ಮತ್ತೆ ಚಿಗುರೊಡೆದ ಲಿಂಗಾಯತ ಸಿಎಂ ಕೂಗು: ಕಾಂಗ್ರೆಸ್‌ನಲ್ಲಿ ಲಿಂಗಾಯತರ ಮೂಲೆಗುಂಪು?
ಕಾಂಗ್ರೆಸ್‌ನಲ್ಲಿ ಲಿಂಗಾಯತ ಸಿಎಂ ಕೂಗು ಮತ್ತೆ ಚಿಗುರೊಡೆದಿದೆ. ಜೊತೆಗೆ ಪ್ರಮುಖ ಹುದ್ದೆಗಳನ್ನು ನೀಡುವ ವಿಚಾರದಲ್ಲೂ ಲಿಂಗಾಯರತನ್ನು ಕಡೆಗಣಿಸುತ್ತಿರುವ ಆರೋಪ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೇಳಿ ಬಂದಿದೆ.
ವಿಧಾನಸಭಾ ಚುನಾವಣೆಯಲ್ಲಿ ಬಹುಮತದಿಂದ ಜಯ ಗಳಿಸಿ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಮೇಲೆ ಸದ್ಯ ಜಾತಿ ರಾಜಕಾರಣ ಮಾಡುತ್ತಿರುವ ಆರೋಪ ಕೇಳಿ ಬಂದಿವೆ. ಕಾಂಗ್ರೆಸ್‌ನಲ್ಲಿ ಲಿಂಗಾಯತರಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ ಎಂದು ದೂರಲಾಗುತ್ತಿದೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನೇರವಾಗಿಯೇ ಕಾಂಗ್ರೆಸ್ ಮೇಲೆ ಇಂಥಹದೊಂದು ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ನೀಡುತ್ತಿಲ್ಲ. ಲಿಂಗಾಯತ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳೇ ಸಿಗುತ್ತಿಲ್ಲ ಎಂದು ಅಸಮಾಧಾನಗೊಂಡರು.
ಜೊತೆಗೆ ಅವರು ಲಿಂಗಾಯತ ಸಿಎಂ ಪರ ಧ್ವನಿಯನ್ನು ಕೂಡ ಎತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ. ಸರ್ಕಾರದ ಆಯಾಕಟ್ಟಿನ ಹುದ್ದೆಗಳು ನಮ್ಮ ಸಮಾಜದವರಿಗೆ ಕೊಟ್ಟಿಲ್ಲ. ಈ ಹಿಂದೆ ಎಲ್ಲರೂ ಚೆನ್ನಾಗಿದ್ದರು. ನಿಜಲಿಂಗಪ್ಪ, ಜೆ.ಎಚ್.ಪಾಟೀಲರು ಇದ್ದಾಗ ಎಲ್ಲರೂ ಚೆನ್ನಾಗಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯವಾದ ಹುದ್ದೆಗಳನ್ನು ಬಹಳಷ್ಟು ಜನರಿಗೆ ಕೊಟ್ಟಿಲ್ಲ. ಡಿಸಿಎಂ ತೆಗೆದುಕೊಂಡು ಏನು ಮಾಡಬೇಕು. ಆದರೆ ಸಿಎಂ ಆಗಬೇಕು. ಯಾವಾಗಲೂ ಸಿಎಂ ಹುದ್ದೆಗೆ ನಮ್ಮ ಪ್ರಸ್ತಾಪ ಇದ್ದೇ ಇರುತ್ತದೆ ಎಂದು ಹೇಳಿದರು. ಲಿಂಗಾಯತ ಸಮುದಾಯಕ್ಕೂ ಡಿಸಿಎಂ ಹುದ್ದೆ ನೀಡಬೇಕು ಎಂಬ ಮಾತು ಕಾಂಗ್ರೆಸ್ ನಾಯಕರಿಂದಲೇ ಈ ಹಿಂದೆ ಕೇಳಿ ಬಂದಿತ್ತು. ಈಗ ಡಿಸಿಎಂ ಆಗಿ ಏನು ಮಾಡಬೇಕು. ಆದರೆ ಸಿಎಂ ಆಗಬೇಕು ಎನ್ನುವ ಮೂಲಕ ಶಾಮನೂರು ಶಿವಶಂಕರಪ್ಪ ಲಿಂಗಾಯತ ಸಿಎಂ ಪರ ಧ್ವನಿ ಎತ್ತಿದ್ದಾರೆ.
ಮಧ್ಯ ಕರ್ನಾಟಕ ಪ್ರದೇಶದ ಅತ್ಯಂತ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾದ ಲಿಂಗಾಯತ ಸಮುದಾಯದ 92 ವರ್ಷ ವಯಸ್ಸಿನ ನಾಯಕರ ಬೇಡಿಕೆಯು ದಾವಣಗೆರೆ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಯಡಿಯೂರಪ್ಪ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಡೆ ವಾಲಿತ್ತು. ಚುನಾವಣೆಯಲ್ಲಿ 46 ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ 37 ಅಭ್ಯರ್ಥಿಗಳು ಗೆದ್ದಿದ್ದಾರೆ. ಬಿಜೆಪಿ 69 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಆದರೆ 15 ಮಂದಿ ಮಾತ್ರ ಗೆದ್ದಿದ್ದಾರೆ.
ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ್ದರಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸಿದ್ದರಾಮಯ್ಯ ಆಪ್ತರಾದ ರಾಜಣ್ಣ ಮೂರು ಉಪ ಮುಖ್ಯಮಂತ್ರಿ ಸೃಷ್ಟಿ ಪರ ಬ್ಯಾಟಿಂಗ್ ಮಾಡುತ್ತಿದ್ದರೆ, ಉಪಮುಖ್ಯಮಂತ್ರಿ ಶಿವಕುಮಾರ್ ಬಣದ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ರಾಜ್ಯದಲ್ಲಿ ದಲಿತ ಸಿಎಂ ಬಗ್ಗೆ ಮಾತುಗಳನ್ನಾಡುತ್ತಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರ ಬಳಿ ಚರ್ಚೆ ಮಾಡುತ್ತೇನೆ: ಡಿಸಿಎಂ ಡಿ.ಕೆ.ಶಿವಕುಮಾರ್
ಶಾಮನೂರು ಶಿವಶಂಕರಪ್ಪ ಅವರು ಏಕೆ ಹೀಗೆ ಹೇಳಿದ್ದಾರೆ ಎನ್ನುವ ಕುರಿತು ಅವರ ಬಳಿ ಚರ್ಚೆ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು ಮತ್ತು ಲಿಂಗಾಯತರಿಗೆ ಡಿಸಿಎಂ ಸ್ಥಾನ ಬೇಡ ಸಿಎಂ ಸ್ಥಾನ ಬೇಕು ಎನ್ನುವ ಹೇಳಿಕೆಯನ್ನು ಮಾಧ್ಯಮದವರು ಪ್ರಸ್ತಾಪಿಸಿದಾಗ, ಹೇಳಿಕೆ ಬಗ್ಗೆ ನನಗೆ ತಿಳಿದಿಲ್ಲ, ತಿಳಿದುಕೊಂಡು ಮಾತನಾಡುತ್ತೇನೆ ಎಂದರು. ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದ ಮ್ಯಾಜಿಸ್ಟ್ರೇಟ್ ವರದಿಯನ್ನು ಟೀಕಿಸಿದ್ದ ನೀವು ಈಗ ಸ್ವೀಕರಿಸಿದ್ದೀರಿ ಪ್ರಶ್ನೆಗೆ " ಇದಕ್ಕೆ ಗೃಹ ಸಚಿವರಾದ ಪರಮೇಶ್ವರ್ ಅವರು ಉತ್ತರಿಸುತ್ತಾರೆ" ಎಂದು ಹೇಳಿದರು.












Click it and Unblock the Notifications