ಶಾಲಾ ಪಠ್ಯದಲ್ಲಿ ಯೋಗ ಅಳವಡಿಕೆ: ಸಿದ್ದರಾಮಯ್ಯ
ಬೆಂಗಳೂರು, ಜೂ. 21: ಯೋಗವನ್ನು ಶಾಲಾ-ಕಾಲೇಜು ಪಠ್ಯದಲ್ಲಿ ಅಳವಡಿಸುವಂತೆ ಚಿಂತನೆ ನಡೆಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಯುಷ್ಯ ವೃದ್ಧಿ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗವೇ ಮಾನದಂಡ ಎಂದು ಹೇಳಿದರು. ಇದರ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಆದ್ದರಿಂದ ಶಾಲಾ-ಕಾಲೇಜುಗಳ ಪಠ್ಯದಲ್ಲಿ ಯೋಗವನ್ನು ಅಳವಡಿಸುವಂತೆ ಶಿಕ್ಷಣ ಸಚಿವರಿಗೆ ಸೂಚಿಸಿದ್ದೇನೆ ಎಂದರು.

ಕರ್ನಾಟಕದ ಅನೇಕ ಮಹಾನ್ ಚೇತನಗಳು ಯೋಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕೃಷ್ಣಮಾಚಾರಿ, ಅಯ್ಯರ್, ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ ಮೊದಲಾದವರನ್ನು ನೆನಪು ಮಾಡಿಕೊಳ್ಳಬೇಕು ಎಂದು ಹೇಳಿದರು.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯೋಗ ಪ್ರದರ್ಶನ ಮಾಡಿದರು. ಕರ್ನಾಟಕ ನನ್ನ ತವರು, ಎಲ್ಲರೂ ಯೋಗ ಮಾಡಿ ಎಂದು ಕನ್ನಡದಲ್ಲಿಯೇ ಹೇಳಿದ್ದು ನೆರೆದಿದ್ದವರನ್ನು ಮತ್ತಷ್ಟು ಪುಳಕಿತರನ್ನಾಗಿಸಿತು. ಸುಮಾರು ಮೂರು ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು. ಬೆಂಗಳೂರು, ಶಿವಮೊಗ್ಗ, ಬಳ್ಳಾರಿ, ಕೊಪ್ಪಳ, ರಾಯಚೂರು, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಯೋಗ ದಿನ ಆಚರಣೆ ಮಾಡಲಾಯಿತು.













Click it and Unblock the Notifications