ಕೈ ಪಾಳಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಚರ್ಚೆ; ಡಿಕೆ ಶಿವಕುಮಾರ್ ಮಾತಿನ ಮರ್ಮವೇನು?
ಬೆಂಗಳೂರು, ಮೇ 24: ಆಡಳಿತರೂಢ ಕಾಂಗ್ರೆಸ್ ಗೆಈ ಬಾರಿಯ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕನಿಷ್ಠ 20 ಕ್ಷೇತ್ರಗಳನ್ನ ಗೆಲ್ಲುವ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿಗಿದ್ದು, ನಿರೀಕ್ಷೆಯಂತೆ ಕ್ಷೇತ್ರಗಳನ್ನ ಗೆಲ್ಲುವುದು ಕಷ್ಟವಾದರೇ ಸಂಪುಟ ಸರ್ಜರಿಯಾಗಲಿದೆ ಎನ್ನುವ ಮಾತು ಕೇಳಿಬಂದಿದ್ದು, ಕೆಪಿಸಿಸಿ ಅಧ್ಯಕ್ಷದ ಬದಲಾವಣೆ ವಿಚಾರವೂ ಇದೀಗ ಮುನ್ನೆಲೆಗೆ ಬಂದಿದೆ.
ಈಗಾಗಲೇ ಸಚಿವರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಚರ್ಚೆ ನಡೆಸಿದ್ದು, ಹಲವು ವಿಚಾರಗಳ ಕುರಿತು ಚರ್ಚೆಯಾಗಿದೆ, ಇತ್ತ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚಿವರಾದ ಜಿ.ಪರಮೇಶ್ವರ ಮತ್ತು ಸತೀಶ ಜಾರಕಿಹೊಳಿ ಅವರು ತಮ್ಮ ಅಭಿಪ್ರಾಯಗಳನ್ನ ಹೊರಹಾಕುವ ಮೂಲಕ ಚರ್ಚೆಗೆ ಚಾಲನೆ ನೀಡಿದ್ದಾರೆ.

ಇನ್ನೂ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಲೋಕಸಭಾ ಚುನಾವಣೆ ಬಳಿಕ ಸಚಿವ ಸಂಪುಟ ಪುನರ್ ರಚನೆಯಾಗಲಿದೆ ಎಂಬ ಚರ್ಚೆ ಕೈ ಪಾಳಯದಲ್ಲಿ ಸೃಷ್ಟಿಯಾಗಿದ್ದು, ಈಗಾಗಲೇ ಸಚಿವ ಸ್ಥಾನದಿಂದ ವಂಚಿತರಾದ ಬರೋಬ್ಬರಿ 40 ಜನ ಹಿರಿಯ ಕಾಂಗ್ರೆಸ್ ನಾಯಕರು ಮಂತ್ರಿಗಿರಿಯ ರೇಸ್ ನಲ್ಲಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆಯ ಸೂತ್ರ ಇನ್ನೂ ಜೀವಂತವಾಗಿದ್ದು, ಈ ವೇಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಸದ್ಯ ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಅವರು ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದು, ಅವರ ಅಧ್ಯಕ್ಷತೆ ಹಾಗೂ ಕಾಂಗ್ರೆಸ್ ನ ಹಲವು ನಾಯಕರ ನಾಯಕತ್ವದಲ್ಲಿ ಕಳೆದ ವಿಧಾನಸಭಾ ಚುನಾವಣೆಯನ್ನಎದುರಿಸಿ, ಭರ್ಜರಿ ಗೆಲುವು ಸಾಧಿಸಿದೆ. ಇತ್ತ ಲೋಕಸಭಾ ಚುನಾವಣೆಯಲ್ಲಿಯೂ ಹೈಕಮಾಂಡ್ ಹೆಚ್ಚು ಸ್ಥಾನಗಳನ್ನ ಗೆಲುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಟಾರ್ಗೆಟ್ ನೀಡಿದೆ. ಹೀಗಿರುವಾಗ ಇತ್ತೀಚೆಗೆ ನಡೆದ ಪಕ್ಷದ ಸಭೆಗಳಲ್ಲಿ ಕೆಪಿಸಿಸಿ ಜವಾಬ್ದಾರಿಯಿಂದ ಹೊರಬರುವ ಇಂಗಿತವನ್ನು ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ವ್ಯಕ್ತಪಡಿಸಿದ ಬೆನ್ನಲ್ಲೇ ಈಗ ಚರ್ಚೆ ಆರಂಭವಾಗಿದೆ.
ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಲೋಕಸಭಾ ಚುನಾವಣೆವರೆಗೆ ನಿಭಾಯಿಸುವಂತೆ ಪಕ್ಷದ ಹೈಕಮಾಂಡ್ ಶಿವಕುಮಾರ್ ಅವರಿಗೆ ಸೂಚಿಸಿತ್ತು. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ಮುಗಿದಿದ್ದು, 'ಅಧ್ಯಕ್ಷ ಹುದ್ದೆಯಲ್ಲಿ ಎಷ್ಟು ದಿನ ಮುಂದುವರಿಯುತ್ತೇನೊ ಎಂಬುದು ಗೊತ್ತಿಲ್ಲ, ಬದಲಾವಣೆ ಆಗಲೂಬಹುದು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಒಂದು ಕಡೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರುವ ಡಿ ಕೆ ಶಿವಕುಮಾರ್ ಅವರು ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಈ ಹೇಳಿಕೆ ನೀಡಿರುವು ಹಲವು ಪ್ರಶ್ನೆಗಳು ಹುಟ್ಟುವಂತೆ ಮಾಡಿದೆ.
ಡಿ ಕೆ ಶಿವಕುಮಾರ್ ಹೇಳಿದ್ದೇನು?
ಸಂಘಟನೆ ಬಲಗೊಳಿಸಬೇಕು. ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜಿಸಿ ಹೊಸದಾಗಿ ರಚಿಸುವ ಸಮಯ ಬಂದಿದೆ. ಮೊದಲು ಪಕ್ಷದ ಕೆಲಸ ಮಾಡಬೇಕು. ಕೇವಲ ಗುರುತಿನ ಚೀಟಿಗೋಸ್ಕರ ಬರುವವರು ಮನೆಯಲ್ಲಿಯೇ ಇರಿ. ಖಾದಿ ಬಟ್ಟೆ ಹಾಕಿಕೊಂಡು, ಕಾರು ಇಟ್ಟುಕೊಂಡು ಎಂಎಲ್ ಸಿ ಮಾಡಿ, ಅಧ್ಯಕ್ಷನನ್ನಾಗಿ ಮಾಡಿ ಎಂದರೆ ಅದು ಇಲ್ಲಿ ನಡೆಯುವುದಿಲ್ಲ. ಕೆಲಸ ಮಾಡುವವರಿಗೆ ಆದ್ಯತೆ. ನಿಮ್ಮ ಬೂತ್ ಮಟ್ಟದಲ್ಲಿ ಪಕ್ಷಕ್ಕೆ ಹೆಚ್ಚಿನ ಮತ ತಂದು ನಾಯಕತ್ವಕ್ಕೆ ಬೇಡಿಕೆ ಇಡಬೇಕು. ನಿಮ್ಮ ಬೂತ್ ಗಳಲ್ಲಿ ಪಕ್ಷಕ್ಕೆ ಮುನ್ನಡೆ ತರಲು ಆಗದಿದ್ದರೆ ನಾವು ಬೇರೆಯವರನ್ನು ತಯಾರು ಮಾಡುತ್ತೇವೆ.
ನಾನು ಎಷ್ಟು ದಿನ ಅಧ್ಯಕ್ಷನಾಗಿ ಇರುತ್ತೇನೆ ಎಂಬುದು ಮುಖ್ಯವಲ್ಲ. ನಾನು ಅಧಿಕಾರ ಬಿಟ್ಟು ಹೋಗುವ ಮುನ್ನ ಪಕ್ಷದ ಸಂಘಟನೆಗೆ ಭದ್ರ ಬುನಾದಿ ಹಾಕಿಕೊಡುವ ಕೆಲಸ ಮಾಡುತ್ತೇನೆ. ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ. ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಕಾರ್ಯಯೋಜನೆ ಸಿದ್ಧಪಡಿಸುತ್ತೇವೆ. ನೀವೆಲ್ಲರೂ ಅದಕ್ಕೆ ಸಿದ್ಧರಾಗಬೇಕು ಎಂದು ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದು, ತೀವ್ರ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.












Click it and Unblock the Notifications