Karnataka: ಸಾರಿಗೆ ದರ ನಿಯಂತ್ರಣ ಸಮಿತಿ (PTFRC) ರಚಿಸಿದ ಸರ್ಕಾರ, ಕಾರ್ಯಗಳೇನು?
ಬೆಂಗಳೂರು, ಸೆಪ್ಟಂಬರ್ 21: ಕರ್ನಾಟಕ ಸರ್ಕಾರ ಸಾರಿಗೆ ನಿಗಮಗಳನ್ನು ಬಲಪಡಿಸುವ ಉದ್ದೇಶದಿಂದ ಇಂದು ಭಾನುವಾರ KERC ಮಾದರಿಯಲ್ಲಿ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ (PTFRC) ರಚಿಸಿ ಅಧಿಸೂಚನೆ ಹೊರಡಿಸಿದೆ. ಸಾರ್ವಜನಿಕ ಸಾರಿಗೆ ಸಂಸ್ಥೆಗಳ ಪ್ರಯಾಣ ದರ ಏರಿಕೆಗೆ ಈ ಹಿಂದೆ ಇಂತಹ ಯಾವುದೇ ಸಮಿತಿಗಳು ರನಚೆ ಆಗಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ರಾಜಕೀಯ ಇಚ್ಛಾಶಕ್ತಿ ಕಾರಣಗಳಿಂದ ಸಾರಿಗೆ ನಿಗಮಗಳ ವ್ಯಾಪ್ತಿಯ ಬಸ್‌ಗಳ ಪ್ರಯಾಣ ದರವನ್ನು ಏರಿಕೆ ಮಾಡುವುದಿಲ್ಲ. ಕಾಲಕಾಲಕ್ಕೆ ಹೆಚ್ಚಳವಾಗುವ ಡೀಸೆಲ್ ಬೆಲೆ ಮತ್ತು ಇತರೆ ವೆಚ್ಚವನ್ನು ಸರಿದೂಗಿಸಲು ಇಂತಿಷ್ಟು ದರ ಪರಿಷ್ಕರಣೆ ಅವಶ್ಯಕವಾಗಿರುತ್ತದೆ. ಇಲ್ಲವಾದಲ್ಲಿ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿ, ಸದೃಢತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಉದಹಾರಣೆಗೆ 'ಬಿ.ಎಂ.ಟಿ.ಸಿ 2014 ರಲ್ಲಿ ದರ ಹೆಚ್ಚಾಗಿದ್ದರೆ, ಇತರ ಸಾರಿಗೆ ನಿಗಮಗಳಲ್ಲಿ 2020 ರಲ್ಲಿ ಪ್ರಯಾಣದ ದರವನ್ನು ಏರಿಕೆ ಮಾಡಲಾಗಿತ್ತು'. 2014 ರಲ್ಲಿನ ಪ್ರತಿದಿನ ಡೀಸೆಲ್ ವೆಚ್ಚ ರೂ.7 ಕೋಟಿ ಆಗಿದ್ದು, ಇದೀಗ 2025ರಲ್ಲಿ ರೂ.13 ಕೋಟಿಗೆ ಏರಿಕೆಯಾಗಿದೆ. 2014 ರಲ್ಲಿದ್ದ ಪ್ರತಿದಿನದ ಸಿಬ್ದಂದಿ ವೆಚ್ಚವು 6 ಕೋಟಿ ರೂಪಾಯಿ ಇದ್ದದ್ದು, ಇದೀಗ 12 ಕೋಟಿ ರೂಪಾಯಿಗೆ ಹೆಚ್ಚಾಗಿದೆ. ವೆಚ್ಚಗಳಲ್ಲಿ ಸುಮಾರು ಶೇಖಡಾ 100ರಷ್ಟು ಏರಿಕೆಯಾಗಿರುವುದನ್ನು ಗಮನಿಸಬೇಕು.
ಕಾಲ ಕಾಲಕ್ಕೆ ದರ ಹೆಚ್ಚಳ ಸಮಂಜಸ
ಇದರೊಂದಿಗೆ 10 ಅಥವಾ 8 ವರ್ಷಗಳಿಗೊಮ್ಮೆ ಒಮ್ಮೆಲೇ ಹೆಚ್ಚು ದರ ಪರಿಷ್ಕರಣೆ ಸಾರ್ವಜನಿಕ ಪ್ರಯಾಣಿಕರಿಗೂ ಹೊರೆಯಾಗುತ್ತದೆ. ಕಾಲಕಾಲಕ್ಕೆ ಅತ್ಯಲ್ಪ ಪ್ರಯಾಣ ದರ ಏರಿಕೆಯು ವೈಜ್ಞಾನಿಕವಾಗಿ ಸಮಂಜಸವಾಗಿರುತ್ತದೆ. ರಾಜಕೀಯ ಇಚ್ಛಾಶಕ್ತಿಗಳಿಂದ ದೂರವಿರಿಸಿ, ಪ್ರಯಾಣ ದರ ನಿರ್ವಹಣಾ ಸಮಿತಿಯು KERC ಮಾದರಿಯಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದರಿಂದ ಸಾರಿಗೆ ಸಂಸ್ಥೆಗಳನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಈ ಕಾರಣಗಳಿಂದಾಗಿ, ಕರ್ನಾಟಕ ಮೋಟಾರು ವಾಹನ ನಿಯಮಗಳು, 1989 ರಡಿಯಲ್ಲಿ ರಾಜ್ಯ ಸರ್ಕಾರವು ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ಎಂಬ ಸಮಿತಿ ರಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಸಮಿತಿಯಲ್ಲಿ ಯಾರೆಲ್ಲ ಇರುತ್ತಾರೆ?
ಈ ಸಮಿತಿಯು ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡಿರುತ್ತದೆ. ಅಧ್ಯಕ್ಷರು ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಕರ್ನಾಟಕದ ಗೌರವಾನ್ವಿತ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರಾಗಿರಬೇಕು. ಇಬ್ಬರು ಸದಸ್ಯರಲ್ಲಿ ಒಬ್ಬರು ಕಾನೂನಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ ನಿವೃತ್ತ ಪ್ರಧಾನ ಕಾರ್ಯದರ್ಶಿ ಅಥವಾ ಸರ್ಕಾರದ ಕಾರ್ಯದರ್ಶಿಯಾಗಿರಬೇಕು. ಇನ್ನೊಬ್ಬ ಸದಸ್ಯರು ಕೈಗಾರಿಕಾ ತಜ್ಞರು ಅಥವಾ ಹಣಕಾಸು ತಜ್ಞರಾಗಿರಬಹುದು. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸದಸ್ಯ- ಕಾರ್ಯದರ್ಶಿಯಾಗಿರುತ್ತಾರೆ.
ಸಮಿತಿ ಕಾರ್ಯಗಳೇನು?
* ಸಮಿತಿಯು ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಗಳನ್ನು ಅಧ್ಯಯನ ಮಾಡುತ್ತದೆ ಮತ್ತು ಕಾಲಕಾಲಕ್ಕೆ ವಿವಿಧ ದರಗಳ ಪರಿಷ್ಕರಣೆಯನ್ನು ಆಯಾ ರಸ್ತೆ ಸಾರಿಗೆ ನಿಗಮಕ್ಕೆ ಸೂಚಿಸುತ್ತದೆ.
* ಹಣಕಾಸು ಮತ್ತು ಕಾರ್ಯಾಚರಣೆಯನ್ನು ಸುಧಾರಿಸಲು ದರಗಳ ಮೇಲೆ ವಿವಿಧ ಸರ್ ಚಾರ್ಜ್ ಗಳು, ಶುಲ್ಕಗಳನ್ನು ವಿಧಿಸಲು ಸಮಿತಿಯು ಸೂಚಿಸಬಹುದು.
ಸಮಿತಿಯು, ರಸ್ತೆ ಸಾರಿಗೆ ನಿಗಮಗಳಿಗೆ ನೀಡಲಾದ ಶಿಫಾರಸುಗಳ ಪ್ರತಿಯನ್ನು, ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮುಂದೆ ಮಂಡಿಸಲು ಸರ್ಕಾರಕ್ಕೆ, ಪ್ರತಿ ವರ್ಷ ಏಪ್ರಿಲ್ 1 ರ ನಂತರ ಸಾಧ್ಯವಾದಷ್ಟು ಬೇಗ ಮತ್ತು ಡಿಸೆಂಬರ್ 31 ರ ಒಳಗೆ ವಾರ್ಷಿಕ ವರದಿಯಾಗಿ ಸಲ್ಲಿಸಬೇಕು. ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರವು ಸಾರಿಗೆ ಸಂಸ್ಥೆಗಳನ್ನು ಆರ್ಥಿಕವಾಗಿ ಬಲಗೊಳಿಸಲು ಮಹತ್ವದ ಹೆಜ್ಜೆ ಇಟ್ಟಿದೆ.












Click it and Unblock the Notifications