Karnataka weather: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶ ಕುಸಿತ, ಯಾವೆಲ್ಲ ಭಾಗದಲ್ಲಿ ಹೆಚ್ಚು ಚಳಿ?
ಕರ್ನಾಟಕ, ಡಿಸೆಂಬರ್, 21: ಮಳೆಗಾಲ ಹೋಗಿ ಇದೀಗ ಚಳಿಗಾಲ ಆವರಿಸಿಬಿಟ್ಟಿದೆ. ಚಳಿಯಿಂದ ನಡುಕ ತಡೆಲಾರದೇ ಜನರು ಬೆಳ್ಳಂಬೆಳಗ್ಗೆ ಬೆಂಕಿಹಾಕಿಕೊಳ್ಳುವ ಮೂಲಕ ಮೈಬೆಚ್ಚಗೆ ಮಾಡಿಕೊಳ್ಳಲು ಪ್ರಾರಂಭಿಸಿದರೆ, ಇನ್ನು ಕೆಲವರು ಬಿಡಿ, ಸಿಗರೇಟು ಸೇದುತ್ತಾರೆ. ಇದೇ ರೀತಿ ಅನುಭವ ದೇಶ ಸೇರಿದಂತೆ ರಾಜ್ಯದ ಹಲವೆಡೆ ಈ ವೇಳೆಯಲ್ಲಿ ಸಾಮಾನ್ಯವಾಗಿರುತ್ತದೆ. ಇನ್ನು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶ ಕಡಿಮೆಯಾಗಿದ್ದು, ಚಳಿಯ ವಾತಾವರಣ ಮುಂದುವರೆದಿದೆ. ಹಾಗಾದರೆ ಇಂದು ಯಾವೆಲ್ಲ ರಾಜ್ಯದ ಯಾವೆಲ್ಲ ಭಾಗದಲ್ಲಿ ಚಳಿ ಹೆಚ್ಚಿರಲಿದೆ ಎಂದು ತಿಳಿಯಿರಿ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಚಳಿಯ ವಾತಾವರಣ ಮುಂದುವರೆದಿದೆ. ಉತ್ತರ ಕರ್ನಾಟಕದ ವಿಜಯಪುರ, ಬೀದರ್‌ನಲ್ಲಿ ಮತ್ತೆ ಉಷ್ಣಾಂಶ ಕುಸಿದು ಚಳಿ ಹೆಚ್ಚಳವಾಗಿದೆ. ಕರಾವಳಿ ಭಾಗ ಹೊರತುಪಡಿಸಿದರೆ ರಾಜ್ಯದೆಲ್ಲೆಡೆ ಕನಿಷ್ಠ ಉಷ್ಣಾಂಶದಲ್ಲಿ ಕುಸಿತ ಕಂಡು ಬಂದಿದೆ.

ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶದ ಪ್ರಮಾಣ 20 ಡಿಗ್ರಿ ಸೆಲ್ಸಿಯಸ್‌ಗೂ ಕಡಿಮೆಯಿದೆ. ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ ಕುಸಿತ ಕಂಡಿದೆ. ಒಂದೇ ದಿನದಲ್ಲಿ ಕನಿಷ್ಠ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಕಡಿಮೆಯಾಗಿದೆ. ಆದರೆ ವಿಜಯಪುರದಲ್ಲಿ ಮಾತ್ರ ಭಾರೀ ಪ್ರಮಾಣದಲ್ಲಿಯೇ ಕುಸಿತ ಕಂಡುಬಂದಿದೆ.
ವಿಜಯಪುರದಲ್ಲಿ ಕಳೆದ ವಾರ ಕನಿಷ್ಠ ಉಷ್ಣಾಂಶ 6 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು. ನಂತರ ಏರಿಕೆ ಕಂಡು ಈಗ ಮತ್ತೆ ಕುಸಿದಿದೆ. ಬುಧವಾರ (ಡಿಸೆಂಬರ್ 19) ವಿಜಯಪುರದಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶದ ಪ್ರಮಾಣ 10.5 ಡಿಗ್ರಿ ಸೆಲ್ಸಿಯಸ್ ಆಗಿದೆ. ಬೀದರ್‌ನಲ್ಲೂ ಹೀಗೆಯೇ ಏರಿಳಿತ ಕಂಡುಬರುತ್ತಿದೆ. ಇಲ್ಲಿ 10 ಡಿಗ್ರಿ ಸೆಲ್ಸಿಯಸ್‌ಗೂ ಕನಿಷ್ಠ ಉಷ್ಣಾಂಶ ಇಳಿಕೆಯಾಗಿತ್ತು. ನಂತರ ಏರಿಕೆಯಾಗಿತ್ತು.
ಹಾವೇರಿ, ರಾಯಚೂರು ಭಾಗದಲ್ಲೂ ಕೂಡ ಉಷ್ಣಾಂಶ ಕುಸಿತ ಕಂಡಿದೆ. 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಿದ್ದ ಎರಡೂ ನಗರಗಳಲ್ಲಿ ಬುಧವಾರ (ಡಿಸೆಂಬರ್ 20) 16 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಹಾವೇರಿಯಲ್ಲಿ 16.2 ಡಿಗ್ರಿ ಹಾಗೂ ರಾಯಚೂರಿನಲ್ಲಿ 16.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವು ಬುಧವಾರ ದಾಖಲಾಗಿ ಚಳಿ ಅನುಭವ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಬೆಳಗಾವಿ ನಗರ, ಬಾಗಲಕೋಟೆ, ಧಾರವಾಡದಲ್ಲೂ ಚಳಿಯ ಅನುಭವ ತುಸು ಹೆಚ್ಚಾಗಿತೇ ಇತ್ತು. ಧಾರವಾಡದಲ್ಲಿ 15 ಡಿಗ್ರಿ, ಬಾಗಲಕೋಟೆಯಲ್ಲಿ 15.1 ಡಿಗ್ರಿ ಸೆಲ್ಸಿಯಸ್, ಬೆಳಗಾವಿ ನಗರದಲ್ಲಿ 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲು ಆಗಿದೆ. ಕೊಪ್ಪಳದಲ್ಲಿ 16.2 ಡಿಗ್ರಿ, ಗದಗದಲ್ಲಿ 16 ಡಿಗ್ರಿ, ಕಲಬುರಗಿಯಲ್ಲಿ 17.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ದಕ್ಷಿಣ ಒಳನಾಡಿನ ಚಿಕ್ಕಮಗಳೂರಲ್ಲಿ 14.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲು ಆಗಿದೆ. ಕಳೆದ ಕೆಲ ದಿನಗಳಿಂದ ಚಿಕ್ಕಮಗಳೂರಿನಲ್ಲಿ ಚಳಿಯ ವಾತಾವರಣವೇ ಮುಂದುವರೆದಿದೆ. ಬೆಂಗಳೂರು ಅಂತಾರಾಷ್ಟ್ರೀಯ KIA ವಿಮಾನ ನಿಲ್ದಾಣ ಪ್ರದೇಶದಲ್ಲಿ 17 ಡಿಗ್ರಿ ಸೆಲ್ಸಿಯಸ್ ಇದ್ದರೆ, ಬೆಂಗಳೂರು ನಗರದಲ್ಲಿ 17.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ತಿಳಿದುಬಂದಿದೆ.
ದಾವಣಗೆರೆಯಲ್ಲಿ 16.5 ಡಿಗ್ರಿ, ಚಿತ್ರದುರ್ಗದಲ್ಲಿ 16.6 ಡಿಗ್ರಿ ಸೆಲ್ಸಿಯಸ್ ಕಂಡು ಬಂದರೆ, ಶಿವಮೊಗ್ಗದಲ್ಲಿ17.4 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶದ ಪ್ರಮಾಣವಿತ್ತು. ಮಡಿಕೇರಿಯಲ್ಲಿ 18.6 ಡಿಗ್ರಿ. ಮಂಡ್ಯದಲ್ಲಿ 18.4 ಡಿಗ್ರಿ, ಮೈಸೂರಿನಲ್ಲಿ 19 ಡಿಗ್ರಿ, ಚಾಮರಾಜನಗರದಲ್ಲಿ 18.9 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಭಾಗದ ಚಿಂತಾಮಣಿಯಲ್ಲಿ 15.9 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಕಂಡು ಬಂದಿತು. ಇನ್ನು ಕರಾವಳಿಯಲ್ಲಿ ಹೊನ್ನಾವರ ಹಾಗೂ ಮಂಗಳೂರು ವಿಮಾನ ನಿಲ್ದಾಣದಲ್ಲಿ 23.7 ಡಿಗ್ರಿ, ಕಾರವಾರದಲ್ಲಿ 24.4 ಡಿಗ್ರಿ ಹಾಗೂ ಮಂಗಳೂರಿನ ಪಣಂಬೂರಿನಲ್ಲಿ 22.5 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಮುಂದಿನ ಎರಡು ದಿನಗಳ ಕಾಲ ಗುರುವಾರ ಮತ್ತು ಶುಕ್ರವಾರ (ಡಿಸೆಂಬರ್ 21 ಹಾಗೂ 22) ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯ ವಾತಾವರಣ ಇಲ್ಲ. ಸಾಮಾನ್ಯವಾಗಿ ಎಲ್ಲೆಡೆ ಮೋಡ ಕವಿದ ವಾತಾವರಣವೇ ಕಂಡುಬರುತ್ತದೆ. ಕೆಲವು ಭಾಗಗಳಲ್ಲಿ ಮಾತ್ರ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಇರುವ ಸಾಧ್ಯತೆಯಿದೆ. ಬೆಂಗಳೂರಿನ ಗರಿಷ್ಠ ಉಷ್ಣಾಂಶವು 26ರಿಂದ 27 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶವು 17 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications