ಸರ್ಕಾರಿ ಶಾಲಾ-ಕಾಲೇಜುಗಳಿಗೆ ಹೊಸ ರೂಲ್ಸ್: ಶಿಕ್ಷಕರು, ವಿದ್ಯಾರ್ಥಿಗಳಿಗೆ ಎಐ ಆಧಾರಿತ ಇ-ಹಾಜರಾತಿ ಕಡ್ಡಾಯ
ಬೆಂಗಳೂರು: ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಲಿದ್ದು, ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ 'ಇ-ಹಾಜರಾತಿ' (E-Attendance) ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮರು ಆದೇಶ ಹೊರಡಿಸಿದೆ. ತಂತ್ರಜ್ಞಾನದ ಬಳಕೆಯೊಂದಿಗೆ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಈ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ವಿದ್ಯಾರ್ಥಿಗಳಿಗೆ 'ನಿರಂತರ' ಮುಖ ಗುರುತಿಸುವಿಕೆ ವ್ಯವಸ್ಥೆ
ಮಕ್ಕಳ ಹಾಜರಾತಿಯನ್ನು ನಿಖರವಾಗಿ ದಾಖಲಿಸುವ ಉದ್ದೇಶದಿಂದ, ಎಐ ತಂತ್ರಜ್ಞಾನ ಆಧಾರಿತ ಮುಖಚರ್ಯೆ ಗುರುತಿಸುವಿಕೆ ( ಫೇಸ್ ರೆಕಗ್ನಿಷನ್ ) ಅಳವಡಿಸಲಾಗುತ್ತಿದೆ. ಈ ಯೋಜನೆಗೆ 'ನಿರಂತರ' ಎಂದು ಹೆಸರಿಡಲಾಗಿದ್ದು, ಕಳೆದ ರಾಜ್ಯ ಬಜೆಟ್‌ನಲ್ಲಿಯೇ ಇದರ ಘೋಷಣೆಯಾಗಿತ್ತು. ರಾಜ್ಯದ ಒಟ್ಟು 52,686 ಶಾಲೆಗಳಲ್ಲಿ ಈ ನೂತನ ವ್ಯವಸ್ಥೆಯನ್ನು ಅಳವಡಿಸಲು ಆರಂಭದಲ್ಲಿ 5 ಕೋಟಿ ರೂ ಅನುದಾನವನ್ನು ಮೀಸಲಿಡಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ 2025-26ನೇ ಸಾಲಿನಲ್ಲಿ ಇದನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಹಿಂದಿನ ಆದೇಶವನ್ನು ಹಿಂಪಡೆದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಇ-ಆಡಳಿತ ಕೇಂದ್ರದ ಸಹಯೋಗದೊಂದಿಗೆ 2.16 ಕೋಟಿ ರೂ. ವೆಚ್ಚದಲ್ಲಿ ಮುಂಬರುವ 2026-27ನೇ ಸಾಲಿನಿಂದ ಕಡ್ಡಾಯವಾಗಿ ಜಾರಿಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಶಿಕ್ಷಕರು ಹಾಗೂ ಸಿಬ್ಬಂದಿಗೆ 'ಕಾಮ್ಸ್' (KAMS) ಕಡ್ಡಾಯ
ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಸರ್ಕಾರಿ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಶಿಕ್ಷಕರು, ಮುಖ್ಯಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರು ಸೇರಿದಂತೆ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೂ ಹಾಜರಾತಿ ನಿಯಮಗಳು ಬದಲಾಗಿವೆ. ಈವರೆಗೆ ಇಲಾಖೆಯ ಕಚೇರಿಗಳಲ್ಲಿ ಹಾಗೂ ಶಾಲೆಗಳಲ್ಲಿ ಬಳಸಲಾಗುತ್ತಿದ್ದ ಸಾಂಪ್ರದಾಯಿಕ ಬಯೋಮೆಟ್ರಿಕ್ (Biometric) ಹಾಜರಾತಿ ಯಂತ್ರಗಳನ್ನು ಕೈಬಿಡಲು ನಿರ್ಧರಿಸಲಾಗಿದೆ. ಇದರ ಬದಲಾಗಿ, ಸಂಪೂರ್ಣವಾಗಿ ಮೊಬೈಲ್ ಆಧಾರಿತ 'ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ' (KAMS - Karnataka Attendance Management System) ಅಪ್ಲಿಕೇಷನ್ ಮೂಲಕವೇ ಹಾಜರಾತಿಯನ್ನು ದೃಢೀಕರಿಸುವುದನ್ನು ಕಡ್ಡಾಯಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಮತ್ತೊಂದು ಆದೇಶ ಹೊರಡಿಸಿದೆ.
ಈಗಾಗಲೇ ಕೆಲವು ಆಯ್ದ ಪಿಯು ಕಾಲೇಜುಗಳು ಹಾಗೂ ಶಾಲೆಗಳಲ್ಲಿ 'ಕಾಮ್ಸ್' ಆ್ಯಪ್ ಅನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಇದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ, ಮುಂಬರುವ ಶೈಕ್ಷಣಿಕ ವರ್ಷದಿಂದ ರಾಜ್ಯದ ಮೂಲೆ ಮೂಲೆಯಲ್ಲಿರುವ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಿಗೂ ಈ ನಿಯಮ ಕಡ್ಡಾಯವಾಗಿ ಅನ್ವಯವಾಗಲಿದೆ.
ಪರೀಕ್ಷಾ ಕರ್ತವ್ಯಕ್ಕೂ ಇದೇ ನಿಯಮ
ಈ ಇ-ಹಾಜರಾತಿ ವ್ಯವಸ್ಥೆಯು ಕೇವಲ ದೈನಂದಿನ ತರಗತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಮುಂಬರುವ ದಿನಗಳಲ್ಲಿ ಪರೀಕ್ಷಾ ಕಾರ್ಯಗಳು ಹಾಗೂ ಮೌಲ್ಯಮಾಪನ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೂ ಈ ಫೇಸ್ ರೆಕಗ್ನಿಷನ್ ಅಥವಾ ಎಐ ಆಧಾರಿತ ಇ-ಹಾಜರಾತಿಯೇ ಕಡ್ಡಾಯವಾಗಿರಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.













Click it and Unblock the Notifications