ಎಂಎಲ್ಸಿ ಸ್ಥಾನಕ್ಕಾಗಿ ಮೂರು ಪಕ್ಷಗಳಲ್ಲಿ ಲಾಬಿಯೋ ಲಾಬಿ!
ಬೆಂಗಳೂರು, ಮೇ 27: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸ್ಥಾನ ಹೊಂದಲು ಕಸರತ್ತು ನಡೆಯುತ್ತಿರುವ ಬೆನ್ನಲ್ಲೇ ಎಂಎಲ್ಸಿ ಸ್ಥಾನಕ್ಕಾಗಿ ಮೂರು ಪಕ್ಷಗಳಲ್ಲಿ ಲಾಬಿ ನಡೆಯುತ್ತಿದೆ.
ವಿಧಾನಪರಿಷತ್ತಿನ 11 ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಿರುವುದರಿಂದ ಈ ಸ್ಥಾನಗಳಿಗಾಗಿ ಜೂನ್ 11ರಂದು ಚುನಾವಣೆ ನಡೆಯಲಿದೆ. ಈ ನಡುವೆ ನಾಮ ನಿರ್ದೇಶನಗೊಳ್ಳಲು 20ಕ್ಕೂ ಅಧಿಕ ಮಂದಿ ಸಿದ್ಧವಾಗಿದ್ದಾರೆ.
ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಂಡ ಸದಸ್ಯರ ಪಟ್ಟಿ ಭಾನುವಾರ ರಾತ್ರಿ ಅಥವಾ ಸೋಮವಾರ ಪಟ್ಟಿಗೆ ಅಂತಿಮಗೊಳ್ಳುವ ನಿರೀಕ್ಷೆಯಿದೆ.

ಬಿಜೆಪಿಯ ಕೆ.ಎಸ್.ಈಶ್ವರಪ್ಪ ಹಾಗೂ ಕಾಂಗ್ರೆಸ್ನ ಡಾ.ಜಿ.ಪರಮೇಶ್ವರ್ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿರುವ ಆ ಎರಡು ಸ್ಥಾನಗಳು ಖಾಲಿ ಯಾಗಿವೆ. ಈ ಸ್ಥಾನಗಳಿಗೆ ಹೊಸದಾಗಿ ಅಧಿಸೂಚನೆ ಹೊರಡಬೇಕಿದೆ. ವಿಧಾನಸಭೆಯ 19 ಸದಸ್ಯರಿಗೆ ಒಬ್ಬ ಸದಸ್ಯರನ್ನು ವಿಧಾನಪರಿಷತ್ಗೆ ಕಳುಹಿಸುವ ಅವಕಾಶವಿದೆ. ಸದ್ಯ ಬಿಜೆಪಿಯ ಬಲದ ಮೇಲೆ 5, ಕಾಂಗ್ರೆಸ್ 4, ಜೆಡಿಎಸ್ ಇಬ್ಬರನ್ನು ನಾಮನಿರ್ದೇಶನ ಮಾಡಬಹುದಾಗಿದೆ.
ಬಿಜೆಪಿ ಸದಸ್ಯರಾದ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಸೋಮಣ್ಣ ಬೇವಿನ ಮರದ, ರಘುನಾಥ ರಾವ್ ಮಲ್ಕಾಪುರೆ, ಭಾನುಪ್ರಕಾಶ್, ಕಾಂಗ್ರೆಸ್ನ ಎಂ.ಆರ್.ಸೀತಾರಾಂ, ಇಬ್ರಾಹಿಂ, ಮೋಟಮ್ಮ, ಕೆ.ಗೋವಿಂದರಾಜು, ಜೆಡಿಎಸ್ನ ಸೈಯದ್ ಮುದೀರ್, ಪಕ್ಷೇತರ ಅಭ್ಯರ್ಥಿ ಬಿ.ಎನ್.ಸುರೇಶ್ ಅವಧಿ ಜೂನ್ 17ಕ್ಕೆ ಪೂರ್ಣಗೊಳ್ಳಲಿದೆ.
ಯಾರು ಯಾರು ಲಾಬಿ ನಡೆಸಿದ್ದಾರೆ?:
ಬಿಜೆಪಿ ಪಾಲಿಗಿರುವ 5 ಸ್ಥಾನಗಳ ಪೈಕಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಿವಮೊಗ್ಗದ ರುದ್ರೇಗೌಡ, ಕೆ.ಪಿ.ನಂಜುಂಡಿ ಆಯ್ಕೆ ಬಹುತೇಕ ಖಚಿತವಾಗಿದೆ.
ಉಳಿದಂತೆ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಎಂ.ಬಿ.ಭಾನುಪ್ರಕಾಶ್ ಪುನಾರಾಯ್ಕೆ ಬಯಸಿದ್ದಾರೆ. ಜೊತೆಗೆ ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ, ತೇಜಸ್ವಿನಿ ಅವರೂ ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೆಸ್ಸಿನಲ್ಲಿರುವ 4 ಸ್ಥಾನಕ್ಕೆ ಮಾಜಿ ಸಚಿವ ಎಂ.ಆರ್.ಸೀತಾರಾಂ, ಮೋಟಮ್ಮ ಮರು ಆಯ್ಕೆ ಬಯಸಿದ್ದರೆ, ಕಾಮಾಕ್ಷಿ ರಾಜಣ್ಣ, ರಾಮಚಂದ್ರಪ್ಪ, ವಿ.ಆರ್.ಸುದರ್ಶನ್, ನಿವೇದಿತಾ ಆಳ್ವ, ನಾಗರಾಜ್ ಯಾದವ್, ಹುಚ್ಚಪ್ಪ, ನಂಜಯ್ಯನ ಮಠ, ರಾಣಿ ಸತೀಶ್, ಮುಖ್ಯಮಂತ್ರಿ ಚಂದ್ರು ಮತ್ತಿತರರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಜೆಡಿಎಸ್ನಿಂದ ಫಾರೂಕ್, ವೈಎಸ್ವಿ ದತ್ತ ಆಯ್ಕೆ ಮಾಡುವ ಸಾಧ್ಯತೆ ಇದೆ.












Click it and Unblock the Notifications