲಿ ಕಾಣಿಸಲಾಗಿರುವ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ ಅನ್ವಯ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥ ಅಥವಾ ಉದ್ಯೋಗಿ ಕ್ರಿಮಿನಲ್ ಪ್ರಕರಣದಲ್ಲಿ ಆರೋಪ ಪಟ್ಟಿಯಲ್ಲಿ ಆರೋಪಿಯಾಗಿ ಒಳಗೊಂಡು ವಿಚಾರಣೆ ಎದುರಿಸುವಂತಾಗಿದ್ದರೆ ಅಂತಹವರು ವಿಚಾರಣೆ ಮುಗಿಯುವತನಕ ತಾವು ಹೊಂದಿರುವ ಅಧಿಕಾರ ಚಲಾಯಿಸುವಂತಿಲ್ಲ ಎಂಬ ಆಪಾದನೆಗೂ ಒಳಗಾಗಿದ್ದಾರೆ.












Click it and Unblock the Notifications