Karnataka elections: ಒಕ್ಕಲಿಗ ಸಮುದಾಯದ ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟ ಬಿಜೆಪಿ
ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಚೆನ್ನಾಗಿ ಬೇರೂರಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಹಿಡಿತದಿಂದ ತನ್ನ ಭದ್ರಕೋಟೆಯನ್ನಾಗಿಸಲು ದಶಕಗಳಿಂದ ಬಿಜೆಪಿ ಪ್ರಯತ್ನಿಸುತ್ತಿದೆ.
ಬೆಂಗಳೂರು, ಮಾರ್ಚ್ 19: ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಪಕ್ಷವು ಮತ್ತೇ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಸಾಕಷ್ಟು ಕಸರತ್ತು ನಡೆಸುತ್ತಲೇ ಇದೆ. ಕರ್ನಾಟಕದಲ್ಲಿ ಪಕ್ಷವು ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಗಮನಾರ್ಹವಾಗಿ ಹಳೆ ಮೈಸೂರು ಭಾಗ ಪ್ರಮುಖವಾಗಿದೆ. ಹೀಗಾಗಿಯೇ ಬಿಜೆಪಿ ಈ ಭಾಗದತ್ತ ತನ್ನ ಗಮನ ಕೇಂದ್ರೀಕರಿಸುತ್ತಿದೆ.
ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಚೆನ್ನಾಗಿ ಬೇರೂರಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಹಿಡಿತದಿಂದ ತನ್ನ ಭದ್ರಕೋಟೆಯನ್ನಾಗಿಸಲು ದಶಕಗಳಿಂದ ಬಿಜೆಪಿ ಪ್ರಯತ್ನಿಸುತ್ತಿದೆ. ಈ ಭಾಗದಲ್ಲಿ ತನ್ನ ರೆಕ್ಕೆಗಳನ್ನು ಚಾಚಲು ಹೆಣಗಾಡುತ್ತಿದೆ. ಹಳೇ ಮೈಸೂರು ಪ್ರದೇಶವು ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಕೋಲಾರ, ತುಮಕೂರು ಮತ್ತು ಹಾಸನ ಜಿಲ್ಲೆಗಳನ್ನು ಒಳಗೊಂಡಿದೆ.

ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಈ ಜಿಲ್ಲೆಗಳ 58 ವಿಧಾನಸಭಾ ಸ್ಥಾನಗಳ ಪೈಕಿ ಜೆಡಿಎಸ್ 24, ಕಾಂಗ್ರೆಸ್ 18 ಮತ್ತು ಬಿಜೆಪಿ 15 ಸ್ಥಾನಗಳಲ್ಲಿ ಆಡಳಿತ ನಡೆಸುತ್ತಿದೆ. ಇದರ ಜೊತೆಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲವನ್ನು ಪ್ರತಿನಿಧಿಸುವ ಬಿಎಸ್‌ಪಿ ಉಚ್ಛಾಟಿತ ಶಾಸಕ ಎನ್.ಮಹೇಶ್ ಅವರ ಬೆಂಬಲವೂ ಬಿಜೆಪಿಗೆ ಇದೆ.
ಒಕ್ಕಲಿಗರು ಅತೀ ಹೆಚ್ಚಾಗಿರುವ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಏಳು ಶಾಸಕರ ಪೈಕಿ ಆರು, ರಾಮನಗರದಲ್ಲಿ 4 ಶಾಸಕರ ಪೈಕಿ ಮೂವರು ಮತ್ತು ಹಾಸನದಲ್ಲಿ ಏಳು ಸ್ಥಾನಗಳಲ್ಲಿ ಆರು ಸ್ಥಾನಗಳನ್ನು ಹೊಂದಿದೆ. ಮೈಸೂರಿನಲ್ಲಿ ಒಟ್ಟು 11 ಸ್ಥಾನಗಳ ಪೈಕಿ ಜೆಡಿಎಸ್ ನಾಲ್ಕು ಸ್ಥಾನಗಳನ್ನು ಹೊಂದಿದ್ದರೆ, ಈ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಲ್ಕು ಮತ್ತು ಬಿಜೆಪಿ ಮೂರು ಸ್ಥಾನಗಳನ್ನು ಹೊಂದಿದೆ.

ತುಮಕೂರಿನಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಮೂರು ಸ್ಥಾನಗಳನ್ನು ಹೊಂದಿದೆ. ಆದರೆ ಕಳೆದ ವರ್ಷ ಜೂನ್‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದ ಗುಬ್ಬಿ ಶಾಸಕ ಎಸ್‌ಆರ್ ಶ್ರೀನಿವಾಸ್ ಅವರನ್ನು ಉಚ್ಛಾಟಿಸಿದೆ. ಎಸ್‌ಆರ್ ಶ್ರೀನಿವಾಸ್ (ವಾಸಣ್ಣ) ಈ ಬಾರಿ ಕಾಂಗ್ರೆಸ್ ಸೇರುವ ತವಕದಲ್ಲಿದ್ದಾರೆ. ಈ ಭಾಗದಲ್ಲಿ ಚುನಾವಣಾ ಲೆಕ್ಕಾಚಾರ ಶುರುವಾಗಿದ್ದು, ಇಲ್ಲಿ ಅಧಿಕಾರ ಪಡೆದರೇ ರಾಜ್ಯದಲ್ಲಿ ತಮ್ಮದೇ ಅಧಿಕಾರ ಎಂಬ ಭಾವನೆ ಬಿಜೆಪಿಯ ರಾಷ್ಟ್ರೀಯ ನಾಯಕರಿಗಿದೆ.
ಬಿಜೆಪಿ ಪಕ್ಷವು ಕರ್ನಾಟಕದಲ್ಲಿ ನಾಲ್ಕು ಬಾರಿ ಅಧಿಕಾರಕ್ಕೆ ಬಂದಿದೆ. ಪ್ರತಿ ಬಾರಿಯೂ ಅದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಬಹುಮತದ ಕೊರತೆಯಿಂದ ವಿರೋಧ ಪಕ್ಷವಾಗಿತ್ತು. ಎರಡು ಬಾರಿ, ಪಕ್ಷವು ಅತೃಪ್ತ ವಿರೋಧ ಪಕ್ಷದ ಸದಸ್ಯರನ್ನು ಸೆಳೆಯಲು ಮತ್ತು ಬಹುಮತದ ಸರ್ಕಾರವನ್ನು ರಚಿಸಲು 'ಆಪರೇಷನ್ ಕಮಲ'ವನ್ನು ಆಶ್ರಯಿಸಬೇಕಾಗಿತ್ತು. ಆದರೆ, 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನವನ್ನು ನೀಡಿದ್ದು, 28 ರಲ್ಲಿ 25 ಸ್ಥಾನಗಳನ್ನು ಗೆದ್ದಿದೆ.

ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರ ಸಹೋದರ ಡಿ ಕೆ ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ ಮತ್ತು ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನದಲ್ಲಿ ವಿಜಯಶಾಲಿಯಾಗಿದ್ದಾರೆ. ಬಿಜೆಪಿಗೆ ಸಮಾಧಾನವಾಗುವಂತೆ ಜೆಡಿಎಸ್‌ನ ಭದ್ರಕೋಟೆಯಾಗಿದ್ದ ಮಂಡ್ಯ ಕ್ಷೇತ್ರದಿಂದ ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ್ದಾರೆ.
2019 ರ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಮೊಮ್ಮಗ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ ನಟಿ ಸುಮಲತಾ ಅವರು ಮಾರ್ಚ್ 11 ರಂದು ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಒಂದು ದಿನ ಮುಂಚಿತವಾಗಿ ಬಿಜೆಪಿಗೆ 'ಸಂಪೂರ್ಣ ಬೆಂಬಲ' ನೀಡಿದ್ದಾರೆ.
ಕೆಆರ್ ಪೇಟೆ ಶಾಸಕ ಕೆ ಸಿ ನಾರಾಯಣ ಗೌಡ ಅವರು 2019 ರಲ್ಲಿ ಆಪರೇಷನ್ ಕಮಲದ ವೇಳೆ ಪಕ್ಷವನ್ನು ತೊರೆದು ವಿಧಾನಸಭೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ದಾಖಲಿಸಿದ್ದಾರೆ. ಇದು ಜೆಡಿಎಸ್‌ಗೆ ಹೊಡೆತ ನೀಡಿದೆ. ಆಪರೇಷನ್ ಕಮಲದಿಂದಾಗಿಯೇ ಜೆಡಿಎಸ್‌ನ ಭದ್ರಕೋಟೆಯಾದ ಮಂಡ್ಯದಿಂದ ಬಿಜೆಪಿ ತನ್ನ ಮೊದಲ ಶಾಸಕರನ್ನು ಪಡೆದಿದೆ.












Click it and Unblock the Notifications