Karnataka Caste Census: ಜಾತಿ ಗಣತಿ ವರದಿ ಜಾರಿ ಬಗ್ಗೆ ಮಹತ್ವದ ಅಪ್ಡೇಟ್ ಕೊಟ್ಟ ಡಿಕೆ ಶಿವಕುಮಾರ್
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಜಾತಿ ಗಣತಿ ವರದಿಯನ್ನು ಮಂಡಿಸಿದೆ. ಇದಕ್ಕೆ ಹಲವು ಸಮುದಾಯಗಳಿಂದ ಸಹಮತ ವ್ಯಕ್ತವಾಗಿದ್ದರೆ, ಇನ್ನೂ ಹಲವು ಸಮುದಾಯ ತೀವ್ರವಾಗಿ ವಿರೋಧಿಸುತ್ತಿವೆ. ಬಿಜೆಪಿ ನಾಯಕರು ಕೂಡ ಈ ವರದಿ ಬಗ್ಗೆ ಗಂಭೀರ ಆರೋಪಗಳನ್ನು ಮಾಡುತ್ತಾ ಸಿಡಿಮಿಡಿಗೊಂಡಿದ್ದಾರೆ. ಇದು ರಾಜ್ಯ ಸರ್ಕಾರದ ಪಾಲಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವೈಜ್ಞಾನಿಕ ಹಾಗೂ ಸಮರ್ಪಕವಾಗಿ ಜಾತಿಗಣತಿ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಜಾತಿ ಗಣತಿ ವರದಿ ಕುರಿತು ಸರ್ಕಾರ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಸಚಿವ ಸಂಪುಟವು ಈ ವರದಿಯನ್ನು ಪರಿಶೀಲಿಸಿ, ಚರ್ಚಿಸಲಿದೆ. ಅಲ್ಲಿರುವ ಸತ್ಯಾಂಶಗಳ ಆಧಾರದ ಮೇಲೆ ಎಲ್ಲರಿಗೂ ನ್ಯಾಯ ಸಿಗಲಿದೆ. ಆದರೆ ಈ ಜಾತಿ ಗಣತಿ ವರದಿ ವಿರುದ್ಧ ನೀಡುತ್ತಿರುವ ಹೇಳಿಕೆಗಳು ರಾಜಕೀಯ ಪ್ರೇರಿತ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಜಾತಿ ಗಣತಿ ಬಗ್ಗೆ ಮಾತನಾಡಿದ್ದಾರೆ. ನಾನು ಬೇರೆ ಜಿಲ್ಲೆಗಳ ಪ್ರವಾಸದಲ್ಲಿದ್ದ ಕಾರಣ ಇನ್ನೂ ಈ ವರದಿ ಏನು ಎಂದು ನಾನು ನೋಡಿಲ್ಲ. ಅಲ್ಲದೆ ಈ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಬೇಕಾಗಿದ್ದು, ವಿಧಾನಸಭೆಯಲ್ಲೂ ಈ ಕುರಿತು ಚರ್ಚಿಸುವುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹಾಗಾಗಿ ಯಾರೂ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವ ಮಾತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಾತಿ ಗಣತಿ ವರದಿ ಬಗ್ಗೆ ಕೆಲವರು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿರಬಹುದು. ಆದರೆ, ನಾವು ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿಯನ್ನು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿದೆ. ಈ ವರದಿ ಕುರಿತು ಚರ್ಚಿಸಲು ಏಪ್ರಿಲ್ 17ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜಾತಿಗಣತಿಯನ್ನು ಸಮರ್ಪಕವಾಗಿ ನಡೆಸಿಲ್ಲ ಎಂದು ಬಿಜೆಪಿ ಆರೋಪ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದಿಂದ ಕೂಡಿದೆ. ಸಮೀಕ್ಷೆಯನ್ನು ಶೇ 95ರಷ್ಟು ನಿಖರವಾಗಿ ನಡೆಸಲಾಗಿದೆ ಎಂದಿದ್ದಾರೆ.
ಶೇ 98ರಷ್ಟು ನಿಖರವಾಗಿ ಗ್ರಾಮಾಂತರ ಹಾಗೂ ಶೇ 96ರಷ್ಟು ನಿಖರವಾಗಿ ನಗರ ಪ್ರದೇಶಗಳಲ್ಲಿ ನಡೆಸಲಾಗಿದೆ. ಸುಮಾರು 1,01,60,000 ಜನರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಸುಮಾರು 1,36,000 ಜನ ಶಿಕ್ಷಕರಿದ್ದರು, ಶಿಕ್ಷಕರಲ್ಲಿ ಹೆಚ್ಚಿನವರು ಸಾಮಾನ್ಯ ವರ್ಗದವರೇ ಆಗಿದ್ದು, ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಲಾಗಿದೆ. ಜಾತಿಗಣತಿಯ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿದ ನಂತರವಷ್ಟೇ ವಿಧಾನಸಭೆಯಲ್ಲಿ ಮಂಡಿಸಲು ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಒಳಮೀಸಲಾತಿ ಜಾರಿಗೆ ತರಲು ಜಸ್ಟೀಸ್ ನಾಗಮೋಹನ್ ದಾಸ್ ಅವರ ಆಯೋಗ ರಚಿಸಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಆದಿ ದ್ರಾವಿಡ, ಆದಿ ಆಂದ್ರ, ಆದಿ ಕರ್ನಾಟಕ, ಎಸ್‌ಸಿಗಳು ಸೇರಿದಂತೆ 102 ಜಾತಿಗಳಿವೆ. ಇವರಲ್ಲಿ ಯಾರು ಯಾವ ಜಾತಿಗೆ ಸೇರಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಸಿಗಬೇಕೆಂಬ ಕಾರಣಕ್ಕೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ ಹಾಗೂ ವಿರೋಧ ಪಕ್ಷದ ನಾಯಕರಾಗಿಯೂ ಅಸಮರ್ಥರಾಗಿದ್ದರು. ಅವರು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬಂದಾಗ ಬಿಜೆಪಿಯವರ ವಿರುದ್ಧವೇ ಹಲವು ಹೇಳಿಕೆಗಳನ್ನು ನೀಡಿದ್ದರು. ಜಾತಿಗಣತಿ ಜಾರಿಗೆ ತರಬೇಕೆಂಬುದು ಕಾಂಗ್ರೆಸ್‌ನ ಭರವಸೆಯಾಗಿದೆ. ಒಂದು ಕುಟುಂಬದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ ತಿಳಿಯುವುದು ಸರ್ಕಾರಕ್ಕೆ ಅವಶ್ಯಕವಾಗಿದೆ. ಸ್ವಾತಂತ್ರ್ಯ ನಂತರ ಜಾತಿಗಣತಿ ನಡೆದಿಲ್ಲ, ಹಲವು ಸಂದರ್ಭಗಳಲ್ಲಿ ನ್ಯಾಯಾಲಯಗಳಲ್ಲಿ ಈ ಬಗ್ಗೆ ಮಾಹಿತಿ ಕೇಳಲಾಗಿತ್ತು. ಆದ್ದರಿಂದ ಜಾತಿಗಣತಿ ಮಾಡಬೇಕಾದ ಅನಿವಾರ್ಯತೆಯಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ
ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಸೇರಿದಂತೆ ಅವಶ್ಯಕ ವಸ್ತುಗಳ ಬೆಲೆ ಏರಲು ಕಾರಣ ಕೇಂದ್ರ ಬಿಜೆಪಿ ಸರ್ಕಾರ. ಕೇಂದ್ರದ ಬಿಜೆಪಿಯ ತಪ್ಪು ನೀತಿಗಳಿಂದಾಗಿ ಇಡೀ ದೇಶದಲ್ಲಿ ಬೆಲೆ ಏರಿಕೆಯಾಗಿದೆ. ಬಿಜೆಪಿ ನಾಯಕರಿಗೆ ಜನಾಕ್ರೋಶ ಯಾತ್ರೆ ಮಾಡುವ ಯಾವ ನೈತಿಕತೆಯು ಇಲ್ಲ. ರಾಜ್ಯ ಸರ್ಕಾರ ಹೆಚ್ಚಿಸಿರುವ ಹಾಲಿನ ದರದಿಂದ ರೈತರಿಗೆ ಲಾಭ ಹೋಗುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಚ್ಚಾ ತೈಲದ ಬೆಲೆಯ ಮೇಲೆ ನಿಗದಿಯಾಗುತ್ತದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲಕ್ಕೆ 120 ಡಾಲರ್ ಇತ್ತು, ಈಗ 65 ಡಾಲರ್‌ಗೆ ಇಳಿದಿದೆ. ಅಂದು ಗ್ಯಾಸ್ ಸಿಲಿಂಡರ್ ಬೆಲೆ 400 ರೂಪಾಯಿ ಇತ್ತು. ಇಂದು 800 ರೂಪಾಯಿ ಮೀರಿದೆ. ಪೆಟ್ರೋಲ್-ಡೀಸೆಲ್ ಬೆಲೆಯನ್ನು ಮೋದಿ ಸರ್ಕಾರ ಹೆಚ್ಚಿಸಿರುವ ಬಗ್ಗೆ ಜನರು ಪ್ರಶ್ನೆ ಕೇಳಬೇಕಿದೆ ಎಂದು ತಿರುಗೇಟು ನೀಡಿದ್ದಾರೆ.

ಸರ್ಕಾರ ಆರ್ಥಿಕ ದಿವಾಳಿಯಾಗಿದೆ ಎಂಬ ಬಿಜೆಪಿಯವರ ಆರೋಪ ಅವರಿಗೇ ನಾಚಿಕೆ ಆಗಬೇಕು. ಬಿಜೆಪಿಯವರ ಕಾಲದಲ್ಲಿ ಅನುದಾನವಿಲ್ಲದಿದ್ದರೂ ಕಾಮಗಾರಿಗಳಿಗೆ ಮಂಜೂರಾತಿ ನೀಡಿ, ಟೆಂಡರ್ ಪ್ರಕ್ರಿಯೆ ಕೈಗೊಂಡಿದ್ದರು. ಈಗ ನಮಗೆ ಪಾಠ ಹೇಳುತ್ತಿದ್ದಾರೆ. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರ ಸರ್ಕಾರದ ಅವಧಿಯಲ್ಲಿಯೇ ರಾಜ್ಯದ ಆರ್ಥಿಕತೆ ಕುಸಿದಿತ್ತು. ನಮ್ಮ ಅವಧಿಯಲ್ಲಿ ಹಿಂದಿನ ವರ್ಷಕ್ಕಿಂತ ಈ ಸಾಲಿನ ಬಜೆಟ್ ಪ್ರಮಾಣ ಸುಮಾರು 38 ಸಾವಿರ ಕೋಟಿಯಷ್ಟು ಹೆಚ್ಚಾಗಿದೆ. ಇದು ಸರ್ಕಾರವೊಂದರ ಆರ್ಥಿಕ ದಿವಾಳಿತನವೇ? ಎಂದು ಪ್ರಶ್ನೆ ಕೇಳಿದ್ದಾರೆ. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುಂಚೆ ದೇಶದ ಮೇಲೆ 53,11,000 ಕೋಟಿ ಸಾಲವಿತ್ತು. ಆದರೆ, ಈಗ 200 ಲಕ್ಷ ಕೋಟಿಗೂ ಹೆಚ್ಚಾಗಿದೆ. ದೇಶದ ಸಾಲ ನಾಲ್ಕು ಪಟ್ಟು ಹೆಚ್ಚಲು ನರೇಂದ್ರ ಮೋದಿಯವರೇ ಕಾರಣ ಅಲ್ವಾ? ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications