ಕಾಂಗ್ರೆಸ್ ನ ಮನೆಯಲ್ಲಿ ಯಜಮಾನನೆ ಇಲ್ಲ, ನಮ್ಮ ಪಕ್ಷದ ಯಜಮಾನ ನರೇಂದ್ರ ಮೋದಿ: ಆನಂದ್ ಸಿಂಗ್
ಕಾಂಗ್ರೆಸ್ ಪಕ್ಷ ಮುಗಿದು ಹೋಗಿದೆ, ಮುಂಬರುವ ಚುನಾವಣೆಯಲ್ಲಿ ಜಾಗರುಕರಾಗಿ ಮತ ನೀಡಬೇಕಿದೆ ಎಂದು ಆನಂದ್ ಸಿಂಗ್ ಹೇಳಿದ್ದಾರೆ.
ಕೊಪ್ಪಳ,ಫೆಬ್ರವರಿ14: ಕಾಂಗ್ರೆಸ್ ನ ಮನೆಯಲ್ಲಿ ಯಜಮಾನನೆ ಇಲ್ಲ. ಯಜಮಾನನೆ ಇಲ್ಲದ ಮನೆ ಹೇಗಾಗತ್ತೆ ಹೇಳಿ. ನಮ್ಮ ಪಕ್ಷದ ಯಜಮಾನ ನರೇಂದ್ರ ಮೋದಿ ಎಂದು ಸಚಿವ ಆನಂದ ಸಿಂಗ್ ಹೇಳಿದರು.
ಈ ಕುರಿತು ಮಂಗಳವಾರ ಕೊಪ್ಪಳ ಜಿಲ್ಲೆಯ ಕುಕನೂರಿನನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಚಿವ ಆನಂದ ಸಿಂಗ್ ಮಾತನಾಡಿ, ಕಾಂಗ್ರೆಸ್ ನವರು ಚುನಾವಣೆ ಬಂದಾಗ ಮಾತ್ರ ಬರ್ತಾರೆ. ಒಂದು ತಿಂಗಳು, ಬಾಡೂಟ, ಮಾಂಸದೂಟ ಎಲ್ಲಾ ಮಾಡ್ತಾರೆ, ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಮುಗಿದ ಮೇಲೆ ಯಾರು ಬರಲ್ಲ ಎಂದು ಹೇಳಿದರು.
ಮುಂಬರುವ ಚುನಾವಣೆಯಲ್ಲಿನ ನಮ್ಮ ಸಂಕಲ್ಪದ ವಿಚಾರವಾಗಿ ಅಭಿಮಾನ ಮಾಡಲಾಗುತ್ತದೆ. ಮತದಾರರ ಬಳಿ ನಮ್ಮ ಯೋಜನೆಗಳನ್ನ ತಲುಪಿಸಲು ಈ ಯಾತ್ರೆಗಳನ್ನ ಆರಂಭ ಮಾಡಿದ್ದೇವೆ. ಕಾಂಗ್ರೆಸ್ ಅದೇನೊ ಜೋಡೊ ಅಂತ ಮಾಡಿದ್ರು, ಎನ್ ಜೋಡೊ ಮಾಡಿದ್ರೋ ತೋಡೊ ಮಾಡಿದ್ರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ದೇಶವನ್ನ ಮುನ್ನಡೆಸುವ ಆಲೋಚನೆ ಕಲ್ಪನೆ ಇರಬೇಕು ಎನ್ನುವದನ್ನ ಹೇಳಿದ್ದೇನೆ. ಜೋಡೊ ಯಾಕೆ ಮಾಡಿದರು ಅಂತ ಮಾತ್ರ ಗೊತ್ತಿಲ್ಲ. ದೇಶವನ್ನ ಮುನ್ನಡೆಸುವ ವ್ಯಕ್ತಿ ಅಂದ್ರೆ ಅದು ನರೇಂದ್ರ ಮೋದಿ. ದೇಶದ ಕಟ್ಟ ಕಡೆಯ ವ್ಯಕ್ತಿಯ ಅಭಿವೃದ್ಧಿ ಗೆ ನರೇಂದ್ರ ಮೋದಿ ಶಪಥ ಮಾಡಿದ್ದಾರೆ. ಅದೇನೊ ಧ್ವನಿ ಮಾಡುತ್ತಿದ್ದಾರೆ. ಅದರಲ್ಲಿ ಪ್ರಜೆಗಳು ಇಲ್ಲ, ದ್ವನಿನೂ ಇಲ್ಲ. ಇವರ ಪಕ್ಷದಲ್ಲಿ ಗುದ್ದಾಟ, ನಾನು ಸಿ ಎಂ ನೀನು ಸಿಎಂ, ನನ್ನ ಗುಂಪು ನಿನ್ನ ಗುಂಪು ಎಂದು ಕಾಂಗ್ರೆಸ್ ನಾಯಕರ ವಿರುದ್ದ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಮುಗಿದು ಹೋಗಿದೆ, ಮುಂಬರುವ ಚುನಾವಣೆಯಲ್ಲಿ ಜಾಗರುಕರಾಗಿ ಮತ ನೀಡಬೇಕಿದೆ. ಕಾಂಗ್ರೆಸ್ ನಲ್ಲಿ ಕಾರ್ಯಕ್ರಮದ ವೇದಿಕೆಯ ಮೇಲೆ ಕುಳಿತುಕೊಳ್ಳಲು ಗುದ್ದಾಡಿ ಕಾರ್ಯಕ್ರಮ ರದ್ದಾಗಿವೆ. ಆದರೆ, ನಮ್ಮ ಪಕ್ಷದ ಕಾರ್ಯಕರ್ತರು ಪಕ್ಷ ರಕ್ಷಣೆಗೆ ಯಾವಾಗಲು ಲೋಡೆನ್ ಗನ್ ತರ ಇರುತ್ತರೆ ಎಂದು ಹೇಳಿದರು.
ಈ ವೇಳೆ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರ ಹಲವು ಕೆಲಸ ಮಾಡಿದೆ. ಬಿಜೆಪಿ ಸರ್ಕಾರದ ಅವದಿಯಲ್ಲೆ ಗದಗ ವಾಡಿ ರೇಲ್ವೆ ಲೈನ್ ನಿರ್ಮಾಣ ವಾಗಿದೆ. ಬೆಂಗಳೂರಿನಂತಹ ಸಿಟಿಗಳಲ್ಲಿ ಆದಂತಹ ಪ್ಲೈ ಓವರ್ ಗಳು ಕೂಡಾ ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಆಗಿವೆ. ನಮ್ಮ ಜಿಲ್ಲೆಗೆ ಅತಿಹೆಚ್ಚು ಅನುದಾನ ಕೊಟ್ಟಿರೋದು ನಮ್ಮ ಬಸವರಾಜ ಬೊಮ್ಮಾಯಿ ಸರ್ಕಾರ. ನಮ್ಮ ಜಿಲ್ಲೆಯ ನೀರಾವರಿ ಸೇರಿ ಹಲವು ಯೋಜನೆಗಳಿಗೆ ಸಾಕಷ್ಠು ಅನುದಾನ ಬಿಡುಗಡೆಯಾಗಿದೆ.
484 ಕೋಟಿ ಅನುಧಾನವನ್ನ ರೈತರ ಮಕ್ಕಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಮೀಸಲಿಡಲಾಗಿದೆ. ನರೇಂದ್ರ ಮೋದಿಯವರ ಸರ್ಕಾರ ಮತ್ತು ಬಸವರಾಜ ಉತ್ತಮ ಆಡಳಿತವನ್ನ ನೀಡಿದೆ. ಕಾಂಗ್ರೆಸ್ ಸರ್ಕಾರದ ಅವದಿಯಲ್ಲಿ ಆದ ಹಗರಣಗಳು ಬಯಲಿಗೆ ಬರಬಾರದು ಎಂಬ ಕಾರಣಕ್ಕೆ ಲೋಕಾಯುಕ್ತ ಮುಚ್ಚಲಾಗಿತ್ತು. ಕಾಂಗ್ರೆಸ್ ಸರ್ಕಾರ ಕೇವಲ ಭ್ರಷ್ಟಾಚಾರ ಮಾಡಿಕೊಂಡು ಬಂದಿದೆ. ನಮ್ಮ ಪಕ್ಷ ಜನಪರ ಆಡಳಿತ ನೀಡಿದೆ, ನಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸುವ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಮತ್ತೆ ಡಬಲ್ ಎಂಜಿನ್ ಸರ್ಕಾರ ಬರಬೇಕು ಎಂದು ಹೇಳಿದರು.












Click it and Unblock the Notifications