Karnataka Rain Alert: ರಾಜ್ಯದಲ್ಲಿ ಮುಂಗಾರು ಚುರುಕು, ಸೆ.21ರವರೆಗೆ ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆ
ಕರ್ನಾಟಕದಲ್ಲಿ ನೈರುತ್ಯ ಮಾನ್ಸೂನ್ ಸಕ್ರಿಯವಾಗಿದ್ದು ಸೆಪ್ಟೆಂಬರ್ 21ರವರೆಗೆ ಎಲ್ಲ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉತ್ತರ ಒಳನಾಡಿನಲ್ಲಿ ನೈರುತ್ಯ ಮಾನ್ಸೂನ್ ಚುರುಕಾಗಿದ್ದು, ಕರಾವಳಿಯಲ್ಲಿ ಸಾಮಾನ್ಯವಾಗಿತ್ತು. ದಕ್ಷಿಣ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ. ಹೀಗಾಗಿ ಉತ್ತರ ಒಳನಾಡಿನಲ್ಲಿ ಮತ್ತು ಕರಾವಳಿ ಕರ್ನಾಟಕದಲ್ಲಿ ಮುಂದಿನ ಒಂದು ವಾರದವರೆಗೆ ಭಾರೀ ಮಳೆಯಾಗಲಿದೆ. ಸೆಪ್ಟೆಂಬರ್ 16 ಹಾಗೂ 17ರಂದು ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಮತ್ತು ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಸೆಪ್ಟೆಂಬರ್ 24ರವರೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಮುನ್ಸೂಚನೆ ಇದೆ. ಸೆಪ್ಟೆಂಬರ್ 17 ಹಾಗೂ 18ರಂದು ಚದುರದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಇನ್ನುಳಿದ ದಿನಗಳಲ್ಲಿ ಚದುರಿದಂತೆ ಮಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 16ರಿಂದ 18ರವರೆಗೆ ಧಾರಾಕಾರ ಮಳೆ ಸುರಿಯಲಿದೆ.

ಎಲ್ಲೆಲ್ಲಿ ಮಳೆ ಸೂಚನೆ?
ಸೆಪ್ಟೆಂಬರ್ 16ರಂದು ಮಂಗಳವಾರ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಬೀದರ್, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಲಘುವಾದ ಮಳೆಯಾಗಲಿದೆ. ಬೆಂಗಳೂರು ಭಾಗದಲ್ಲಿ ಮುಂದಿನ ಎರಡು ದಿನ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29 ಡಿಗ್ರಿ ಸೆಲ್ಸಿಯಸ್ ಹಾಗೂ ಮತ್ತು 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ.
ಮಾನ್ಸೂನ್ ಚಲನೆ ಹೇಗಿದೆ?
ನೈರುತ್ಯ ಮಾನ್ಸೂನ್ ಹಿಂತೆಗೆದುಕೊಳ್ಳುವ ರೇಖೆಯು ಗಂಗಾನಗರ, ನಾಗೌರ್, ಜೋಧಪುರ, ಬಾರ್ಮರ್ ಮೂಲಕ ಹಾದುಹೋಗಲಿದ್ದು, ಮುಂದಿನ 2 ದಿನಗಳಲ್ಲಿ ರಾಜಸ್ಥಾನದ ಕೆಲವು ಭಾಗಗಳು ಮತ್ತು ಪಂಜಾಬ್ ಮತ್ತು ಗುಜರಾತ್‌ನ ಕೆಲವು ಭಾಗಗಳಿಂದ ನೈರುತ್ಯ ಮಾನ್ಸೂನ್ ಮಾರುತಗಳು ಹಿಂತೆಗೆದುಕೊಳ್ಳುವ ಪರಿಸ್ಥಿತಿ ಇದೆ. ಉತ್ತರ ತೆಲಂಗಾಣ ಮತ್ತು ಪೂರ್ವ ಮೇಲ್ಭಾಗದ ವಾಯು ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 3.1 ಕಿ.ಮೀ ವರೆಗೆ ವಿಸ್ತರಿಸಿದೆ. ದಕ್ಷಿಣದ ಮಹಾರಾಷ್ಟ್ರ ಕರಾವಳಿಯಿಂದ ಉತ್ತರ ಒಳನಾಡಿನ ಕರ್ನಾಟಕದಾದ್ಯಂತ ಸರಾಸರಿ ಸಮುದ್ರ ಮಟ್ಟದಿಂದ 3.1 ಮತ್ತು 4.5 ಕಿ.ಮೀ ನಡುವೆ ಕಡಿಮೆ ಒತ್ತಡದ ಪ್ರದೇಶದೊಂದಿಗೆ ಸಂಬಂಧಿಸಿದ ಚಂಡಮಾರುತದ ಪರಿಚಲನೆಯ ಪ್ರಭಾವ ಕಡಿಮೆಯಾಗಿದೆ.












Click it and Unblock the Notifications