Karnataka Rains: ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ಜೋರಾಗಲಿದೆ ಮುಂಗಾರು ಮಳೆ ಆರ್ಭಟ-ಎಲ್ಲೆಲ್ಲಿ?
Karnataka Rains: ರಾಜ್ಯದ ಬಹುತೇಕ ಜಿಲ್ಲೆಗಲ್ಲಿ ಮುಂಗಾರು ದಿನದಿಂದ ದಿನಕ್ಕೆ ಚುರುಕು ಪಡೆಯುತ್ತಲೇ ಇದೆ. ಇನ್ನು ಕಳೆದ 24 ಗಂಟೆಗಳಲ್ಲಿ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಭಾರೀ ಮಳೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೆಯೇ ಮುಂದಿನ 24 ಗಂಟೆಗಳಲ್ಲಿ ಈ ಭಾಗಗಳಲ್ಲಿ ಮಳೆರಾಯನ ಆರ್ಭಟದ ಮತ್ತಷ್ಟು ಜೋರಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಮಳೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದಲೂ ಮೋಡ ಕವಿದ ವಾತಾವರಣ ನಿರ್ಮಾಣವಾಗುತ್ತಿದ್ದು, ಸಂಜೆಯಾಗುತ್ತಿದ್ದರೆ ಮಳೆರಾಯ ತನ್ನ ಆರ್ಭಟವನ್ನು ಮುಂದುವರೆಸುತ್ತಲೇ ಇದ್ದಾನೆ. ಹಾಗೆಯೇ ಇನ್ನು ಕೆಲವು ಜಿಲ್ಲೆಗಳಲ್ಲಿ ಬಿಡಿಬಿಡದೇ ಅಬ್ಬರಿಸುತ್ತಿದ್ದಾನೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ, ಉಡುಪಿ ಜಿಲ್ಲೆಯಲ್ಲಿ 43 ಮಿಲಿ ಮೀಟರ್‌ನಷ್ಟು ಮಳೆಯಾಗಿದೆ ಎಂದು ವರದಿಯಾಗಿದೆ. ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಯಾಗಿದ್ದು, ಕೆಲವೆಡೆ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಸುರಿದಿದೆ. ಇನ್ನುಳಿದಂತೆ ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಜಿಲ್ಲೆಗಳ ಕೆಲವೆಡೆ ಚದುರಿದಂತೆ ಹಗುರದಿಂದ ಸಾಧಾರಣ ಮಳೆ ಬಿದ್ದಿದೆ ಎಂದು ತಿಳಿದುಬಂದಿದೆ.
2024ರ ಮುಂಗಾರು ಮಾರ್ಚ್ 1ರಿಂದ ಮೇ 31ರವರೆಗೆ ವಾಡಿಕೆಯಂತೆ 115 ಮಿಲಿ ಮೀಟರ್ ಮಳೆಯಾಗಬೇಕಿದ್ದು, ಇದೀಗ 151 ಮಿಲಿ ಮೀಟರ್ ಮಳೆ ಬಿದ್ದಿದೆ. ಈ ಮೂಲಕ ವಾಡಿಕೆಗಿಂತ ಶೇಕಡ 31ರಷ್ಟು ಅಧಿಕ ಮಳೆಯಾಗಿದೆ.
ಮತ್ತೊಂದೆಡೆ 2024ರ ಜೂನ್ 1ರಿಂದ 13ರವರೆಗೂ ವಾಡಿಕೆಯಾಗಿ, 70 ಮಿಲಿ ಮೀಟರ್ ಮಳೆಯಾಗಬೇಕಿದ್ದು, ಇದೀಗ 113 ಮಿ.ಮೀಟರ್ ಮಳೆ ಸುರಿದಿದೆ. ಈ ಮೂಲಕ ವಾಡಿಕೆಗಿಂತ ಶೇಕಡ 62ರಷ್ಟು ಮಳೆ ಬಿದ್ದಿದೆ ಎಂದು ತಿಳಿದುಬಂದಿದೆ.
ಹಾಗೆಯೇ ಇಂದು (ಜೂನ್ 13) ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಕೆಲವೆಡೆ ಗುಡುಗು ಸಿಡಿಲು ಸಹಿತ ಅಧಿಕ ಮಳೆ ಸುರಿಯುವ ಸಾಧ್ಯತೆಯಿದೆ. ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆ ಬೀಳುವ ಸಾಧ್ಯತೆಯಿದೆ.
ತಾಪಮಾನದ ವಿಚಾರಕ್ಕೆ ಬಂದರೆ, ರಾಕ್ಯದಲ್ಲಿ ಬಿಸಿಲು ಹಾಗೂ ಮೋಡದಿಂದ ಕೂಡಿದ ವಾತಾವರಣ ನಿರ್ಮಾಣವಾಗುತ್ತಿದ್ದು, ಈ ಮೂಲಕ ಕಳೆದ 24 ಗಂಟೆಗಳಲ್ಲಿ ಕನಿಷ್ಠ ತಾಪಾಮಾನ 18.5 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ಗರಿಷ್ಠ ತಾಪಾಮಾನ 34.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಒಟ್ಟಿನಲ್ಲಿ ಈಗಾಗಲೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಧಾರವಾಡ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಕೊಡಗು, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆರಾಯ ಆರ್ಭಟಿಸಿದ್ದು, ಇಂದು ಕೂಡ ತನ್ನ ಆರ್ಭಟವನ್ನು ಮುಂದುವರೆಸಲಿದ್ದಾನೆ. ಈ ಮೂಲಕ ಮುಂಗಾರು ಮತ್ತಷ್ಟು ಚುರುಕು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ












Click it and Unblock the Notifications