ಮೇ 10ರಂದು ಮತ ಚಲಾಯಿಸಿ; ನಂದಿ ಬೆಟ್ಟದ ಮಯೂರ ಹೋಟೆಲ್‌ನಲ್ಲಿ ಶೇ.50 ರಿಯಾಯಿತಿ ಪಡೆಯಿರಿ
2023ರ ಕರ್ನಾಟಕ ವಿಧಾನಸಭೆ ಚುನಾವಣಾ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೇ 10ರಂದು ನಡೆಯುವ ಮತದಾನಕ್ಕೆ ಮೂರೇ ದಿನಗಳು ಬಾಕಿ ಉಳಿದಿದ್ದು, ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ.
ಇದೇ ವೇಳೆ ಪ್ರವಾಸೋದ್ಯಮ ಇಲಾಖೆಯು ರಾಜ್ಯದ ಮತದಾರರಿಗೆ ಆಫರ್ ಒಂದನ್ನು ನೀಡಿದ್ದು, ಮೇ 10ರಂದು ನಡೆಯುವ ಮತದಾನ ದಿನದಂದು ಬೆಂಗಳೂರು ಸೇರಿ ರಾಜ್ಯದ ಸಾರ್ವಜನಿಕರು ಮತ ಚಲಾವಣೆ ಮಾಡಿದ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿರುವ ಮಯೂರ ಹೋಟೆಲ್ ಫೈನ್ ಟಾಪ್‌ನಲ್ಲಿ ವಾಸ್ತವ್ಯ ಹೂಡಲು ಶೇ.50 ರಿಯಾಯಿತಿ ನೀಡಲು ನಿರ್ಧರಿಸಿದೆ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮೇ 10ರಂದು ನಡೆಯುತ್ತಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಳ ಮಾಡಲು ಚುನಾವಣಾ ಆಯೋಗ ಭಾರಿ ಪ್ರಯತ್ನ ಮಾಡುತ್ತಿದೆ.
ಇದಕ್ಕೆ ಪೂರಕವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವತಿಯಿಂದಲೂ ಮತದಾರರಿಗೆ ಭಾರೀ ಆಫರ್ ನೀಡಿದೆ. ಮತದಾನ ಮಾಡಿದವರಿಗೆ ಮಯೂರ ಹೋಟೆಲ್ ಬುಕಿಂಗ್‌ನಲ್ಲಿ ಶೇ.50 ರಿಯಾಯಿತಿಯನ್ನು ನೀಡಿದೆ. ಈ ಮೂಲಕ ಮತ ಚಲಾವಣೆ ಮಾಡಿ ಹೋಟೆಲ್‌ಗೆ ಬರುವವರು ಈ ಅವಕಾಶ ಬಳಸಿಕೊಳ್ಳಬಹುದು.
ರಾಜ್ಯದ ಮತದಾರರು ಮತದಾನ ಮಾಡಲು ಪ್ರೋತ್ಸಾಹಿಸುವ ಸಲುವಾಗಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವ/ ಮತ ಚಲಾಯಿಸುವ ಮತದಾರರು ನಿಗಮದ ಹೋಟೆಲ್ ಮಯೂರ ಫೈನ್ ಟಾಪ್, ನಂದಿಬೆಟ್ಟ ಘಟಕದಲ್ಲಿ ವಾಸ್ತವ್ಯ ಹೂಡುವುದರ ಮೇಲೆ ಶೇ.50 ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.

ಈ ರಿಯಾಯಿತಿಯನ್ನು ಪಡೆಯಲಿಚ್ಛಿಸುವ ಸಾರ್ವಜನಿಕರು ಕಡ್ಡಾಯವಾಗಿ ಮೇ 10ರಂದು ಮತದಾನ ಮಾಡಿ, ಹೋಟೆಲ್ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಪ್ರಕಟಿಸಿದೆ.
ವಂಡರ್ ಲಾ ಪ್ರವೇಶ ಶುಲ್ಕದಲ್ಲಿ ಶೇ.15ರಷ್ಟು ರಿಯಾಯಿತಿ
ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಹಾಗೂ ಮತದಾನ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಭಾರತದ ಅತಿ ದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್ ಲಾ ವಿಶೇಷ ರಿಯಾಯಿತಿ ಘೋಚಣೆ ಮಾಡಿದೆ.
ಮೇ 10ರಂದು ಮತದಾನ ಮಾಡುವ ಪ್ರತಿಯೊಬ್ಬ ನಾಗರಿಕನಿಗೂ ವಂಡರ್ ಲಾ ಪ್ರವೇಶ ಶುಲ್ಕದ ಮೇಲೆ ಶೇ.15ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಈ ಆಫರ್ ಮೇ 10ರಿಂದ ಮೇ 12ರವರೆಗೂ ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿದ್ದು, ಬುಕ್ಕಿಂಗ್ ಪೋರ್ಟಲ್ ಮೇ 5ರಿಂದ ತೆರೆಕೊಂಡಿದೆ.

ತಮ್ಮ ಬುಕ್ಕಿಂಗ್‌ನನ್ನು https://www.wonderla.com/ ಮೂಲಕ ಮಾಡಿಕೊಳ್ಳಬಹುದಾಗಿದ್ದು, ಪ್ರವೇಶ ದ್ವಾರದಲ್ಲಿ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿದ ಮತದಾರರಿಗೆ ಕೈ ಬೆರಳಿಗೆ ಹಾಕಿದ ಮತದಾನ ಶಾಹಿಯ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ.
ಈ ಕುರಿತು ಹೇಳಿಕೆ ನೀಡಿರುವ ವಂಡರ್‌ಲಾ ಹಾಲಿಡೇಸ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಚಿತ್ತಿಲಪಿಲ್ಲಿ, ಪ್ರತಿಯೊಬ್ಬ ನಾಗರಿಕನೂ ಮತದಾನ ಮಾಡುವುದು ಅವರ ಕರ್ತವ್ಯವಾಗಿದೆ. ಮತದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದು ನಮ್ಮ ಪುಟ್ಟ ಹೆಜ್ಜೆ ಎಂದರು.
ಹೋಟೆಲ್ ನಿಸರ್ಗಾ ಗ್ರ್ಯಾಂಡ್‌ನಲ್ಲಿ ಉಚಿತ ಉಪಹಾರದ ಆಫರ್
ಮೇ 10ರಂದು ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಪ್ರಯುಕ್ತ ಒಂದೇ ಹಂತದಲ್ಲಿ 224 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಸಂಬಂಧ ಮತದಾನ ಉತ್ತೇಜಿಸುವ ಸಲುವಾಗಿ ಬೆಂಗಳೂರಿನ 'ಹೋಟೆಲ್ ನಿಸರ್ಗ ಗ್ರ್ಯಾಂಡ್' ಮತದಾರರಿಗೆ ಉಚಿತ ತಿಂಡಿ, ತಂಪು ಪಾನೀಯದ ಆಫರ್ ನೀಡಿದೆ.












Click it and Unblock the Notifications