ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ್ದ ಯುವಕ ನಿಫಾ ವೈರಸ್‌ನಿಂದ ಸಾವು: ಮತ್ತೆ 5 ಮಂದಿಗೆ ಜ್ವರ
ಬೆಂಗಳೂರು, ಸೆಪ್ಟೆಂಬರ್ 16: ವಾತಾವರಣ ಬದಲಾವಣೆ ಹಾಗೂ ಕೆಲವು ಕಾರಣಗಳಿಂದ ರಾಜ್ಯದಲ್ಲಿ ಜ್ವರ, ಶೀತ, ಕೆಮ್ಮು ಜ್ವರ ಅಬ್ಬರ ಜೋರಾಗಿದೆ. ರಾಜ್ಯದ ಪ್ರತಿ ಜಿಲ್ಲೆ ಪ್ರತಿ ಗ್ರಾಮದಲ್ಲಿಯೂ ವೈರಲ್ ಫೀವರ್ ಕಾಡುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವ ಈ ಜ್ವರದಿಂದ ಜನ ಹೈರಾಣಾಗಿ ಹೋಗಿದ್ದಾರೆ. ಚಳಿ, ಜ್ವರ, ಅತಿಯಾದ ತಲೆನೋವು, ಮೈ-ಕೈ ನೋವು, ಸ್ನಾಯು ಸೆಳೆತ, ಅತಿಯಾದ ಸುಸ್ತು ಈ ಜ್ವರದ ಲಕ್ಷಣಗಳಾಗಿವೆ.
ಸದ್ಯ ಕಾಡುತ್ತಿರುವ ಈ ವೈರಲ್ ಫೀವರ್ ದೊಡ್ಡವರನ್ನು ಮಾತ್ರವಲ್ಲದೇ ಚಿಕ್ಕ ಮಕ್ಕಳಿಗೂ ಕೂಡ ಅತಿಯಾಗಿ ಭಾದಿಸುತ್ತಿದೆ. ಮಕ್ಕಳಲ್ಲಿ ಮೂರು ದಿನಗಳ ಕಾಲ ಜ್ವರ ಕಾಣಿಸಿಕೊಳ್ಳುತ್ತಿದ್ದು, ಅತಿಯಾದ ಕೆಮ್ಮು ಹಾಗೂ ಸುಸ್ತು ಕಾಡುತ್ತಿದೆ. ಆಸ್ಪತ್ರೆಗಳು ಜ್ವರದ ರೋಗಿಗಳಿಂದ ತುಂಬಿದೆ. ಈ ವೈರಲ್ ಫೀವರ್ ಜೊತೆಗೆ ಡೆಂಗ್ಯೂ ಕೂಡ ಹೆಚ್ಚಾಗಿದೆ. ಈ ಎಲ್ಲಾ ಆತಂಕದ ನಡುವೆ ಕಾರ್ನಾಟಕ ಅದರಲ್ಲೂ ಬೆಂಗಳೂರಿನಲ್ಲಿ ಮತ್ತೊಂದು ಜ್ವರದ ಆತಂಕ ಹೆಚ್ಚಾಗಿದೆ.

ಕೇರಳದಲ್ಲಿ ಮಾರಣಾಂತಿಕ ಕಾಯಿಲೆಯಾಗಿ ಕಾಡುತ್ತಿರುವ ನಿಫಾ ವೈರಸ್‌ಗೆ ಮತ್ತೊಬ್ಬ ಯುವಕ ಬಲಿಯಾಗಿದ್ದಾನೆ. ಆತಂಕಕಾರಿ ವಿಚಾರ ಎಂದರೆ ಈ ಯುವಕ ಕರ್ನಾಟಕದಿಂದ ಕೇರಳಕ್ಕೆ ತೆರಳಿದ ಕೆಲವೇ ದಿನಗಳಲ್ಲಿ ನಿಫಾ ವೈರಸ್‌ನಿಂದ ಸಾವನ್ನಪ್ಪಿದೆ. 24 ವರ್ಷದ ಯುವಕನೊಬ್ಬ ಜ್ವರದ ಕಾರಣ ಬೆಂಗಳೂರಿನಿಂದ ಕೇರಳಕ್ಕೆ ಹೋಗಿದ್ದ. ಜ್ವರ ಹೆಚ್ಚಾಗುತ್ತಿದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅತಿಯಾದ ಸುಸ್ತಿನಿಂದ ಯುವಕ ಸೆಪ್ಟೆಂಬರ್ 9ರಂದು ನಿಧನರಾಗಿದ್ದ.
ಸಾಯುವ ಮೊದಲು ಯುವಕನಿಗೆ ಅತಿಯಾದ ಜ್ವರವಿದ್ದ ಕಾರಣ ವಿವಿಧ ಪರೀಕ್ಷೆಗಳನ್ನು ಮಾಡಲಾಗಿತ್ತು. ಇದೀಗ ಆತನ ವರದಿಗಳು ಬಂದಿದ್ದು, ಯುವಕ ನಿಫಾ ಸೋಂಕಿನಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ. ಈತನಿಗೆ ಬೆಂಗಳೂರಿನಲ್ಲಿಯೇ ಮೊದಲು ಜ್ವರ ಬಂದ ಕಾರಣ ಇದೀಗ ಕರ್ನಾಟಕದಲ್ಲಿಯೂ ಆತಂಕ ಮನೆ ಮಾಡಿದೆ.

ಈ ಬಗ್ಗೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾತನಾಡಿದ್ದು, 'ಬೆಂಗಳೂರಿನಿಂದ ರಾಜ್ಯಕ್ಕೆ ಬಂದಿದ್ದ ಯುವಕ ಸೆಪ್ಟೆಂಬರ್ 9ರಂದು ಮಲಪ್ಪುರಂನಲ್ಲಿ ಸಾವನ್ನಪ್ಪಿದ್ದಾನೆ. ಆತನ ಸಾವಿನ ಬಗ್ಗೆ ಅನುಮಾನ ಬಂದ ಕಾರಣ ಖಾಸಗಿ ಆಸ್ಪತ್ರೆಯಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ವರದಿ ಬಂದಿದ್ದು ನಿಫಾ ವೈರಸ್ ಸೋಂಕು ದೃಢಪಟ್ಟಿದೆ ಎಂದು ಹೇಳಿದ್ದಾರೆ.
'ಮೃತ ವ್ಯಕ್ತಿ ಬೆಂಗಳೂರಿನಲ್ಲಿದ್ದ ವಿದ್ಯಾರ್ಥಿ ಆಗಿದ್ದು, ಸದ್ಯಕ್ಕೆ 151 ಮಂದಿ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ. ಈ ಪೈಕಿ 5 ಮಂದಿಗೆ ಜ್ವರದ ಲಕ್ಷಣಗಳು ಕಂಡು ಬಂದಿವೆ. ಈ ಹಿನ್ನೆಲೆಯಲ್ಲಿ ಕೇರಳ ಹಾಗೂ ಬೆಂಗಳೂರಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications