ಲೋಕಸಭೆ ಸೋಲು : ಕೆಪಿಸಿಸಿಯಿಂದ ಸತ್ಯ ಶೋಧನಾ ಸಮಿತಿ ರಚನೆ
ಬೆಂಗಳೂರು, ಜೂನ್ 03 : ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ. ಸೋಲಿಗೆ ಕಾರಣವನ್ನು ಪತ್ತೆ ಹಚ್ಚಲು ಕೆಪಿಸಿಸಿ ಸತ್ಯ ಶೋಧನಾ ಸಮಿತಿಯನ್ನು ರಚನೆ ಮಾಡಿದೆ.
ಸೋಮವಾರ ಕೆಪಿಸಿಸಿ ಸತ್ಯ ಶೋಧನಾ ಸಮಿತಿಯನ್ನು ರಚನೆ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಸೂಚನೆಯಂತೆ ಸಮಿತಿ ರಚನೆ ಮಾಡಲಾಗಿದೆ. ಸೋಲಿಗೆ ಕಾರಣವನ್ನು ಪತ್ತೆ ಹಚ್ಚಿ ಸಮಿತಿ ಸಮಗ್ರವಾದ ವರದಿಯನ್ನು ಕೆಪಿಸಿಸಿಗೆ ಸಲ್ಲಿಸಲಿದೆ.
ಸತ್ಯ ಶೋಧನಾ ಸಮಿತಿ ಸದಸ್ಯರು ಪ್ರತಿ ಜಿಲ್ಲೆಗೆ ಭೇಟಿ ನೀಡಿ, ವಿಧಾನಸಭಾವಾರು ಸಭೆಗಳನ್ನು ಆಯೋಜಿಸಿ, ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗಿನ ಮುಖಂಡರನ್ನು ಸಂಪರ್ಕಿಸಿ, ಪಕ್ಷಕ್ಕೆ ಹಿನ್ನಡೆಯಾಗಲು ಕಾರಣಗಳನ್ನು ತಿಳಿದುಕೊಂಡು ಮುಂದೆ ಪಕ್ಷ ಸಂಘಟನೆಗೆ ಸಲಹೆಗಳನ್ನು ಪಡೆಯಲಿದ್ದಾರೆ.

ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣಗಳು, ಪಕ್ಷದ ಬಗ್ಗೆ ಜನರಿಗೆ ಇರುವ ಅನಿಸಿಕೆಗಳನ್ನು ಕೂಲಂಕುಷವಾಗಿ ತಿಳಿದುಕೊಳ್ಳಲು ಸಮಿತಿ ರಚನೆ ಮಾಡಲಾಗಿದೆ. ಲೋಕಸಭಾ ಚುನಾವಣೆ, 2018ರ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಕಾರಣ ಸಮಿತಿ ರಚನೆ ಮಾಡಲಾಗಿದ್ದು, ವರದಿ ಕೇಳಲಾಗಿದೆ.
ಸಮಿತಿಯ ಸದಸ್ಯರು
* ವಿ.ಆರ್.ಸುದರ್ಶನ್, ಉಪಾಧ್ಯಕ್ಷರು ಕೆಪಿಸಿಸಿ
* ಬಸವರಾಜ ರಾಯರೆಡ್ಡಿ, ಮಾಜಿ ಸಚಿವರು
* ವೀರಕುಮಾರ್ ಪಾಟೀಲ್ ಉಪಾಧ್ಯಕ್ಷರು ಕೆಪಿಸಿಸಿ
* ನಜೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯರು
* ಧ್ರುವ ನಾರಾಯಾಣ, ಮಾಜಿ ಸಂಸದರು
2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿತ್ತು. 21 ಕ್ಷೇತ್ರಗಳಲ್ಲಿ ಕಣಕ್ಕಿಳಿದು, 7 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು.
ಆದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಹೊರತುಪಡಿಸಿ ಉಳಿದ ಯಾವ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿರಲಿಲ್ಲ. ಪಕ್ಷದ ಹಿರಿಯ ನಾಯಕರು ಸಹ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.












Click it and Unblock the Notifications