DK Shivakumar V/S R Ashok: ಈ ಬಾರೀ ಕನಕಪುರದಲ್ಲಿ ಬಿಜೆಪಿ ಕಮಲ ಅರಳಲಿದೆ: ಬಸವರಾಜ ಬೊಮ್ಮಾಯಿ
ರಾಮನಗರ: ಮೇ7: ಸೋಲಿಲ್ಲದ ಸರದಾರ ಡಿ ಕೆ ಶಿವಕುಮಾರ್ ಅವರನ್ನ ಸೋಲಿಸಲು ಬಿಜೆಪಿ ಪಣತೊಟ್ಟಿದ್ದು, ಒಕ್ಕಲಿಗರ ನಾಯಕ ಆರ್ ಅಶೋಕ್ ಅವರನ್ನ ಕನಕಪುರದಿಂದ ಕಣಕ್ಕಿಳಿಸಿದ್ದು ಹಲವು ತಂತ್ರಗಾರಿಕೆಯ ಜೊತೆಗೆ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಬ್ಬರ ಪ್ರಚಾರವನ್ನ ನಡೆಸಿದರು.
ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ ಪರ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಅವರು, ನಿಮ್ಮ ಉತ್ಸಾಹ ನೋಡಿದರೆ ಕನಕಪುರದಲ್ಲಿ ಬಿಜೆಪಿಯ ಕಮಲ ಅರಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇದು ಕನ್ನಡ ನಾಡಿನ ಭವಿಷ್ಯ ನಿರ್ಧರಿಸುವ ಚುನಾವಣೆ. ಬಿಜೆಪಿ ಕಾರ್ಯಕರ್ತರ ಪಕ್ಷ. ಅಶ್ವತ್ಥ್ ನಾರಾಯಣ್ ಅವರು ಈ ಭಾಗದಲ್ಲಿ ಸಾಕಷ್ಟು ಸಂಘಟನೆ ಮಾಡಿದ್ದಾರೆ. ಇಲ್ಲಿ ಶಕ್ತಿ ಬರಬೇಕಾದರೆ ಸಾಮ್ರಾಟ್ ಅಶೊಕ್ ಅವರೇ ಬರಬೇಕು ಅಂತ ತೀರ್ಮಾನ ಮಾಡಿದ್ದೇವೆ ಎಂದರು.
ಡಬಲ್ ಎಂಜಿನ್ ಸರ್ಕಾರ ಮೋದಿಯವರು ವ್ಯಾಕ್ಸಿನೇಷನ್ ಕೊಟ್ಟಿದ್ದರಿಂದ ನಾವೆಲ್ಲ ಕೋವಿಡ್ ಮುಕ್ತರಾಗಿದ್ದೇವೆ. ಕಾಂಗ್ರೆಸ್ ನವರು ಲಸಿಕೆ ವಿರುದ್ಧ ಅಪ ಪ್ರಚಾರ ಮಾಡಿದ್ದರು. ಪ್ರವಾಹ ಬಂದಾಗ ಬೆಳೆ ಪರಿಹಾರ ಡಬಲ್ ಪರಿಹಾರ ಕೊಟ್ಟಿದ್ದೇವೆ ಎಂದರು.
ಅಶೋಕ್ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಕ್ರಾಂತಿ ಮಾಡಿದ್ದೇವೆ. ಗ್ರಾಮ ವಾಸ್ತವ್ಯ ಮಾಡುವ ಮೂಲಕ ಗ್ರಾಮಗಳಲ್ಲಿನ ಜನರ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ಇಂತಹ ವ್ಯಕ್ತಿ ಇಲ್ಲಿ ಶಾಸಕರಾಗಬೇಕೊ? ಬೇಡ್ವೊ. ನಾನು ಸಿಎಂ ಆದ ತಕ್ಷಣ ವಿದ್ಯಾನಿಧಿ ಯೋಜನೆ ಕೊಟ್ಟಿದ್ದೇನೆ. ಇದರಿಂದ 11 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಆಗಿದೆ ಎಂದರು.

ಕಾಂಗ್ರೆಸ್ ನವರು ಗ್ಯಾರೆಂಟಿ ಅಂತ ಬರುತ್ತಿದ್ದಾರೆ. ಯಾವುದು ಮಾರಾಟವಾಗುವುದಿಲ್ಲವೋ, ಅದಕ್ಕೆ ಗ್ಯಾರೆಂಟಿ ಕೊಡುತ್ತಾರೆ. ಕಾಂಗ್ರೆಸ್ ಗೆ ಈಗ ಗ್ಯಾರೆಂಟಿ ಇಲ್ಲ. ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಈಗ ಹೇಳುತ್ತಿದ್ದಾರೆ. ನಾವು 2013 ರಲ್ಲಿಯೇ ಕೊಡುತ್ತಿದ್ದೇವೆ. ಅದನ್ನು ಕಡಿಮೆ ಮಾಡಿದವರು ಇವರೇ ಎಂದು ಹೇಳಿದ ಅವರು, ಕಾಂಗ್ರೆಸ್ ಪಕ್ಷ ಅಂದರೆ ಭ್ರಷ್ಟಾಚಾರ. ಅವರು ಭ್ರಷ್ಟಾಚಾರ ಮಾಡಿ ನಮ್ಮ ಕಡೆ ಬೆರಳು ತೋರುತ್ತಿದ್ದಾರೆ. ಆದರೆ ಮೂರು ಬೆರಳು ಅವರ ಕಡೆ ತೋರಿಸುತ್ತವೆ. ಕಾಂಗ್ರೆಸ್ ಸಮಾಜ ಒಡೆಯುವ ಪಕ್ಷ. ಸಮುದಾಯಗಳನ್ನು ಒಡೆದು ಲಾಭ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಸಮಾಜ ಒಡೆಯುವವರು ಬೇಕೊ, ಸಮಾಜ ಒಗ್ಗೂಡಿಸುವ ಬಿಜೆಪಿ ಬೇಕೋ ಎಂದರು.
ಸಮಾಜವನ್ನೂ ಒಗ್ಗೂಡಿಸುವುದು ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಕನಕಪುರದಲ್ಲಿ ಅಶೋಕ ಅವರ ಕೈ ಬಲ ಪಡಿಸಿ,ಅಶೋಕ ಅವರನ್ನು ಗೆಲ್ಲಿಸಿಕೊಂಡು ಬನ್ನಿ, ಕನಕಪುರ ಕ್ಷೇತ್ರಕ್ಕೆ ಎಷ್ಟು ಅನುದಾನ ಬೇಕೋ, ಅಷ್ಟು ನಾನು ಕೊಡುತ್ತೇನೆ ಎಂದರು.












Click it and Unblock the Notifications