ನಾಳೆಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಎಂದ ಜಮೀರ್
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿ ಹಲವು ಸಮಸ್ಯೆಗಲು ತಲೆದೂರಿವೆ. ಹಲವರು ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದು, ಸಚಿವ ಸಂಪುಟ ವಿಸ್ತರಣೆಗೆ ನಿರೀಕ್ಷೆಯಲ್ಲಿದ್ದಾರೆ. ಈ ಹೊತ್ತಿನಲ್ಲೇ ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಜೀನಾಮೆ ನೀಡುವುದಾಗಿ ಮಾತನಾಡಿದ್ದಾರೆ. ತಮ್ಮ ಹೇಳಿಕೆಗಳಿಂದಲೇ ಎಲ್ಲರ ಮನೆಮಾತಾಗಿರುವ ಅವರು ರಾಜೀನಾಮೆ ಹಾಗೂ ರಾಜಕೀಯ ನಿವೃತ್ತಿ ಬಗ್ಗೆಯೂ ಮಾತನಾಡಿ ಸಂಚಲನ ಸೃಷ್ಟಿಸಿದ್ದಾರೆ.
ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಸ್ಲಂ ಬೋರ್ಡ್‌ನಿಂದ ಮನೆಗಳನ್ನು ಮಂಜೂರು ಮಾಡಲಾಗಿತ್ತು. ಆ ನಂತರ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ, ಬಿಜೆಪಿ ಸರ್ಕಾರ ತಮ್ಮ ಅವಧಿಯಲ್ಲಿ ಒಂದೇ ಒಂದು ಮನೆಯನ್ನು ಮಂಜೂರು ಮಾಡಿಲ್ಲ. ಈ ಹಿಂದೆ ನಾವೇ ಮಂಜೂರು ಮಾಡಿರುವ ಮನೆ ನಿರ್ಮಾಣ ಮಾಡಲು ಸುಮಾರು ಎಂಟು ವರ್ಷ ಬೇಕಾಯಿತು. ಬಿಜೆಪಿ ತಮ್ಮ ಅವಧಿಯಲ್ಲಿ ಒಂದೇ ಒಂದು ಮನೆಯನ್ನ ನೀಡಿರುವುದು ಸಾಬೀತು ಪಡಿಸಿದರೆ ನಾನು ನಾಳೆಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ರಾಜಕೀಯದಿಂದಲೂ ನಿವೃತ್ತಿ ಪಡೆಯುತ್ತೇನೆ ಎಂದು ಬಿಜೆಪಿಗೆ ಸವಾಲ್ ಹಾಕಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಸೇರಿದಂತೆ ಯಾವುದೇ ಯೋಜನೆಯಡಿ ಬಿಜೆಪಿಯವರು ತಮ್ಮ ಸರ್ಕಾರದ ಅವಧಿಯಲ್ಲಿ ಒಂದು ಮನೆ ನಿರ್ಮಿಸಿ ಕೊಟ್ಟಿದ್ದನ್ನ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಸುಮಾರು 1.80 ಲಕ್ಷ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಅದರಲ್ಲಿ ಕಳೆದ ವರ್ಷ 36,789 ಮನೆಗಳನ್ನು ಹಂಚಿಕೆ ಮಾಡಿದ್ದೇವೆ. ಈ ವರ್ಷ 42,345 ಮನೆಗಳನ್ನು ಹಂಚಿಕೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ನಮ್ಮ ಕಾಂಗ್ರೆಸ್ ಪಕ್ಷವು ತನ್ನ ಸಾಧನೆ ಆಧರಿಸಿ ಚುನಾವಣೆಯಲ್ಲಿ ಮತ ಕೇಳುತ್ತದೆ. ಬಿಜೆಪಿಯವರು ಹಿಂದೂ ಮುಸ್ಲಿಮರ ಹೆಸರಿನಲ್ಲಿ ಚುನಾವಣೆಗೆ ಬರುತ್ತಾರೆ. ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿಯೇ ಇಲ್ಲ, ಅವರಿಗೆ ಅಧಿಕಾರ ಮಾತ್ರವೇ ಬೇಕು. ಮತ್ತೊಂದೆಡೆ ಹೆಚ್‌ಡಿ ಕುಮಾರಸ್ವಾಮಿ ಒಂದೇ ಕಡೆ ಇರಲು ಸಾಧ್ಯವಿಲ್ಲ, ಹೀಗಾಗಿ ಬಿಜೆಪಿ, ಜೆಡಿಎಸ್ ಮೈತ್ರಿಯು ಹೆಚ್ಚು ದಿನ ಉಳಿಯುವುದು ಅನುಮಾನ ಎಂದೂ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಪುಟ್ಟ ಕಂದಮ್ಮನ ಮೇಲೆ ನಡೆದಿರುವ ಅತ್ಯಾಚಾರ ಯತ್ನದ ಬಗ್ಗೆಯೂ ಜಮೀರ್ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಬಗ್ಗೆ ಕೇಳಿ ನನ್ನ ಮೈಯೆಲ್ಲ ಜುಮ್ ಅಂತು. ಅದು ನಾಲ್ಕು ವರ್ಷದ ಮಗು ಕಣ್ರೀ, ನನಗೆ ಆ ಸಿಸಿಟಿವಿ ವಿಡಿಯೋ ನೋಡಲು ನನ್ನಿಂದ ಆಗಲಿಲ್ಲ. ಅಪರಾಧಿಗೆ ಸೂಕ್ತ ಶಿಕ್ಷೆಯಾಗಬೇಕು. ನ್ಯಾಯಾಲಯದ ಆದೇಶಕ್ಕೆ ಕಾಯುತ್ತಾ ಕುಳಿತರೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೋರ್ಟ್ ಕೂಡ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವ ಜಮೀರ್ ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications