Karnataka rain: ನ.23ರಿಂದ ಭಾರೀ ಮಳೆ ಮುನ್ಸೂಚನೆ, ಯಾವ ಜಿಲ್ಲೆಗಳಿಗೆ? ಹವಾಮಾನ ವರದಿ
ಬೆಂಗಳೂರು, ನವೆಂಬರ್ 20: ಕರ್ನಾಟಕದಲ್ಲಿ ತಣ್ಣಗಾಗಿದ್ದ ವರುಣದೇವ ಮತ್ತೆ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾನೆ. ಹವಾಮಾಣದಲ್ಲಿನ ಪರಿಣಾಮಕಾರಿ ಏರಿಳಿತದಿಂದಾಗಿ ಇದೇ ನವೆಂಬರ್ 23ರಿಂದ ಮೂರು ದಿನ ಇಡಿ ರಾಜ್ಯಾದ್ಯಂತ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಆಗಲಿದೆ. ಹೀಗಾಗಿ ಇಡೀ ರಾಜ್ಯದ ಹಲವು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಕೊಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹಿಂಗಾರು ಮಳೆ ಆಗಾಗ ಸಕ್ರಿಯಗೊಳ್ಳುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದಿದ್ದರೂ ಸಹಿತ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ವೈಪರಿತ್ಯದಿಂದ ರಾಜ್ಯದಲ್ಲಿ ಮತ್ತೆ ಮೂರು ಮಳೆಯ ವಾತಾವರಣ ಕಂಡು ಬರಲಿದೆ. ಇದು ರೈತರ ಸಂತಸಕ್ಕೆ ಕಾರಣವಾಗಿದೆ.

ನವೆಂಬರ್ 23ರಿಂದ ದಕ್ಷಿಣ ಒಳನಾಡು ಜಿಲ್ಲೆಗಳಾದ ಕೊಡಗು, ಮೈಸೂರು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆ ಆಗಲಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಸಾಧಾರಣ ಮಳೆಯ ಪ್ರದೇಶಗಳ ವಿವರ
ಉಳಿದ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ವಿಜಯನಗರ ಸೇರಿದಂತೆ ವಿವಿಧೆಡೆ ಹಗುರದಿಂದ ಸಾಧಾರಣವಾಗಿ ಮಳೆ ಸುರಿಯಲಿದೆ ಎಂದು ಅಂದಾಜಿಸಲಾಗಿದೆ.

ಇನ್ನೂ ಕರಾವಳಿ ಭಾಗದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನವೆಂಬರ್ 24ರಂದು ಒಂದು ದಿನ ಧಾರಾಕಾರ ಮಳೆ ಆಗುವುದರಿಂದ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಂತರ ಎರಡು ದಿನ ಸಾಧಾರಣವಾಗಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಜಿಲ್ಲೆಗಳಿಗೆ ಮಳೆಯೇ ಅಪರೂಪ
ಇದೇ ಅವಧಿಯಲ್ಲಿ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಮಳೆಯ ದರ್ಶನ ಅಪರೂಪ ಎಂಬಂತಾಗಿದೆ. ಇಲ್ಲಿ ಬೆಳಗ್ಗೆ ಮತ್ತು ಸಂಜೆ ತುಸು ಚಳಿ ವಾತಾವರಣ ಕಂಡು ಬರಬಹುದೇ ವಿನಃ ಮಳೆಯ ಯಾವ ಲಕ್ಷಣಗಳು ಈ ಭಾಗದಲ್ಲಿ ಇಲ್ಲ. ಬದಲಾಗಿ ಶುಷ್ಕ ವಾತಾವರಣವೇ ಮುಂದುವರಿಯಲಿದೆ ಎಂದು ಇಲಾಖೆ ವರದಿ ಸ್ಪಷ್ಟಪಡಿಸಿದೆ.
ಎರಡು ಕಡೆ ಅಧಿಕ ತಾಪಮಾನ ದಾಖಲು
ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಉಪ್ಪಿನಂಗಡಿ, ಚಿಕ್ಕಮಗಳೂರಿನ ಶೃಂಗೇರಿ, ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಅಲ್ಲಲ್ಲಿ ಹಗುರ ಮಳೆ ಆಗಿದೆ. ಕಲಬುರಗಿ ಮತ್ತು ಕಾರವಾರದಲ್ಲಿ (34.2) ರಾಜ್ಯದ ಗರಿಷ್ಠ ತಾಪಮಾನ ದಾಖಲಾಗಿದೆ. ಉಳಿದಂತೆ ಹೊನ್ನಾವರ, ಶಿರಾಲಿ, ಮಂಗಳೂರು ವಿಮಾನ ನಿಲ್ದಾಣ, ಪೆಣಂಬೂರಿನಲ್ಲಿ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.












Click it and Unblock the Notifications