ಸಂಸದೆ ಸುಮಲತಾ ನನ್ನ ಅಕ್ಕ ಇದ್ದಂತೆ, ಸಂಘರ್ಷ ಮುಂದುವರಿಸಲ್ಲ- ಕುಮಾರಸ್ವಾಮಿ
ಮಂಡ್ಯ, ಮಾರ್ಚ್ 15: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಗಳಾಗುತ್ತಿದೆ. ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಈ ಬಾರಿ ಬಿಜೆಪಿ-ಜೆಡಿಎಸ್ ಒಂದಾಗಿದೆ. ಅದೇ ರೀತಿ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಂಸದೆ ಸುಮಲತಾ ಜೊತೆಗಿದ್ದ ಸಂಘರ್ಷಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅಂತ್ಯ ಹಾಡಲು ಮುಂದಾಗಿದ್ದಾರೆ.
ಸಂಸದೆ ಸುಮಲತಾ ಅಂಬರೀಶ್ ನನ್ನ ಅಕ್ಕ ಇದ್ದಂತೆ, ನಮ್ಮಿಬ್ಬರ ನಡುವಿನ ಸಂಘರ್ಷವನ್ನು ಮುಂದುವರಿಸಿಕೊಂಡು ಹೋಗಲ್ಲ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದರ ಸ್ನೇಹದ ಜೊತೆಗೆ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.

ಲೋಕಸಭೆ ಚುನಾವಣೆ ಸಂಬಂಧ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಕಾರ್ಯಕರ್ತರ ಸಂಗ್ರಹ ಸಭೆಯಲ್ಲಿ ಮಾತನಾಡಿದ ಅವರು, "ಅಂಬರೀಶ್ ನಾವೆಲ್ಲ ಒಟ್ಟಾಗಿ, ಪ್ರೀತಿಯಿಂದ ಬೆಳೆದವರು. ನಮ್ಮ ಪಕ್ಷದಿಂದಲೇ ಅಂಬರೀಶ್ ಪಾರ್ಲಿಮೆಂಟ್ ಪ್ರವೇಶ ಮಾಡಿದ್ದರು. ನಾನು ಸಿಎಂ ಆಗಿದ್ದಾಗಲೇ ರಾಜ್‌ಕುಮಾರ್, ಅಂಬರೀಶ್ ನಿಧನರಾದರು. ರಾಜ್ಕುಮಾರ್ ಸಮಾಧಿ ಮಾಡಿದ್ದು ನಾನು. ಅಂಬರೀಶ್ ಸಮಾಧಿಗೂ ಜಾಗ ಗುರುತಿಸಿ, ಗೌರವ ಕೊಟ್ಟಿದ್ದೇನೆ".
"ಅಂಬರೀಶ್ ನನ್ನ ಆತ್ಮೀಯ ಸ್ನೇಹಿತ. ಆತನಿಗೆ ನಮನ ಸಲ್ಲಿಸಬೇಕಾಗಿದ್ದು ನಮ್ಮ ಕರ್ತವ್ಯ. ಅಂಬರೀಶ್ ಬಡ ಕುಟುಂಬದಿಂದ ಸಿನಿಮಾರಂಗದಲ್ಲಿ ಸಾಧನೆ ಮಾಡಿದ ವ್ಯಕ್ತಿ. ಅಂಬರೀಶ್‌ಗೆ ಗೌರವ ನೀಡುವ ಮೂಲಕ ಮಂಡ್ಯದ ಜನರಿಗೂ ಗೌರವ ನೀಡಿದ್ದೇವೆ. ಸುಮಲತಾ ಅಂಬರೀಶ್ ಅವರು ನಮ್ಮ ಅಕ್ಕ ಇದ್ದಂತೆ" ಎಂದಿದ್ದಾರೆ.
ಇನ್ನು "ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಬೇಕು ಎನ್ನುವ ನಿರ್ಣಯ ಆಗಬೇಕು. ನಿಮ್ಮ ಭಾವನೆಗಳಿಗೆ ಎಂದೂ ಅಪಚಾರ ಮಾಡಲ್ಲ. ಯಾರೂ ಅನ್ಯತಾ ಭಾವಿಸಬೇಡಿ. ಹಲವಾರು ಸಭೆಗಳನ್ನು ಮಾಡಿದ್ದಾರೆ. ಎಲ್ಲರೂ ಕುಳಿತು ಹಲವಾರು ವಿಷಯ ಪ್ರಸ್ತಾಪ ಮಾಡಿದ್ದೇವೆ. ಜಿಟಿಡಿ ಅವರ ನಾಯಕತ್ವದಲ್ಲೇ ಉತ್ತಮವಾದ ರೀತಿಯಲ್ಲಿ ಚರ್ಚೆ ಮಾಡಿದ್ದೇವೆ. ಎಲ್ಲ ಲೋಪದೋಶಗಳನ್ನೂ ಬಗೆಹರಿಸಿ ನಿಮ್ಮ ದುಡಿಮೆಗೆ ಅಪಚಾರ ಮಾಡಬಾರದು ಎಂಬ ನಿರ್ಣಯ ಮಾಡಿಕೊಂಡಿದ್ದೇವೆ" ಎಂದು ಕಾರ್ಯಕರ್ತರಿಗೆ ತಿಳಿಸಿದರು.

"ಜಿಲ್ಲೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಆಗಬಾರದು. ಮಂಡ್ಯ ಜಿಲ್ಲೆಯ ಜನತೆ ನಮಗೆ ಅನ್ಯಾಯ ಮಾಡಿಲ್ಲ. ಈಗಲೂ ಸಹ ನಮಗೆ ಸಹಕಾರ ಕೊಟ್ಟಿದ್ದಾರೆ. ರಾಜಕಾರಣದಲ್ಲಿ ಎಲ್ಲೋ ಒಂದು ಕಡೆ ಅಸಮಾಧಾನ ಬಂದಿರಬಹುದು. ಬೆಳೆಸಿರುವಂತಹ ನಿಮ್ಮ ಮುಂದೆ ಜಿಲ್ಲೆಯ ಜನರಿಗೆ ಸ್ಪಷ್ಟವಾದ ಮನವಿ ಮಾಡಲು ಬಯಸುತ್ತೇನೆ. ನಮ್ಮಿಂದ ತಪ್ಪಾಗಿದ್ದರೆ ನಾಗಮಂಗಲದ ಜನ ಸೋಲಿಸಿದ್ದಾರೆ ಎಂದು ಹೇಳಲಾಗದು. ನಮ್ಮಲ್ಲೇ ಕೆಲವು ದೋಷಗಳಾಗಿವೆ. ನಮ್ಮ ತಪ್ಪುಗಳಿಂದ ಚುನಾವಣೆಯಲ್ಲಿ ಹಿನ್ನೆಡೆಯಾಗಿದೆ. ತಪ್ಪು ಮಾಡುವುದು ಸಹಜ. ಅದನ್ನು ತಿದ್ದಿಕೊಳ್ಳುವುದು, ಸರಿಪಡಿಸಿಕೊಳ್ಳುವುದು, ನಮ್ಮ ಕೈಯಲ್ಲಿದೆ. ಕೈ ಜೋಡಿಸಿ ಕೇಳುತ್ತೇನೆ" ಎಂದು ಕಾರ್ಯಕರ್ತರಲ್ಲಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.












Click it and Unblock the Notifications