Karnataka Rain: ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಕೂಡ ಮಳೆ ಮುಂದುವರಿಯುವ ಮುನ್ಸೂಚನೆ
ಕರ್ನಾಟಕ, ಮೇ, 09: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮತ್ತೊಂದೆ ಈಗಾಗಲೇ ಮಳೆರಾಯ ರಾಜ್ಯದೆಲ್ಲೆಡೆ ಆರ್ಭಟಿಸುತ್ತಲೇ ಇದ್ದು, ಇದು ಅಭ್ಯರ್ಥಿಗಳ ಮುಖದಲ್ಲಿ ನಗುವನ್ನೇ ಮರೆಮಾಚುವಂತೆ ಮಾಡಿದೆ. ಯಾಕೆ ಅಂತೀರಾ, ನಾಳೆ ಬೆಳಗ್ಗೆಯಿಂದಲೇ ಮತದಾನ ಆರಂಭವಾಗಲಿದ್ದು, ಮಳೆ ಮುನ್ಸೂಚನೆ ಇರುವ ಕಾರಣ ಹಲವು ಕಡೆ ಮತದಾನಕ್ಕೆ ಅಡ್ಡಿಯಾಗುವ ಸಾಧ್ಯತೆಗಳು ಎದ್ದು ಕಾಣುತ್ತಿದೆ. ಹಾಗಾದಾರೆ ಇಂದು ಯಾವ ಭಾಗಗಳಲ್ಲಿ ಹೆಚ್ಚು ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬಂಗಾಳಕೊಲ್ಲಿಯಲ್ಲಿ ಮೋಚಾ ಚಂಡಮಾಡುತ ಇದ್ದು, ಇದರ ಪ್ರಭಾವ ರಾಜ್ಯದ ಮೇಲೂ ಬೀರಿದೆ. ಆದ್ದರಿಂದ ಇಂದು ಕೂಡ ರಾಜ್ಯದ ಹಲವೆಡೆ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮತ್ತೊಂದೆಡೆ ಈಗಾಗಲೇ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಅಭ್ಯರ್ಥಿಗಳಿಗೆ ಈಗ ಮಳೆಯದ್ದೇ ಚಿಂತೆಯಾಗಿದೆ.

ಅಲ್ಲದೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಬೀಳುತ್ತಿದ್ದು, ಈ ಮಳೆ ವಾತಾವರಣವನ್ನೂ ಕೂಡ ತಣ್ಣಗೆ ಆಗುವಂತೆ ಮಾಡಿದೆ. ಇಂದು ಕೂಡ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆಯಾಗಲಿದೆ ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮೇ 9ರಂದು ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಮಳೆ ಬೀಳಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ (ಮೇ 08) ಕೂಡ ಸಾಧಾರಣ ಮಳೆಯಾಗಿದ್ದು, ಇದರಿಂದ ನಗರದ ಹಲವೆಡೆ ರಸ್ತೆಗಳು ಚರಂಡಿಯಂತೆ ಮಾರ್ಪಟ್ಟಿದ್ದವು. ಅಲ್ಲದೆ ಇಂದು ಕೂಡ ಮಳೆರಾಯನ ಆರ್ಭಟ ಮುಂದುವರೆಯುವ ಸಾಧ್ಯೆತೆಯಿದೆ ಎನ್ನಲಾಗಿದೆ. ಇನ್ನು ಕರಾವಳಿಯ ಬೆಳ್ತಂಗಡಿ, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ ಸೇರಿದಂತೆ ವಿವಿಧೆಡೆ ನಿನ್ನೆ ರಾತ್ರಿ ಗುಡುಗು ಸಹಿತ ಮಳೆ ಬಿದ್ದಿದೆ.
ಇದೆ ರೀತಿ ಮೇ 13ರವರೆಗೂ ರಾಜ್ಯದ ಹಲವಡೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಮತ್ತೊಂದೆಡೆ ಇಂದು ಸಂಜೆಯಿಂದಲೇ ಹಲವು ಕಡೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದ್ದು, ಇದು ಮತಗಟ್ಟೆಗಳ ಕೆಲಸಗಳಿಗೆ ಅಡ್ಡಿಪಡಿಸುವ ಸಾಧ್ಯತೆಯೂ ಇದೆ. ಇದರಿಂದ ಅಭ್ಯರ್ಥಿಗಳು ಆತಂಕ್ಕೂ ಒಳಗಾಗಿದ್ದಾರೆ.
ಮಳೆ ಬೀಳುವ ಪ್ರದೇಶಗಳಿವು
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿಯಿಂದಲೇ ಗುಡುಗು, ಮಿಂಚು ಸಹಿತ ಮಳೆ ಆಗುತ್ತಿದೆ. ಇಂದು ಮತ್ತೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಸಾಧಾರಣ ಮಳೆ ಆಗಲಿದೆ ಎಂದು ತಿಳಿಸಿದೆ.
ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕೊಪ್ಪಳದಲ್ಲಿ ಒಣಹವೆ ಇರಲಿದೆ. ಬೆಳಗಾವಿ, ಕಲಬುರಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ರಾಯಚೂರು ಸೇರಿದಂತೆ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆ ಸುರಿಯಲಿದೆ. ಉತ್ತರ ಒಳನಾಡಿನಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ವರೆಗೂ ಕಡಿಮೆ ಆಗುವ ಸಾಧ್ಯತೆಯೂ ಇದೆ ಎನ್ನುವ ಮಾಹಿತಿಯನ್ನು ನೀಡಿದೆ.
ಹಾಗೆಯೆ ದಕ್ಷಿಣ ಒಳನಾಡಿನ ಎಲ್ಲಾ ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಮಳೆ ಬೀಳಲಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಗುಡುಗು ಸಹಿತ ಸಾಧಾರಣ ಮಳೆ ಸುರಿಯಲಿದೆ.
ಈ ಪ್ರದೇಶಗಳಲ್ಲಿ ಒಂದೆರಡು ಕಡೆ ಭಾರಿ ಮಳೆ ಬೀಳುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶವು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್‌ವರೆಗೆ ಕಡಿಮೆ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ರಾಜಕಾರಣಿಗಳಿಗೆ ಮಳೆಯದ್ದೇ ಚಿಂತೆ
ಇನ್ನು ಈಗಾಗಲೇ ಮತದಾನಕ್ಕೆ ಬೇರೆ ಊರುಗಳಲ್ಲಿ ನೆಲೆಸಿರುವ ಜನರನ್ನು ಕರೆತರಲು ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಜನರನ್ನು ಮತದಾನ ನಡೆಯುವ ಊರುಗಳಿಗೆ ಕರೆದೊಯ್ಯಲು ರಾಜಕಾರಣಿಗಳು ಬಸ್‌ಗಳ ವ್ಯವಸ್ಥೆಯನ್ನು ಮಾಡಿದ್ದು, ಇಂದು ರಾತ್ರಿಯೇನಾದರೂ ಮಳೆ ಸುರಿದರೆ ಊರುಗಳಿಗಳಿಗೆ ಆಗಮಿಸುವವರ ಸಂಖ್ಯೆಯೂ ಕೂಡ ಕಡಿಮೆ ಆಗುವ ಸಾಧ್ಯತೆ ಇದೆ. ಇದರಿಂದ ಮತದಾನ ಕಡೆಮೆಯಾಗುವ ಆತಂಕ ಅಭ್ಯರ್ಥಿಗಳಿಗೆ ಕಾಡುತ್ತಿದೆ.
ಅದರಲ್ಲೂ ಬೆಂಗಳೂರಿನಲ್ಲಿ ಒಂದು ವಾರದಿಂದಲೂ ಬಿಡುವಿಲ್ಲದೆ ಮಳೆರಾಯ ಅಬ್ಬರಿಸಿದ ಬೊಬ್ಬೆರೆಯುತ್ತಿದ್ದಾರೆ. ಇನ್ನು ಇಂದು ರಾತ್ರಿ ಕೂಡ ಇದೇ ರೀತಿ ಮಳೆ ಮುಂದುವರೆದರೆ, ಬೆಂಗಳೂರಿನಿಂದ ವಿವಿಧ ನಗರಗಳಿಗೆ ಹೋಗುವವರಿಗೆ ಅನಾನುಕೂಲ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಒಟ್ಟಿನಲ್ಲಿ ರಾಜಕಾರಣಿಗಳು ಜನರನ್ನು ಬೇರೆ ಊರುಗಳಿಂದ ಕರೆತರಲು ಬೇರೆ ಪರ್ಯಾಯ ವ್ಯವಸ್ಥೆ ಏನು ಮಾಡುತ್ತಾರೆಯೋ ಎಂದು ಕಾದುನೋಡಬೇಕಿದೆ ಅಷ್ಟೇ.












Click it and Unblock the Notifications