Gram Panchayat: ನ.27 ರಿಂದ ಪಂಚಾಯಿತಿ ನೌಕರರ ಹೋರಾಟ, ಬೇಡಿಕೆಗಳು
ಬೆಂಗಳೂರು, ನವೆಂಬರ್ 16: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವೆಂಬರ್ 27ರಿಂದ ಅನಿರ್ಧಿಷ್ಟಾವಧಿ ಹೋರಾಟವನ್ನು ನಡೆಸಲು ಕರೆ ನೀಡಲಾಗಿದೆ. ಬೇಡಿಕೆಗಳ ಕುರಿತು ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿಗೆ ಮನವಿಗಳನ್ನು ಸಲ್ಲಿಕೆ ಮಾಡಲಾಗುತ್ತಿದೆ. ನೌಕರರು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸೇವೆ ಸಹಿತ ಎಲ್ಲಾ ಕಾರ್ಯವನ್ನು ನಿಲ್ಲಿಸಿ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಗ್ರಾಮ ಪಂಚಾಯತ್ ನೌಕರರನ್ನು ಸಿ ಮತ್ತು ಡಿ ದರ್ಜೆಗೆ ಮೇಲ್ದರ್ಜೆಗೇರಿಸುವಂತೆ ಮತ್ತು ಸರ್ಕಾರಿ ಸಿ ಮತ್ತು ಡಿ ಗ್ರೂಪ್ ನೌಕರರಿಗೆ ಇರುವಂತೆ ಪಂಚಾಯತ್ ನೌಕರರಿಗೂ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಯಾರಿಸಿ ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರ ಮತ್ತು ಇಲಾಖೆಯನ್ನು ಒತ್ತಾಯಿಸಿ ಅನಿರ್ಧಿಷ್ಟಾವಧಿಯಾಗಿ ಪಂಚಾಯತ್ ನೌಕರರು ಹೋರಾಟವನ್ನು ನಡೆಸಲಿದ್ದಾರೆ.

ಮನವಿಯ ಪ್ರಮುಖ ಅಂಶಗಳು: ಕಳೆದ ಮೂರು ದಶಕಗಳಿಂದ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್, ಕ್ಲರ್ಕ್/ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್/ ಡಾಟಾ ಎಂಟ್ರಿ ಆಪರೇಟರ್/ ವಾಟರ್ ಅಪರೇಟರ್/ ಅಟೆಂಡೆಂಟ್/ ಕ್ಲೀನರ್ ವೃಂದದಲ್ಲಿ ತಮ್ಮ ಅಮೂಲ್ಯವಾದ ಸೇವೆಯನ್ನು ಪ್ರಮಾಣಿಕವಾಗಿ ಮತ್ತು ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ.
ಕೇಂದ್ರ ಸರ್ಕಾರ ಇರಲಿ, ರಾಜ್ಯ ಸರ್ಕಾರ ಇರಲಿ ನಮ್ಮ ಪಂಚಾಯತ್ ರಾಜ್ ಇಲಾಖೆ ಇರಲಿ ಹಾಗೂ ಇತರ ಯಾವುದೇ ಅನ್ಯ ಇಲಾಖೆಯ ಸೇವೆಗಳನ್ನು ಗ್ರಾಮೀಣ ಭಾಗದ ಬಡ ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಗ್ರಾಮ ಪಂಚಾಯತ್‌ನ ಆರ್ಥಿಕ ಸಂಪನ್ಮೂಲ ಸಂಗ್ರಹ, ತಂತ್ರಾಂಶಗಳ ಸೇವೆ, ಗ್ರಾಮಗಳ ಮೂಲಭೂತ ಸೌಲಭ್ಯಗಳ ಜೊತೆಗೆ ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಂದರಲ್ಲೂ ಮುಂಚೂಣಿಯಾಗಿ ಪಂಚಾಯತ್ ನೌಕರರು ಕನಿಷ್ಠ ವೇತನಕ್ಕೆ ಗರಿಷ್ಠ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ ಎಂದು ಹೇಳಿದೆ.
ಗ್ರಾಮ ಪಂಚಾಯತ್ ನೌಕರರಿಗೆ ಸರಿಯಾದ ವೇತನ ಶ್ರೇಣಿಯನ್ನು ಇಲಾಖೆಯು ನಿಗದಿಪಡಿಸಿಲ್ಲ, ಆರೋಗ್ಯ ಭದ್ರತೆಯನ್ನೂ ಇಲ್ಲಿಯವರೆಗೂ ಒದಗಿಸಿಲ್ಲಾ, ಜೊತೆಗೆ ನಿವೃತ್ತಿ ಜೀವನಕ್ಕೆ ಭವಿಷ್ಯ ನಿಧಿ ಆದೇಶ ಆಗಿ ಎರಡು ದಶಕ ಕಳೆಯುತ್ತಾ ಬಂದರೂ ಸರಿಯಾದ ಆರ್ಥಿಕ ಬದ್ರತೆ ಕೂಡ ದೊರಕಿರುವುದಿಲ್ಲ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಪಂಚಾಯತ್ ನೌಕರರು ತಮ್ಮ ತಮ್ಮ ಸಮಸ್ಯೆಗಳನ್ನೂ ಎಲ್ಲಿಯೂ ತೋರ್ಪಡಿಸದೇ ತಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಹಗಲು ರಾತ್ರಿ ನಿರ್ವಹಿಸುತ್ತಾ ಬಂದಿರುತ್ತಾರೆ.
ಇದರ ಜೊತೆಗೆ 20-25 ವರ್ಷ ಆದರೂ ಪಂಚಾಯತ್ ನೌಕರರಿಗೆ ಇನ್ನೂ ಮುಂದಿನ ಹುದ್ದೆಗಳಿಗೆ ಮುಂಬಡ್ತಿ ಸಿಗದೇ ಪಂಚಾಯತ್ ನೌಕರರು ಶೋಷಣೆಗೊಳಗಾಗುತ್ತಿದ್ದಾರೆ. ಈ ಎಲ್ಲಾ ವಿಚಾರಗಳು ಹಾಗೂ ನೌಕರರ ಶೋಷಣೆ ಮುಕ್ತ ಬದುಕಿಗಾಗಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚಾಯತ್ ನೌಕರರನ್ನು ಸಿ ಮತ್ತು ಡಿ ದರ್ಜೆ ನೌಕರರನ್ನಾಗಿ ಮೇಲ್ದರ್ಜೆಗೇರಿಸುವಂತೆ ಮತ್ತು ಸರ್ಕಾರಿ ಸಿ ಮತ್ತು ಡಿ ಗ್ರೂಪ್ ನೌಕರರಿಗೆ ಇರುವಂತೆ ಪಂಚಾಯತ್ ನೌಕರರಿಗೂ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಯಾರಿಸಿ ಅನುಷ್ಠಾನಗೊಳಿಸುವಂತೆ ಸರ್ಕಾರವನ್ನು ಮತ್ತು ಇಲಾಖೆಯನ್ನು ಒತ್ತಾಯಿಸಲಾಗುತ್ತಿದೆ.
ಆದ್ದರಿಂದ 27ನೇ ನವೆಂಬರ್ 2024ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದಲ್ಲಿ ಎಲ್ಲಾ ನೌಕರರು ನೀರು ಸರಬರಾಜು, ಶುಚಿತ್ವ ಕಾರ್ಯ ಸಹಿತ ಪಂಚಾಯತ್ ನೌಕರರು ಎಲ್ಲಾ ತಮ್ಮ ಕಾರ್ಯವನ್ನು ನಿಲ್ಲಿಸಿ ಆಹೋರಾತ್ರಿ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ನಡೆಸುವುದಾಗಿ ಜಿಲ್ಲಾ ಪಂಚಾಯಿತಿಗೆ ಮನವಿಯನ್ನು ಸಲ್ಲಿಸಲಾಗುತ್ತಿದೆ. ನೌಕರರ ಈ ಹೋರಾಟಕ್ಕೆ ಎಲ್ಲರೂ ತಮ್ಮ ಬೆಂಬಲವನ್ನು ನೀಡಿ ಪಂಚಾಯತ್ ನೌಕರರ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಮತ್ತು ಇಲಾಖೆಯನ್ನು ಒತ್ತಾಯಿಸಬೇಕಾಗಿ ಮನವಿ ಮಾಡಲಾಗುತ್ತಿದೆ.
ನೌಕರರ ಮೂಲ ಬೇಡಿಕೆಗಳು: ಕಾರ್ಮಿಕ ಇಲಾಖೆಯು ಕಾಲ ಕಾಲಕ್ಕೆ ನಿಗದಿಪಡಿಸಿದ ಕನಿಷ್ಠ ವೇತನವನ್ನು ಪ್ರಸ್ತುತ ಗ್ರಾಮ ಪಂಚಾಯತಿಗಳು ಸಿಬ್ಬಂದಿಗಳಿಗೆ ನೀಡುತ್ತಿದ್ದು, ಈ ವ್ಯವಸ್ಥೆಯಿಂದ ಹತ್ತು ಇಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸಿದ ನೌಕರರನಿಗೂ ಇತ್ತಿಚಿಗೆ ಸೇರಿದ ನೌಕರನಿಗೂ ಒಂದೇ ರೀತಿಯ ಕನಿಷ್ಠ ವೇತನ ದೊರಕಿ ಸೇವಾ ಹಿರಿತನದ ಪಂಚಾಯತ್ ಸಿಬ್ಬಂದಿಗಳಿಗೆ ಅನ್ಯಾಯವಾಗುತ್ತಿದೆ.
ಇದಕ್ಕೆ ಪೂರಕವಾಗಿ 23-03-2019ರ ಸರಕಾರದ ಸುತ್ತೋಲೆಯಲ್ಲಿ ಪ್ರಸ್ತಾಪಿಸಿದಂತೆ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಕ್ಲರ್ಕ್, ಕ್ಲರ್ಕ್ ಕಮ್ ಡಿಇಓ, ಬಿಲ್ ಕಲೆಕ್ಟರ್ ಹಾಗೂ ಡಾಟ ಎಂಟ್ರಿ ಅಪರೇಟರ್‌ಗಳಿಗೆ ಸಿ ದರ್ಜೆ ಸ್ಥಾನಮಾನ ನೀಡಬೇಕು ಮತ್ತು ಅಟೆಂಡರ್, ಕ್ಲೀನರ್, ವಾಟರ್ ಮ್ಯಾನ್/ ಪಂಪು ಚಾಲಕ ಇತ್ಯಾದಿ ವೃಂದದವರಿಗೆ ಡಿ ದರ್ಜೆ ಸ್ಥಾನಮಾನ ನೀಡಬೇಕು ಜೊತೆಗೆ ಗ್ರಾಮ ಪಂಚಾಯತ್ ನೌಕರರಿಗೂ ಸರ್ಕಾರಿ ನೌಕರರಿಗೆ ಇರುವಂತೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸಬೇಕು.
ನೌಕರರಿಗೆ ಕನಿಷ್ಠ ವೇತನ ಬದಲು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 112 ಮತ್ತು 113ರಂತೆ ಮತ್ತು ಸರ್ಕಾರದ ಅಧಿಸೂಚನೆ ದಿನಾಂಕ 29-09-2020ರ ಅಧಿಸೂಚನೆಗೆ ಸಮಗ್ರ ತಿದ್ದುಪಡಿ ತಂದು ಪಂಚಾಯತ್ ನೌಕರನ್ನು ಸಿ ಮತ್ತು ಡಿ ಗ್ರೂಪ್‌ಗೆ ಮೇಲ್ದರ್ಜೆಗೇರಿಸುವ ಮೂಲಕ ಸಿ ಮತ್ತು ಡಿ ದರ್ಜೆಯ ವೇತನ ಶ್ರೇಣಿ ನಿಗದಿಪಡಿಸಬೇಕು.












Click it and Unblock the Notifications