Karnataka Rains: ಇಂದಿನಿಂದ ಉತ್ತರ ಕರ್ನಾಟಕದಲ್ಲಿ ಮಳೆ ಆರ್ಭಟ, 10 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್'
ಬೆಂಗಳೂರು, ಸೆಪ್ಟಂಬರ್ 22: ಕರ್ನಾಟಕದಾದ್ಯಂತ ಮಳೆಗಾಲದಲ್ಲಿಯೇ ಮುಂಗಾರು ಮಳೆ ಆರ್ಭಟ ತಗ್ಗಿದೆ ಎನ್ನುವಷ್ಟರಲ್ಲಿ ಉತ್ತರ ಕರ್ನಾಟಕದಾದ್ಯಂತ ಅಬ್ಬರಿಸಲು ಮಳೆರಾಯ ಸಜ್ಜಾಗಿದ್ದಾನೆ. ಹೌದು, ಉತ್ತರ ಒಳನಾಡಿನ ಹಲವಾರು ಜಿಲ್ಲೆಗಳಲ್ಲಿ ವರುಣ ಕೃಪೆ ತೋರಿದ್ದು ಮುಂದಿನ 48 ಗಂಟೆಗಳ ಕಾಲ ಗುಡುಗು ಮಿಂಚು ಸಹಿತ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ತಜ್ಞ ಡಾ.ಸಿಎಸ್ ಪಾಟೀಲ್ ಅವರು ಮುನ್ಸೂಚನೆ ನೀಡಿದ್ದಾರೆ.
ಸಮುದ್ರ ಮೇಲ್ಮೈನಲ್ಲಿ ಸಣ್ಣ ಸ್ಟ್ರಪ್ ಇದೆ. ಅಲ್ಲದೆ ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿರುವ ಕಾರಣ, ಉತ್ತರ ಕರ್ನಾಟಕದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಭಾರಿ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದರು.

ಒಟ್ಟಾರೆ ಮುಂದಿನ ಮೂರು ದಿನಗಳ ಪೈಕಿ ಇಂದು ಭಾನುವಾರ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರ್ಗಿ, ಕೊಪ್ಪಳ, ವಿಜಯಪುರ ಜಿಲ್ಲೆಯಲ್ಲಿ ಅತ್ಯಧಿಕ ಮಳೆ ಬೀಳಲಿದೆ. ನಾಡಿದ್ದು, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ ಮತ್ತು ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಸುಮಾರು 11 ಸೆಂಟಿ ಮೀಟರ್‌ಗಳಷ್ಟು ಸಾಧಾರಣದಿಂದ ಭಾರಿ ಮಳೆ ಆಗಲಿದೆ. ಹೀಗಾಗಿ ಮುಂದಿನ 48 ಗಂಟೆಗಳ ಕಾಲ ಈ ಮೇಲಿನ ಎಲ್ಲ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.
ದಕ್ಷಿಣ ಒಳನಾಡಿಗೆ ಏನಿದೆ ಮಳೆ ಎಚ್ಚರಿಕೆ
ಉತ್ತರ ಒಳನಾಡಿನಲ್ಲಿ ಬಹುತೇಕ ಮುಂದಿನ ಒಂದು ವಾರ ಮಳೆ ಸಕ್ರಿಯವಾಗಿರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅದೇ ರೀತಿ ದಕ್ಷಿಣ ಒಳನಾಡಿನಲ್ಲಿ ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಪೈಕಿ ಬೇರೆ ಬೇರೆ ದಿನಗಳಲ್ಲಿ ಒಂದು ದಿನ ಭಾರೀ ಮಳೆ ಆಗಿದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ ಒಂದು ದಿನ 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಹವಾಮಾನ ಇಲಾಖೆ ಪ್ರಕಾರ, ಭಾರಿ ಮಳೆಯ ಜಿಲ್ಲೆಗಳನ್ನು ಹೊರತುಪಡಿಸಿದರೆ, ಬೇರೆ ಬೇರೆ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ಕೆಲವೆಡೆ ವ್ಯಾಪಕ ಮಳೆ ಆಗಲಿದೆ. ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.
ಕರಾವಳಿಯಲ್ಲಿ ಮಳೆಯ ತೀವ್ರ ಇಳಿಕೆ
ಮಳೆಗಾಲದ ಆರಂಭದಿಂದ ಹಿಡಿದು ಇಲ್ಲಿಯವರೆಗೆ ಅಬ್ಬರಿಸಿದ್ದ ಕರಾವಳಿ ಜಿಲ್ಲೆಗಳಿಗೆ ಮಳೆರಾಯ ತುಸು ಬಿಡುವು ನೀಡಿದ್ದಾನೆ. ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗುತ್ತಿತ್ತು. ಆದರೆ ಸದ್ಯದ ಮುನ್ಸೂಚನೆ ಪ್ರಕಾರ ಇಲ್ಲಿ ಒಣ ಹವೆ ಮುಂದುವರಿಯಲಿದೆ. ಒಂದರೆಡು ಕಡೆ ಸಾಧಾರಣ ಮಳೆ ಆಗಬಹುದು ಎಂದು ಐಎಂಟಿ ಮುನ್ಸೂಚನಾ ವರದಿ ತಿಳಿಸಿದೆ.












Click it and Unblock the Notifications