ಅತಂತ್ರ ಫಲಿತಾಂಶದ ಮುನ್ಸೂಚನೆ: ಸಿಂಗಾಪುರಕ್ಕೆ ಎಚ್‌ಡಿಕೆ ಭೇಟಿ- ಅಲ್ಲಿಯೇ ಸಿದ್ದವಾಗಲಿದೆಯೇ ಮುಂದಿನ ಸರ್ಕಾರದ ರೂಪರೇಷೆ?
ಬೆಂಗಳೂರು, ಮೇ 11: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬುಧವಾರ ಮತದಾನ ಮುಗಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಸಿಂಗಾಪುರಕ್ಕೆ ತೆರಳಿದ್ದಾರೆ. ಪಕ್ಷದ ಮೂಲಗಳ ಪ್ರಕಾರ, ಕುಮಾರಸ್ವಾಮಿ ಅವರು 'ಸಾಮಾನ್ಯ ಆರೋಗ್ಯ ತಪಾಸಣೆ'ಗಾಗಿ ವಿದೇಶಕ್ಕೆ ತೆರಳಿದ್ದು, ಚುನಾವಣಾ ಫಲಿತಾಂಶ ಪ್ರಕಟವಾಗುವ ದಿನವಾದ ಮೇ 13 ರಂದು ಬೆಂಗಳೂರಿಗೆ ಮರಳಲಿದ್ದಾರೆ.
ಮತದಾನದ ದಿನ ಮುಗಿದ ನಂತರ ಎಚ್‌ಡಿಕೆ ಸಿಂಗಾಪುರಕ್ಕೆ ತೆರಳುತ್ತಿರುವುದು ಇದೇ ಮೊದಲಲ್ಲ ಎಂಬುದು ಕುತೂಹಲ ಮೂಡಿಸಿದೆ. ಅತಂತ್ರ ಫಲಿತಾಂಶ ಸಂದರ್ಭದಲ್ಲಿ ಸಂಭವನೀಯ ಚುನಾವಣೋತ್ತರ ಮೈತ್ರಿ ಕುರಿತು ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ 'ರಹಸ್ಯ ಸಭೆ' ನಡೆಸಲು ಜೆಡಿಎಸ್ ನಾಯಕ ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ಊಹಿಸಲಾಗಿದೆ.

ಬಹು ನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣೆ ಮೇ 10 ರಂದು ನಡೆಯಿತು. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅಬ್ಬರದ ಪ್ರಚಾರದ ನಂತರ ಕನ್ನಡಿಗರು ಮತದಾನ ಮಾಡಿದರು. ಬಹುಪಾಲು ಚುನಾವಣೋತ್ತರ ಸಮೀಕ್ಷೆಗಳು ಪ್ರತಿಪಕ್ಷ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಬಹುದು ಎಂದು ಊಹಿಸಿವೆ. 224 ಸ್ಥಾನಗಳ ಅಸೆಂಬ್ಲಿಯಲ್ಲಿ ಮ್ಯಾಜಿಕ್ ಸಂಖ್ಯೆ 113 ಅನ್ನು ದಾಟಬಹುದು ಎಂದು ಅಭಿಪ್ರಾಯ ಪಟ್ಟಿವೆ.
ಮೇ 13ರಂದು ಸ್ಪಷ್ಟ ಜನಾದೇಶ ದೊರೆಯದಿದ್ದರೆ ಮುಂದಿನ ನಡೆ ಏನು ಎಂಬ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಹೀಗಿರುವಾಗ ಕುಮಾರಸ್ವಾಮಿ ಅವರು ಏಕಾಏಕಿ ಸಿಂಗಾಪುರಕ್ಕೆ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ. ಈ ಬಗ್ಗೆ ಕುಮಾರಸ್ವಾಮಿ ಅವರ ಆಪ್ತ ಮೂಲಗಳು 'ನ್ಯೂಸ್ 9' ಗೆ ಖಚಿತಪಡಿಸಿವೆ. ಮಾಜಿ ಸಿಎಂ ಅವರು ತಮ್ಮ ಒಂದೆರಡು ಆಪ್ತರೊಂದಿಗೆ ಸಿಂಗಾಪುರಕ್ಕೆ ತೆರಳಿದ್ದಾರೆ. ಅವರ ಕುಟುಂಬದ ಯಾವುದೇ ಸದಸ್ಯರು ಅವರೊಂದಿಗೆ ಹೋಗಿಲ್ಲ. ಕುಮಾರಸ್ವಾಮಿ ಅವರು ಆಸ್ಪತ್ರೆಗೆ ದಾಖಲಾಗಿಲ್ಲ ಮತ್ತು 'ಸಾಮಾನ್ಯ ಆರೋಗ್ಯದ ತಪಾಸಣೆಗಾಗಿ ತೆರಳಿದ್ದಾರೆ' ಎಂದು ಮೂಲಗಳು ತಿಳಿಸಿವೆ.
ಕುಮಾರಸ್ವಾಮಿ ಕಳೆದ ವರ್ಷ ಡಿಸೆಂಬರ್‌ನಿಂದ ರಾಜ್ಯಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ. ಏಪ್ರಿಲ್‌ನಲ್ಲಿ ಒಮ್ಮೆ ಜ್ವರದ ಕಾರಣ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಹೃದಯ ಸಂಬಂಧಿ ಸಮಸ್ಯೆಗಳನ್ನು ಹೊಂದಿದ್ದಾರೆ.

ಎಚ್‌ಡಿಕೆ ಸಿಂಗಾಪುರ್ ಗೇಮ್ ಪ್ಲಾನ್
ಫಲಿತಾಂಶಗಳಿಗೆ ಎರಡು ದಿನಗಳ ಮೊದಲು ಸಿಂಗಾಪುರಕ್ಕೆ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ. ಆದರೆ, ಇದು ರಾಜಕೀಯ ಕಾರ್ಯತಂತ್ರದ ಭಾಗವಾಗಿದೆ ಎಂದು ತಿಳಿದುಬಂದಿದೆ.
2018 ರ ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ, ಕುಮಾರಸ್ವಾಮಿ ಅವರು ಆರೋಗ್ಯದ ಕಾರಣಗಳನ್ನು ಉಲ್ಲೇಖಿಸಿ ಸಿಂಗಾಪುರಕ್ಕೆ ಭೇಟಿ ನೀಡಿದ್ದರು. ಫಲಿತಾಂಶಕ್ಕೆ ಒಂದು ದಿನ ಮುಂಚಿತವಾಗಿ ಬೆಂಗಳೂರಿಗೆ ಮರಳಿದರು. ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ನಿಯೋಗದೊಂದಿಗೆ 'ರಹಸ್ಯ ಸಭೆ' ನಡೆಸಿ ಚುನಾವಣೋತ್ತರ ಮೈತ್ರಿಯನ್ನು ಅಂತಿಮಗೊಳಿಸಿದ್ದಾರೆ ಎಂಬ ಊಹಾಪೋಹಗಳಿದ್ದವು.

ಫಲಿತಾಂಶದ ನಂತರ, 2018 ರಲ್ಲಿ ಬಿಜೆಪಿ 104 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ನಂತರ ಕಾಂಗ್ರೆಸ್ 78 ಮತ್ತು ಜೆಡಿಎಸ್ 37 ರಷ್ಟು ಸೀಟುಗಳನ್ನು ಗಳಿಸಿತ್ತು. ಅದೇ ದಿನ, ಕಾಂಗ್ರೆಸ್ ಮತ್ತು ಜೆಡಿಎಸ್ ಅಂದಿನ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಸಾಧಿಸಿದವು. ಇದಕ್ಕೆ ಕುಮಾರಸ್ವಾಮಿ ನೇತೃತ್ವ ವಹಿಸಿದ್ದರು.
ಎರಡು ಪಕ್ಷಗಳು ಎಷ್ಟು ವೇಗವಾಗಿ ಒಗ್ಗೂಡಿ ಮೈತ್ರಿ ಮಾಡಿಕೊಂಡವು ಎಂಬುದು ಕುತೂಹಲಕಾರಿಯಾಗಿದೆ. ಕೆಲವು ರಾಜಕೀಯ ವಿಶ್ಲೇಷಕರು ಸಿಂಗಾಪುರದ ಸಭೆಯು ಎರಡು ಪಕ್ಷಗಳು ತ್ವರಿತವಾಗಿ ಒಂದಾಗಲು ಸಹಾಯ ಮಾಡಿತು ಎಂದು ನಂಬುತ್ತಾರೆ.
ಆಗಿನ ರಾಜ್ಯಪಾಲರು ಆಗಿನ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದು ಮತ್ತು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಸುಪ್ರೀಂ ಕೋರ್ಟ್ 24 ಗಂಟೆಗಳಲ್ಲಿ ವಿಶ್ವಾಸ ಮತಕ್ಕೆ ಆದೇಶ ನೀಡಿದ ನಂತರ ಮೂರು ದಿನಗಳಲ್ಲಿ ರಾಜೀನಾಮೆ ನೀಡಿದ್ದು ಇತಿಹಾಸ. ನಂತರ ಕಾಂಗ್ರೆಸ್ ಮತ್ತು ಜೆಡಿಎಸ್‌ನ 17 ಶಾಸಕರು ರಾಜೀನಾಮೆ ನೀಡಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಕುಮಾರಸ್ವಾಮಿ ಸಿಎಂ ಆಗಿದ್ದು, 14 ತಿಂಗಳ ಕಾಲ ಸರ್ಕಾರವನ್ನು ಮುನ್ನಡೆಸಿದ್ದರು.
ಕುತೂಹಲಕಾರಿ ಸಂಗತಿಯೆಂದರೆ, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಶಾಸಕರು ಪಕ್ಷವನ್ನು ತೊರೆಯುತ್ತಿರುವಾಗ, ಕುಮಾರಸ್ವಾಮಿ ಅವರು ವೈಯಕ್ತಿಕ ಭೇಟಿಗಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿದ್ದರು. ಅಂದಿನ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು 2019ರ ಜೂನ್ 28ರಂದು ಕರ್ನಾಟಕ ತೊರೆದು ಜುಲೈ 7ರಂದು ವಾಪಸಾದರು. ಜುಲೈ 6ರಂದು ಕಾಂಗ್ರೆಸ್‌ನ 13 ಶಾಸಕರು ಮತ್ತು ಜೆಡಿಎಸ್‌ನ 3 ಶಾಸಕರು ರಾಜೀನಾಮೆ ಸಲ್ಲಿಸಿ ಚಾರ್ಟರ್ಡ್ ಫ್ಲೈಟ್‌ನಲ್ಲಿ ಮುಂಬೈಗೆ ತೆರಳಿದ್ದರು. ಜುಲೈ 23 ರಂದು ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಕಳೆದುಕೊಂಡ ನಂತರ ರಾಜೀನಾಮೆ ನೀಡಿದ್ದರು.
ಅದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಜೂನ್ 5, 2022 ರಂದು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯನವರನ್ನು ದೂಷಿಸಿದರು.
'ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಪಿತೂರಿಗಳು ನಡೆಯುತ್ತಿವೆ ಮತ್ತು ನಾನು ಹತಾಶೆಗೊಂಡಿದ್ದೇನೆ. ನಾನು ಸರ್ಕಾರವನ್ನು ಉಳಿಸಲು ಪ್ರಯತ್ನಿಸಿದೆ. ಆದರೆ ಕೆಲವು ಕಾಂಗ್ರೆಸ್ ನಾಯಕರು ಅದಕ್ಕೆ ಅವಕಾಶ ನೀಡಲಿಲ್ಲ. ಸರ್ಕಾರ ಉಳಿಸುವ ಆಸಕ್ತಿ ಕಳೆದುಕೊಂಡು ಅಮೆರಿಕಕ್ಕೆ ತೆರಳಿ ಸರ್ಕಾರ ಪತನಕ್ಕೆ ಅವಕಾಶ ಮಾಡಿಕೊಟ್ಟಿದ್ದೇನೆ' ಎಂದು ಕುಮಾರಸ್ವಾಮಿ ಹೇಳಿದ್ದರು.
ಇದು ಪೂರ್ವಯೋಜಿತ ಕೃತ್ಯ ಎಂಬುದು ಕುಮಾರಸ್ವಾಮಿ ಅವರ ಬಹಿರಂಗಪಡಿಸುವಿಕೆಯಿಂದ ಸ್ಪಷ್ಟವಾಗಿದೆ ಮತ್ತು ಅವರ ಸರ್ಕಾರ ಪತನದ ಬಗ್ಗೆ ಅವರಿಗೆ ತಿಳಿದಿತ್ತು ಎಂದು ಗೊತ್ತಾಗಿದೆ.
ಇದೀಗ ಏಕಾಏಕಿ ಕುಮಾರಸ್ವಾಮಿ ಸಿಂಗಾಪುರಕ್ಕೆ ಭೇಟಿ ನೀಡಿದ್ದು, ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೂ ಅಚ್ಚರಿ ಪಡಬೇಕಾಗಿಲ್ಲ.
ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಮತ್ತು ಬಹುಮತಕ್ಕೆ ಕೊರತೆಯಾದರೆ, ಸರ್ಕಾರ ರಚಿಸಲು ಪಕ್ಷವು ಎಲ್ಲವನ್ನೂ ಮಾಡಲಿದೆ ಎಂದು ಕಂದಾಯ ಸಚಿವ ಮತ್ತು ಬಿಜೆಪಿ ಮುಖಂಡ ಆರ್ ಅಶೋಕ ಈಗಾಗಲೇ ಸುಳಿವು ನೀಡಿದ್ದಾರೆ.












Click it and Unblock the Notifications