Karnataka Government: ಕೋವಿಡ್ ಲಸಿಕೆಯಿಂದ ಹೃದಯಾಘಾತ, ಹಠಾತ್ ಸಾವು : ತನಿಖೆಗೆ ಸಮಿತಿ ರಚಿಸಿದ ಸರ್ಕಾರ
ಬೆಂಗಳೂರು, ಫೆಬ್ರವರಿ 07: ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡಪರಿಣಾಮದಿಂದ ದಿನದಿಂದ ದಿನಕ್ಕೆ ಹಠಾತ್ ಸಾವಿಗೀಡಾದವರ ಬಗ್ಗೆ ಅಧ್ಯಯನ ನಡೆಸಿ, ಮುಂದೆ ಇಂತಹ ಸಾವುಗಳು ಸಂಭವಿಸದಂತೆ ತಡೆಯುವ ಉದ್ದೇಶದಿಂದ ಸಮರ್ಪಕ ಸಂಶೋಧನೆ ನಡೆಸಲು ತಜ್ಞರು ಹಾಗೂ ವಿಜ್ಞಾನಿಗಳನ್ನು ಒಳಗೊಂಡ ಒಂದು ಸಮಿತಿ ರಚನೆಗೆ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಈ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೊರೊನಾ ಕಾಲದ ನಂತರದಿಂದ ಎಳೆಯ ವಯಸಿನವರು, ಯುವಜನರು ಸೇರಿದಂತೆ ಬದುಕಿ ಬಾಳಬೇಕಾದವರು ಇದ್ದಕ್ಕಿದ್ದಂತೆ ಇಲ್ಲವಾಗುತ್ತಿದ್ದಾರೆ, ಇವರನ್ನು ನಂಬಿದ ಕುಟುಂಬಗಳು ಬೀದಿಪಾಲಾಗುತ್ತಿವೆ. ಇದೊಂದು ಗಂಭೀರ ಸಮಸ್ಯೆ, ಆದಷ್ಟು ಶೀಘ್ರ ಈ ಸಮಸ್ಯೆಯ ಮೂಲ ಪತ್ತೆಮಾಡಿ, ಪರಿಹರಿಸಬೇಕು ಎನ್ನುವುದು ನನ್ನ ಯೋಚನೆಯೂ ಆಗಿತ್ತು ಎಂದು ಹೇಳಿದ್ದಾರೆ.

ಇಂತಹ ಸಂದರ್ಭದಲ್ಲಿ ಈ ಸಮಸ್ಯೆಯ ಬಗ್ಗೆ ಗಮನ ಸೆಳೆದು ಹಿರಿಯ ಪತ್ರಕರ್ತರಾದ ರಾಜಾರಾಂ ತಲ್ಲೂರು ಅವರು ಬರೆದ ಪತ್ರ ನನ್ನ ಯೋಚನೆಯನ್ನು ಕಾರ್ಯರೂಪಕ್ಕೆ ತರಲು ಪ್ರೇರಣೆಯಾಯಿತು. ಅವರಿಗೆ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ. ತಜ್ಞರು ಹಾಗೂ ವಿಜ್ಞಾನಿಗಳ ಸಮಿತಿ ನೀಡುವ ವರದಿಯನ್ನು ಆಧರಿಸಿ ಕ್ರಮಗಳನ್ನು ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಶ್ರೀ ರಾಜಾರಾಂ ತಲ್ಲೂರು, ಹಿರಿಯ ಪತ್ರಕರ್ತರು ಇವರು ತಮ್ಮ ಇ-ಮೇಲ್ ಮೂಲಕ, ಇತ್ತೀಚಿಗೆ ರಾಜ್ಯದಲ್ಲಿ ಹೃದಯಾಘಾತ, ಹೃದಯಸ್ತಂಭನ, ಮೆದುಳು ಸಂಬಂಧಿ, ನರ ಸಂಬಂಧಿ ಮತ್ತಿತರ ಕಾರಣಗಳಿಂದಾಗಿ ಯುವ ಜನರು ಹಠಾತ್ ಸಾವಿಗೀಡಾಗುತ್ತಿರುವುದು ದಿನಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದು, ಪ್ರತಿ ಸಾವು ಅವರ ಅವಲಂಬಿತ ಕುಟುಂಬಗಳನ್ನು ಆರ್ಥಿಕ-ಸಾಮಾಜಿಕ ಸಮಸ್ಯೆಗಳಿಗೆ ತಳ್ಳುತ್ತಿದೆ ಎಂದು ತಿಳಿಸಿರುತ್ತಾರೆ.
ಈ ಸಾವುಗಳು ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳ ಕಾರಣಕ್ಕೆ ಸಂಭವಿಸುತ್ತಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದ್ದರಿಂದ, ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳಿಂದ ಹಠಾತ್ ಸಾವಿಗೀಡಾದವರ ಬಗ್ಗೆ ಅಧ್ಯಯನ ನಡೆಸಿ, ಇಂತಹ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿರುತ್ತಾರೆ.
ಆದ್ದರಿಂದ, ಇಂತಹ ಹಠಾತ್ ಸಾವುಗಳ ಕುರಿತಂತೆ ಹಾಗೂ ಮುಂದೆ ಈ ರೀತಿಯ ಸಾವುಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮರ್ಪಕ ಸಂಶೋಧನೆ ನಡೆಸಲು ಒಂದು ತಜ್ಞರ ಹಾಗೂ ವಿಜ್ಞಾನಿಗಳ ಸಮಿತಿಯನ್ನು ರಚಿಸಿ. ವರದಿ ಪಡೆದು, ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.












Click it and Unblock the Notifications