ಕರ್ನಾಟಕದ ಬೆಳೆಹಾನಿ ರೈತರಿಗೆ ಸಿಎಂ ಸಿದ್ದರಾಮಯ್ಯ ಗುಡ್‌ನ್ಯೂಸ್! ಮೊದಲು ಜಂಟಿ ಸಮೀಕ್ಷೆಗೆ ಸೂಚನೆ
ಬೆಂಗಳೂರು, ಸೆಪ್ಟಂಬರ್ 17: ಕರ್ನಾಟಕದಲ್ಲಿ ಕಳೆದ ವರ್ಷ ಪ್ರವಾಹ ಪರಿಸ್ಥಿತಿಯ ಬಗ್ಗೆ ಕೇಂದ್ರಕ್ಕೆ ಸಕಾಲದಲ್ಲಿಯೇ ವರದಿ ನೀಡಲಾಗಿತ್ತು. ಆದರೆ ಕೇಂದ್ರ ಸರ್ಕಾರವೇ ಈ ಬಗ್ಗೆ ನಿಧಾನ ನಿಲುವು ತಾಳಿದ್ದರಿಂದ ರಾಜ್ಯ ಸರ್ಕಾರ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿ, ಪರಿಹಾರವನ್ನು ಪಡೆಯಬೇಕಾಯಿತು ಎಂದಿರುವ ಸಿಎಂ ಸಿದ್ದರಾಮಯ್ಯ ಅವರು ಪ್ರಸಕ್ತ ವರ್ಷದ 2025 ಬೆಳೆ ಹಾನಿ ರೈತರಿಗೆ ಗುಡ್ ನ್ಯೂಸ್ ನೀಡದ್ದಾರೆ.
ಇಂದು ಅವರು ಕಲಬುರಗಿಯಲ್ಲಿ ಮಳೆ, ಪ್ರವಾಹಕ್ಕೆ ಹಾನಿಗೀಡಾದ ರೈತರ ಬೆಳೆಗಳನ್ನು ಅವರ ಜಮೀನುಗಳಿಗೆ ತೆರಳಿ ಖುದ್ದು ಪರಿಶೀಲಿದರು. ನಂತರ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬೆಳೆಹಾನಿಯಾಗಿರುವುದಕ್ಕೆ ಪರಿಹಾರ ನೀಡಲು ಅನುಕೂಲವಾಗುವಂತೆ ಕಂದಾಯ ಹಾಗೂ ಕೃಷಿ ಇಲಾಖೆಗೆ ಜಂಟಿ ಸಮೀಕ್ಷೆ ನಡೆಸಲು ಸೂಚನೆ ನೀಡಿದರು. ವರದಿ ಬಂದ ನಂತರ ಬೆಳೆಪರಿಹಾರವನ್ನು ರೈತರಿಗೆ ವಿತರಿಸಲಾಗುವುದು ಎಂದು ತಿಳಿಸಿದೆ.

ಇನ್ನೊಂದು ವಾರದಲ್ಲಿ ಸಮೀಕ್ಷಾ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ, ನಂತರ ಬೆಳೆಹಾನಿ ಪರಿಹಾರ ವಿತರಿಸುತ್ತೇವೆ. ರಾಜ್ಯದಲ್ಲಿ ಒಟ್ಟಾರೆ ಈ ಬಾರಿ ಅದೃಷ್ಟವಶಾತ್ ವಾಡಿಕೆಗಿಂತ ಶೇ.4 ರಷ್ಟು ಮಳೆ ಜಾಸ್ತಿಯಾಗಿದೆ. ಬೀದರ್, ಕಲಬುರ್ಗಿ, ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಬೆಳೆ ಹಾನಿ ಹೆಚ್ಚು ಸಂಭವಿಸಿದ್ದು, ಬೆಳೆ ಪರಿಹಾರ ವಿತರಿಸಲಾಗುವುದು. 2024-25 ನೇ ಸಾಲಿನಲ್ಲಿ 656 ಕೋಟಿ ರೂ. ಬೆಳೆವಿಮೆ ಪಾವತಿಯಾಗಿದೆ. ಬೆಳೆವಿಮೆ ಮಾಡಿಕೊಳ್ಳದ ರೈತರಿಗೆ ಪರಿಹಾರ ನೀಡುವ ಬಗ್ಗೆ ಹಾಗೂ ರೈತರ ಬೇಡಿಕೆಯಂತೆ ಸಾಲಮನ್ನಾ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ಅತಿವೃಷ್ಟಿ ಪೀಡಿತ ಪ್ರದೇಶಗಳ ಜಂಟಿ ಸಮೀಕ್ಷೆ ಮುಗಿಯುತ್ತಿದ್ದಂತೆ, ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಬೆಳೆ ಹಾನಿಗೆ ಸಮರ್ಪಕವಾಗಿ ಪರಿಹಾರ ತಲುಪಿಸಬೇಕು. ಮಾನವ- ಜಾನುವಾರು ಜೀವ ಹಾನಿಗಳಿಗೆ ಶೇ.100 ರಷ್ಟು ಪರಿಹಾರ ಒದಗಿಸಿರುವ ರೀತಿಯಲ್ಲೇ ಬೆಳೆ ಹಾನಿಗೂ ಒದಗಿಸಬೇಕು. ಕಳೆದ ಬಾರಿಗಿಂತ ಈ ಬಾರಿ ಉತ್ತಮ ಮಳೆ ಆಗಿದೆ. ವಾಡಿಕೆಗಿಂತ ಶೇ17 ರಷ್ಟು ಮಳೆ ಹೆಚ್ಚಾಗಿದೆ. 37 ಜನರ ಜೀವ ಹಾನಿ ಪ್ರಕರಣಗಳು ವರದಿಯಾಗಿದ್ದು, ಎಲ್ಲಾ ಪರಿಹಾರ ನೀಡಲಾಗಿದೆ ಎಂದು ವಿವರಿಸಿದರು.
175 ಜಾನುವಾರುಗಳ ಪ್ರಾಣ ಹಾನಿ ಪ್ರಕರಣಗಳು ವರದಿಯಾಗಿದ್ದು, ಎಲ್ಲದಕ್ಕೂ ಪರಿಹಾರ ನೀಡಲಾಗಿದೆ. ಸಂಪೂರ್ಣ ಮನೆ ಹಾನಿ, ಭಾಗಶಃ ಹಾನಿ ಆಗಿರುವ ಎಲ್ಲಾ ಪ್ರಕರಣಗಳಲ್ಲೂ ಪರಿಹಾರ ನೀಡಲಾಗಿದೆ. ಬೀದರ್, ಕಲಬುರಗಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಿಂದ ಹೆಚ್ಚು ಹಾನಿ ಸಂಭವಿಸಿದೆ. ನಿರಂತರ ಜೋಳು ಮಳೆ ಇರುವುದರಿಂದ ಬೆಳೆ ಹಾನಿಯ ಸಂಪೂರ್ಣ ಜಂಟಿ ಸಮೀಕ್ಷೆಗೆ ಅಡ್ಡಿ ಆಗುತ್ತಿದೆ. ಹೀಗಾಗಿ ನಿಗಧಿತ ಅವಧಿಯೊಳಗೆ ಜಂಟಿ ಸಮೀಕ್ಷೆ ಪೂರ್ಣಗೊಂಡಿಲ್ಲ. ಆದಷ್ಟು ಶೀಘ್ರ ಸಮೀಕ್ಷೆ ಮುಗಿಸಿ, ಬೆಳೆ ನಷ್ಟ ಪರಿಹಾರ ವಿತರಣೆ ಮಾಡಲಾಗುವುದು.
ರಾಜ್ಯಕ್ಕೆ ನೀಡಲಾಗುವ ಎನ್‌ಡಿಆರ್‌ಎಫ್ ಪರಿಹಾರವನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರವನ್ನು ಹಲವು ಬಾರಿ ಕೋರಲಾಗಿದೆ. ಈ ಬಗ್ಗೆ ಕೇಂದ್ರ ವಿತ್ತಸಚಿವರನ್ನು ಹಾಗೂ ಕೇಂದ್ರ ಗೃಹ ಸಚಿವರನ್ನು ಖುದ್ದು ಭೇಟಿ ಮಾಡಲಾಗಿದ್ದರೂ, ಇದುವರೆಗೂ ಸರ್ಕಾರದ ಮನವಿಗೆ ಕೇಂದ್ರ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಸಾಮಾಜಿಕ, ಶೈಕ್ಷಣಿಕ ಗಣತಿ
ಸಾಮಾಜಿಕ, ಶೈಕ್ಷಣಿಕ ಗಣತಿ ವಿಷಯದಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದು 78 ವರ್ಷಗಳಾಗಿದೆ. ರಾಜ್ಯದ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿಯ ಬಗ್ಗೆ ಸರ್ಕಾರ ತಿಳಿಯಬೇಕಾಗಿದೆ. ಸಮೀಕ್ಷೆ ವರದಿ ಬಂದ ನಂತರ, ಅದರಂತೆ ಸರ್ಕಾರದ ಯೋಜನೆಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಸಮೀಕ್ಷೆಗೆ 1.75 ಲಕ್ಷ ಶಿಕ್ಷಕರನ್ನು ನಿಯೋಜಿಸಿದ್ದೇವೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ಅವರು ರಾಜ್ಯದ ಪ್ರತಿ ಮನೆಗೂ ತೆರಳಿ ಮಾಹಿತಿಗಳನ್ನು ಕಲೆಹಾಕಲಿದ್ದಾರೆ. ಸಮೀಕ್ಷಾ ಕಾರ್ಯಕ್ಕೆ ಕಳೆದ ಬಾರಿಗಿಂತ 40 ಸಾವಿರ ಶಿಕ್ಷಕರನ್ನು ಹೆಚ್ಚಾಗಿ ನಿಯೋಜಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಮಾಹಿತಿ ಕೊಟ್ಟರು.












Click it and Unblock the Notifications