ಕರ್ನಾಟಕದಲ್ಲಿ ಉದ್ಯಮಿಗಳಿಗೆ, ಚಿನ್ನಾಭರಣ ಮಳಿಗೆಗಳಿಗೆ ರಕ್ಷಣೆ ಇಲ್ಲ- MLC ಶರವಣ
ಬೆಂಗಳೂರು, ಜನವರಿ 21: ವಿಧಾನ ಪರಿಷತ್ ಸದಸ್ಯ ಶರವಣ ಅವರ ಮಾಲೀಕತ್ವದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ಗೆ ಸಂಬಂಧಿಸಿದ ಚಿನ್ನಾಭರಣ ಕಳ್ಳತನವಾಗಿದೆ. ಹಾಲ್ ಮಾರ್ಕ್ ಹಾಕಿಸಲು ಕೊಟ್ಟ 1 ಕೆಜಿ 249 ಗ್ರಾಂ ಚಿನ್ನ ಕಳ್ಳತನವಾಗಿದ್ದು, ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆ ಮಾತ್ರವಲ್ಲದೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕಳೆದು ಒಂದು ವಾರದಿಂದ ದರೋಡೆ ಪ್ರಕರಣ ಗಣನೀಯವಾಗಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ಹಾಗೂ ಬಿಜೆಪಿ ವಿಧಾನ ಪರಿಷತ್ ಶಾಸಕ ಎನ್. ರವಿಕುಮಾರ್ ಸುದ್ದಿಗೋಷ್ಠಿ ನಡೆಸಿದ್ದು, ಕಾಂಗ್ರೆಸ್ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

ಕರ್ನಾಟಕ ಲೂಟಿ ಕೋರರು ಮತ್ತು ದರೋಡೆಕೋರರ ಸಾಮ್ರಾಜ್ಯ ಆಗುತ್ತಿದೆ. ಸಾರ್ವಜನಿಕರಿಗೆ, ಉದ್ಯಮಿಗಳಿಗೆ, ಹಣಕಾಸು ಸಂಸ್ಥೆಗಳಿಗೆ, ಚಿನ್ನಾಭರಣ ಮಳಿಗೆಗಳಿಗೆ ರಕ್ಷಣೆ ಇಲ್ಲದೇ, ಇದೊಂದು ಜಂಗಲ್ ರಾಜ್ ಆಗಿರುವ ಗುಮಾನಿ ಬಂದಿದೆ. ಬೀದರ್‌ನಲ್ಲಿ ಹಾಡುಹಗಲೇ ನಡು ಬೀದಿಯಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಬ್ಯಾಂಕ್ ಹಣ ದರೋಡೆ ಮಾಡಿ ಪರಾರಿ. ಮಂಗಳೂರಲ್ಲಿ ಸಹಕಾರಿ ಬ್ಯಾಂಕ್ ದರೋಡೆ, ಮೈಸೂರು ಬಳಿ ವಾಹನ ನಿಲ್ಲಿಸಿ, ಬೆದರಿಸಿ ದರೋಡೆ. ಇವು ರಾಜ್ಯ ಭೀಕರತೆ ಮತ್ತು ಅಮಾನುಷತೆಯತ್ತ ಸಾಗುತ್ತಿರುವ ಲಕ್ಷಣ ಎಂದರು.
ಇಂತಹ ನೀಚ, ಹೇಯ ಕೃತ್ಯ ನಡೆಸಿ ಹೆದ್ದಾರಿಗಳಲ್ಲಿ, ಟೋಲ್‌ಗಳ ಮಧ್ಯೆ ಕೇಡಿಗಳು, ಕೊಲೆಗಡುಕರು ಹಾದು ಹೋದರೂ ಅವರನ್ನು ಹಿಡಿಯಲು ಪೊಲೀಸರ ಕೈಯಲ್ಲಿ ಸಾಧ್ಯವಿಲ್ಲದೇ ಇರುವುದು ಆಶ್ಚರ್ಯ ತಂದಿದೆ. ಹೊಯ್ಸಳ ವಾಹನ ಅಪರಾಧಿಗಳ ಪತ್ತೆ ಕೆಲಸ ಬಿಟ್ಟು, ಬೇರೆ ಕೆಲಸಗಳಿಗೆ ಬಳಕೆ ಆಗುತ್ತಿರುವುದು ವಿಷಾದಕರ ಎಂದು ಹೇಳಿದರು.
ಈ ಘಟನೆಗಳಿಂದ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿರುವ ಉದ್ಯಮಿಗಳು ಭದ್ರತೆ ಇಲ್ಲದೇ ಹಿಂದೇಟು ಹಾಕುವಂತಾಗಿದೆ. ಸಾರ್ವಜನಿಕರ ಬದುಕಿಗೆ ರಾಜ್ಯ ಸುರಕ್ಷಿತವಲ್ಲ ಎನ್ನುವ ಭಾವನೆ ಬಂದಿದ್ದು, ಇನ್ನು ಉದ್ಯಮಿಗಳು ಎಲ್ಲಿಂದ ಬರುತ್ತಾರೆ? ಇಷ್ಟೆಲ್ಲಾ ಆದರೂ ಗೃಹ ಮಂತ್ರಿ ಡಾ.ಜಿ. ಪರಮೇಶ್ವರ್ ದೊರೆಯಂತೆ ಬೆಳಗಾವಿ ಅಧಿವೇಶನದಲ್ಲಿ ಸುಳ್ಳು ಸುಳ್ಳು ಶಾಂತಿ ಮಂತ್ರದ ಪಿಟೀಲು ಬಾರಿಸುತ್ತಿರುವ ವ್ಯಂಗ್ಯವಾಗಿದೆ. ರಾಜ್ಯದ ಜನರ, ಉದ್ಯಮಿಗಳ ಸುರಕ್ಷತೆ ದೃಷ್ಟಿಯಿಂದ ಇಲ್ಲಿ ಯಾವ ಸಭೆಯು ನಡೆದಿಲ್ಲ. ಯಾವ ಕ್ರಮವೂ ಇಲ್ಲ ಎಂದು ಕಿಡಿಕಾರಿದರು.

ಅಧಿಕಾರ ಹಂಚಿಕೆ ರಾಜಕಾರಣ, ಸಿಎಂ ಮತ್ತು ಕೆಪಿಸಿಸಿ ಹುದ್ದೆ ಜಟಾಪಟಿಯಲ್ಲಿ ಮುಳುಗಿರುವ ಕಾಂಗ್ರೆಸ್ ಜನರ ಹಿತಾಸಕ್ತಿಯನ್ನು ಮರೆತಿದೆ. ಸರ್ಕಾರದ ಈ ನಿಲುವನ್ನು ನಾನು ಬಲವಾಗಿ ಖಂಡಿಸುತ್ತೇನೆ. ರಾಜ್ಯದ ಗೃಹ ಮಂತ್ರಿ ಒಂದು ಕ್ಷಣವೂ ಅಧಿಕಾರದಲ್ಲಿ ಇರಲು ಯೋಗ್ಯರಲ್ಲ ಎಂದು ಡಾ.ಜಿ. ಪರಮೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications