Karnataka rain: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಅಬ್ಬರದ ಮಳೆ ಮುನ್ಸೂಚನೆ
ಕರ್ನಾಟಕ, ಸೆಪ್ಟೆಂಬರ್, 04: ಸುಮಾರು ಒಂದು ತಿಂಗಳುಗಳ ಕಾಲ ಬಿಸಿಲಿನ ಬೇಗೆಯಿಂದ ಬೆಂದಿದ್ದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆರಾಯ ತಂಪೆರೆದಿದ್ದಾನೆ. ಹಾಗೆಯೇ ಇದೀಗ ಮುಂಗಾರು ಚುರುಕು ಪಡೆದಿದ್ದು, ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಈ ಜಿಲ್ಲೆಗಳಲ್ಲಿ ಅಬ್ಬರದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಯಾವ್ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಸಾಧಾರಣ ಮಳೆಯಾಗಿದೆ. ಹಾಗೆಯೇ ಇಂದು ಬೆಳಗ್ಗೆ ಕೂಡ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಸಂಜೆ ವೇಳೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನುಳಿದ ಜಿಲ್ಲೆಗಳಲ್ಲೂ ಇಂದು ಮತ್ತು ನಾಳೆಯೂ ಮಳೆ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದೆ.

ರಾಜ್ಯದಲ್ಲಿ ಇದೀಗ ಮತ್ತೆ ಮುಂಗಾರು ಚುರುಕು ಪಡೆದಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾನುವಾರ (ಸೆಪ್ಟೆಂಬರ್ 04) ಮಳೆಯಾಗಿದ್ದು, ಸೋಮವಾರ ಮತ್ತು ಮಂಗಳವಾರವೂ ಮಳೆ ಮುನ್ಸೂಚನೆ ಇದೆ. ಕಲಬುರಗಿ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾನುವಾರ ಉತ್ತಮ ಮಳೆ ಸುರಿದಿದ್ದು, ಇದರಿಂದ ಅನ್ನದಾತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಸೋಮವಾರ ಮತ್ತು ಮಂಗಳವಾರ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆ ಇದೆ. ಕರಾವಳಿಯ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳ ಕೆಲವು ಭಾಗಗಳಲ್ಲಿ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.
ಭಾನುವಾರ ಉತ್ತರ ಒಳನಾಡಿನ ಕೆಲವೆಡೆ ಭಾರೀ ಮಳೆ ಸುರಿದಿದ್ದರೆ, ದಕ್ಷಿಣ ಒಳನಾಡಿನಲ ಕೆಲವೆಡೆ ಮಾತ್ರ ಸಾಧಾರಣ ಮಳೆಯಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ 11 ಸೆಂಟಿ ಮೀಟರ್, ಸೇಡಂ 10 ಸೆಂಟಿ ಮೀಟರ್‌ನಷ್ಟು ಮಳೆ ಬಿದ್ದಿದೆ. ಚಿಕ್ಕಾಬಳ್ಳಾಪುರದ ತೊಂಡೇಭಾವಿ ಹಾಗೂ ಮಂಡ್ಯ ಜಿಲ್ಲೆಯ ಬೆಳ್ಳೂರಿನಲ್ಲಿ ತಲಾ 7 ಸೆಂಟಿ ಮೀಟರ್ ಮಳೆ ಬಿದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನುಳಿದಂತೆ ಯಾದಗಿರಿ ಜಿಲ್ಲೆಯ ಶಹಾಪುರ, ಹುಣಸಗಿ, ಕೆಂಭಾವಿಯಲ್ಲೂ ಮಳೆಯಾಗಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ, ಅಳಂದ, ಅಫಜಲಪುರ, ಜೇವರ್ಗಿ, ನೆಲೋಗೊ, ಯಡ್ರಾಮಿ, ಕಮಲಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ತುಮಕೂರು ಜಿಲ್ಲೆಯ ಗುಬ್ಬಿ, ಬರಗೂರು, ಕೋಲಾರ ಜಿಲ್ಲೆಯ ರಾಯಲ್ಪಾಡು, ಮಾಲೂರು, ವಿಜಯಪುರ ಜಿಲ್ಲೆಯ ಸಿಂದಗಿ, ರಾಯಚೂರು ಜಿಲ್ಲೆಯ ದೇವದುರ್ಗ, ಜಾಲಹಳ್ಳಿ, ಚಿಕ್ಕಬಳ್ಳಾಪುರ ನಗರ, ಕೊಡಗು ಜಿಲ್ಲೆಯ ಭಾಗಮಂಡಲದಲ್ಲೂ ಮಳೆ ಬಿದ್ದಿರುವ ವರದಿಯಾಗಿದೆ.
ಬಾಗಲಕೋಟೆ, ಬೆಳಗಾವಿ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ತಿಳಿಸಿದೆ. ಇನ್ನು ಉತ್ತರ ಒಳನಾಡಿನ ಕೆಲವು ಕಡಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಮತ್ತೊಂದೆಡೆ ಮುಂದಿನ 24 ಗಂಟೆಗಳಲ್ಲಿ ಕಲಬುರಗಿ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಬೀದರ್, ವಿಜಯಪುರ ಜಿಲ್ಲೆಗಳ ಕೆಲವೆಡೆ ಅಬ್ಬರದ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದೆ.












Click it and Unblock the Notifications