KEA Seat Scam: ಇಂಜಿನಿಯರಿಂಗ್ 2,300 ಸೀಟು ಬ್ಲಾಕಿಂಗ್ ದಂಧೆ: ಉನ್ನತ ಮಟ್ಟದ ತನಿಖೆ..
ಬೆಂಗಳೂರು, ನವೆಂಬರ್ 11: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವೃತ್ತಿಪರ ಕೋರ್ಸ್‌ಗಳ ನೋಂದಣಿಯಲ್ಲಿ ಮಹತ್ವ ಬದಲಾವಣೆ ತರಲು ಪ್ರಸ್ತಾವನೆ ಸಲ್ಲಿಸಿತ್ತು. ಇದರ ಬೆನ್ನಲ್ಲೆ ಇಂಜಿನಿಯರಿಂಗ್ ಕೋರ್ಸ್‌ಗಳ ಸೀಟು ಹಂಚಿಕೆಯ ಅಕ್ರಮ ವಿರುದ್ಧ ಉನ್ನತ ತನಿಖೆಗೆ ಕೆಇಎ ನಿರ್ಧರಿಸಿದೆ. ನೋಟಿಸ್ ಪಡೆದು ಉತ್ತರಿಸಿರುವ ಬಹುತೇಕ ವಿದ್ಯಾರ್ಥಿಗಳು ಮುಗ್ಧರೆಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೌದು..ವೃತ್ತಿಪರ ಕೋರ್ಸ್ ಆಗಿರುವ ಇಂಜಿನಿಯರಿಂಗ್ 2348 ಸೀಟುಗಳನ್ನು ಬ್ಲಾಕ್ ಮಾಡಿ ಅಕ್ರಮ ಎಸೆಗಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೆಇಎ 2,300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೋಕಾಸ್ ನೋಟಿಸ್ ನೀಡಿತ್ತು. ಸದ್ಯ ನೋಟಿಸ್ ಪಡೆದ ಬಹುತೇಕ ಎಲ್ಲ (ಶೇ.80) ವಿದ್ಯಾರ್ಥಿಗಳ ಪಾತ್ರ ಅಕ್ರಮದಲ್ಲಿ ಇಲ್ಲ. ಈ ಅವ್ಯವಹಾರದ ಬಗ್ಗೆ ಅವರಿಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಪ್ರಾಧಿಕಾರವು ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಮುಂದಾಗಿದೆ. ಹಾಗಾದರೆ ಅಕ್ರಮ ಎಸಗಿದ್ದು ಯಾರು..?

ನೋಟಿಸ್ ಪಡೆದು ಪ್ರಾಧಿಕಾರಕ್ಕೆ ಉತ್ತರಿಸಿರುವ ವಿದ್ಯಾರ್ಥಿಗಳಲ್ಲಿ ಬಹುತೇಕರು ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ. ಅವರೆಲ್ಲವು ಖಾಸಗಿ ಸಂಸ್ಥೆಗಳಿಂದ ಜೆಇಇ, ಕಾಮೆಡ್‌ಕೆ ಇನ್ನಿತರ ಅರ್ಹತಾ ಪರೀಕ್ಷೆಗಳ ಮೂಲಕ ಕೋರ್ಸ್‌ಗೆ ಪ್ರವೇಶ ಪಡೆದುಕೊಂಡವರಾಗಿದ್ದಾರೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ವಿವರಿಸಿದ್ದಾರೆ.
ಅಕ್ರಮದ ಸುತ್ತ ಅನುಮಾನದ ಹುತ್ತ
ಇನ್ನೂ ಪರೀಕ್ಷಾ ಉತ್ತರಗಳನ್ನು ಪರಿಶೀಲಿಸಿದ ಅಧಿಕಾರಿಗಳಿಗೆ ಈ ಸೀಟು ಬ್ಲಾಕ್ ವಿಚಾರದಲ್ಲಿ ವಿದ್ಯಾರ್ಥಿಗಳ ಪಾತ್ರವಿಲ್ಲ ಎಂಬುದು ಗೊತ್ತಾಗಿದೆ. ಅಕ್ರಮದ ಹಿಂದೆ ಕಾಲೇಜುಗಳು, ಸಂಯೋಜಿತ ಟ್ಯೂಷನ್ ಕೇಂದ್ರ ಸೇರಿ ಇನ್ನಿತರ ಸೆಂಟರ್‌ಗಳ ಪಾತ್ರ ಇರಬೇಕು ಎಂದು ಅನುಮಾನಿಸಲಾಗಿದೆ. ಹೀಗಾಗಿ ಉನ್ನತ ಮಟ್ಟದ ತನಿಖೆಗೆ ಕೆಇಎ ಆಗ್ರಹಿಸಿದ್ದು, ಶೀಘ್ರವೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಿದೆ ಎಂದರು.

ಅಕ್ರಮ ಬಗ್ಗೆ ಒಂದೆರಡು ದಿನಗಳಲ್ಲಿ ಸರ್ಕಾರಕ್ಕೆ ಪ್ರಾಧಿಕಾರವು ವರದಿ ಸಲ್ಲಿಸಲಿದೆ. ಅಲ್ಲದೇ ಇಂತಹ ವಂಚನೆಗಳು, ಅಕ್ರಮಗಳಿಗೆ ಕಡಿವಾಣ ಹಾಕಲು ಸೈಬರ್ ಪೊಲೀಸರ ನೆರವು ಕೋರಿದ್ದೇವೆ ಎಂದು ತಿಳಿಸಿದರು.
ಪ್ರಸ್ತಕ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, 2,300 ಎಂಜಿನಿಯರಿಂಗ್ ಸೀಟುಗಳನ್ನು ಖಾಸಗಿ ಮ್ಯಾನೇಜ್‌ಮೆಂಟ್‌ಗಳಿಗೆ ಹಸ್ತಾಂತರಿಸಿದೆ. ಇದು ಸಹ ಬೇಡಿಕೆಗೆ ಅನುಗುಣವಾಗಿ ಸೀಟು ಬ್ಲಾಕ್ ತಡೆಯಲು ಪ್ರಮುಖ ಕಾರಣವಾಗಿರಬಹುದೆಂದು ಊಹಿಸಲಾಗಿದೆ.
ಅಷ್ಟು ವಿದ್ಯಾರ್ಥಿಗಳಿಗೆ ನೋಟಿಸ್ ಜಾರಿ ಹೇಗೆ
ಸೀಟು ಬ್ಲಾಕ್ ಅಕ್ರಮಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಇಮೇಲ್ ನೋಟೀಸ್ ಜಾರಿ ಮಾಡಿದ್ದು, ಅವು ಬೌನ್ಸ್ ಆದ ನಂತರ, ಕೆಸಿಇಟಿ ನೋಂದಣಿ ವೇಳೆ ವಿದ್ಯಾರ್ಥಿಗಳು ನೀಡಿದ್ದ ಅಂಚೆ ವಿಳಾಸಗಳಿಗೆ ನೋಟಿಸ್ ರವಾನಿಸಲಾಗಿತ್ತು. ಅದರಿಂದ ಉತ್ತರ ಪಡೆಯಲು ಮತ್ತು ಕೂಲಂಕುಷ ವಿಚಾರಣೆಗೆ ಸಾಧ್ಯವಾಯಿತು ಎಂದು ಕೆಇಎ ತಿಳಿಸಿತು.
ನಕಲಿ ಮೊಬೈಲ್ ಸಂಖ್ಯೆ ಪತ್ತೆ: ನೋಂದಣಿಗೆ ಹೊಸ ವ್ಯವಸ್ಥೆ
ತಾವು ಕೆಸಿಇಟಿ ಕೌನ್ಸೆಲಿಂಗ್‌ಗೆ ನೋಂದಣಿ ಮಾಡಿಕೊಂಡಿದ್ದೆವು. ಸೀಟು ಹಂಚಿಕೆಯಲ್ಲಿ ಭಾಗವಹಿಸಿಲ್ಲ. ತಮ್ಮ ಫೋನ್ ಸಂಖ್ಯೆ, ಲಾಗಿನ್ ವಿವರ, ಇನ್ನಿತರ ರುಜುವಾತುಗಳ ಯಾವುದೇ ದುರ್ಬಳಕೆ ಆಗಿದ್ದರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ವಿದ್ಯಾರ್ಥಿಗಳು ಮತ್ತವರ ಪೋಷಕರು ಮಾಹಿತಿ ನೀಡಿದ್ದಾರೆ. ಇದನ್ನು ನಂಬಿದ ಪ್ರಾಧಿಕಾರವು ಇತರ ಹಲವು ವಿದ್ಯಾರ್ಥಿಗಳು ನೋಂದಣಿ ವೇಳೆ ನಕಲಿ ಮೊಬೈಲ್ ನಂಬರ್ ಹಾಗೂ ತಪ್ಪು ಮೊಬೈಲ್ ಸಂಖ್ಯೆ ನೀಡಿರುವುದನ್ನು ಪತ್ತೆ ಮಾಡಿದೆ.
ಈ ಸೀಟು ಬ್ಲಾಕಿಂಗ್, ಅಕ್ರಮ ತಡೆಗೆ ಮುಂದಾಗಿರುವ ಪ್ರಾಧಿಕಾರವು ವಿದ್ಯಾರ್ಥಿಗಳ ನೋಂದಣಿ ವೇಳೆ ಆಧಾರ್ ಲಿಂಕಿಂಗ್ ನೋಂದಣಿ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಆಧಾರ್ ಸಮೇತ ನೋಂದಣಿಯಾದರೆ, ಅಕ್ರಮ ತಡೆಗೆ ಸಾಧ್ಯವಾಗುತ್ತದೆ. ಹೀಗೆನಾದರೂ ಆದಲ್ಲಿ ಖಚಿತ ಮಾಹಿತಿ ದೊರೆಯುತ್ತದೆ. ಈ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸಿರುವ ಕೆಇಎ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ಅನುಮೋದನೆ ನೀಡುವ ಭರವಸೆ ಇದೆ ಎಂದು ಪ್ರಾಧಿಕಾರ ತಿಳಿಸಿದೆ.












Click it and Unblock the Notifications