ಇಂದು ಹಾಲಿ-ಮಾಜಿ ಸಿಎಂಗೆ ಢವಢವ ಎನಿಸುವ ದಿನ, ಯಾಕೆ?
ರಾಜ್ಯ ರಾಜಕಾರಣದಲ್ಲಿ ಈ ದಿನ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಹಾಲಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದು ಮಹತ್ವದ ದಿನವಾಗಿದ್ದು, ಇಬ್ಬರೂ ನಾಯಕರ ಭವಿಷ್ಯ ಕೋರ್ಟ್‌ನಲ್ಲಿ ನಿರ್ಧಾರವಾಗಲಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಕೇಳಿಬಂದಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರರ (ಮುಡಾ) ಬದಲಿ ನಿವೇಶನ ಅಕ್ರಮ ಹಂಚಿಕೆ ಕೇಸ್ ತನಿಖೆಯ ವಿಚಾರಣೆ ಕೋರ್ಟ್‌ನಲ್ಲಿ ನಡೆಯಲಿದೆ. ಮತ್ತೊಂದೆಡೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೇಲಿನ ಪೋಕ್ಸೋ ಪ್ರಕರಣ ಕೇಸ್ ರದ್ದು ಮಾಡುವಂತೆ ಕೋರಿರುವ ಅರ್ಜಿ ವಿಚಾರಣೆ ಕೂಡ ಇದೇ ದಿನ ನಡೆಯಲಿದೆ.

ಈ ಎರಡೂ ಕೇಸ್‌ಗಳು ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಒಂದೇ ದಿನ ಹಾಲಿ ಹಾಗೂ ಮಾಜಿ ಸಿಎಂಗಳ ಮೇಲಿನ ಗಂಭೀರ ಆರೋಪದ ಕೇಸ್‌ಗಳು ಅಂತಿಮ ಹಂತದಲ್ಲಿದ್ದು, ಅವರ ಭವಿಷ್ಯ ನಿರ್ಧರಿಸಲಿದೆ. ಮುಡಾ ಕೇಸ್ ಅನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯ ತೀರ್ಪು ಕೂಡ ಇಂದೇ ಪ್ರಕಟವಾಗುವ ಸಾಧ್ಯತೆ ಇದೆ. ಇದು ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ನಿರ್ಧರಿಸಲಿದೆ.
ಅಲ್ಲದೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ತಮ್ಮ ಮೇಲೆ ದಾಖಲಾಗಿರುವ ಪೋಕ್ಸೋ ಕೇಸ್ ರದ್ದು ಮಾಡುವಂತೆ ಬಿ.ಎಸ್.ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯ ತೀರ್ಪು ಕೂಡ ಇದೇ ದಿನ ಹೊರಬೀಳುವ ಸಾಧ್ಯತೆ ಇದೆ. ಹಾಗಾಗಿ ಒಂದೇ ದಿನ ಕರ್ನಾಟಕದ ಇಬ್ಬರು ಮುಖ್ಯಮಂತ್ರಿಗಳಿಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ತೀರ್ಪು ಪ್ರಕಟವಾಗಲಿದೆ. ಈ ಹಿನ್ನೆಲೆ ಸಿದ್ದರಾಮಯ್ಯ ಹಾಗೂ ಬಿ.ಎಸ್.ಯಡಿಯೂರಪ್ಪ ಅವರಿಗೆ ಆತಂಕ ಶುರುವಾಗಿದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವರದಿ ರಾಜಕೀಯ ಪ್ರೇರಿತವಾಗಿದೆ ಎಂದು ಸಿದ್ದರಾಮಯ್ಯ ದೂರಿದ್ದರು. ಹಣದ ಅಕ್ರಮ ವರ್ಗಾವಣೆ ಆಗಿರುವ ಬಗ್ಗೆ ಯಾವುದೇ ಸಾಕ್ಷಿಯಿಲ್ಲ. ಮುಡಾದ ಮಾಜಿ ಆಯುಕ್ತ ನಟೇಶ್ ಅವರ ಮೇಲೆ ಇಡಿ ಕ್ರಮ ಕಾನೂನು ಬಾಹಿರ ಎಂದು ಹೈಕೋರ್ಟ್ ಹೇಳಿದೆ. ಇಡಿ ಸಂಪೂರ್ಣ ವರದಿಯನ್ನು ಮಾಧ್ಯಮದಲ್ಲಿ ಬಿಡುಗಡೆ ಮಾಡುವ ಮೂಲಕ ಸಂಪೂರ್ಣ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ರಾಜಕೀಯಗೊಳಿಸಿದ್ದಾರೆ ಎಂದು ಆರೋಪಿಸಿದ್ದರು.

ಸರ್ಕಾರ ಹಾಗೂ ಮುಖ್ಯಮಂತ್ರಿ ಹುದ್ದೆಯ ವರ್ಚಸ್ಸಿಗೆ ಕುಂದು ತರುವಂತಹ ಪ್ರಯತ್ನ ನಡೆಯುತ್ತಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಕಾರಣದಿಂದ ನನ್ನ ತೇಜೋವಧೆ ಮಾಡಲಾಗುತ್ತಿದೆ. ನನ್ನ ಶ್ರೀಮತಿಯವರಿಗೆ ಇಡಿ ನೋಟೀಸ್ ಬಂದ ಕಾರಣ ಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ. ನನ್ನ ವರ್ಚಸ್ಸಿಗೆ ಭಂಗ ತರಬೇಕೇಂಬ ದುರುದ್ದೇಶದಿಂದ, ಇಂತಹ ಕುಕೃತ್ಯಗಳನ್ನು ಮಾಡಲಾಗುತ್ತಿದೆ. ಆದರೆ ಅವರ ಪ್ರಯತ್ನಗಳು ಸಫಲವಾಗಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದರು.
ಪೋಕ್ಸೋ ಕೇಸ್ ಹಿನ್ನೆಲೆ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮೇಲೆ ಪೋಕ್ಸೋ ಕೇಸ್ ದಾಖಲಾಗಿದೆ. ತಮ್ಮ ಮೇಲಿನ ಕೇಸ್ ರದ್ದುಮಾಡುವಂತೆ ಬಿಎಸ್‌ವೈ ಕೋರ್ಟ್ ಮೊರೆ ಹೋಗಿದ್ದರು. ಈವರೆಗೆ ಖುದ್ದು ಹಾಜರಾತಿಯಿಂದ ಯಡಿಯೂರಪ್ಪ ಅವರಿಗೆ ಕೋರ್ಟ್ ವಿನಾಯಿತಿ ನೀಡಿದ್ದಲ್ಲದೆ, ಬಂಧನದಿಂದಲೂ ಮಧ್ಯಂತರ ರಕ್ಷಣೆ ಕೊಟ್ಟಿತ್ತು. ಇಂದು ಈ ಪ್ರಕರಣದ ಅಂತಿಮ ತೀರ್ಪು ಬರಲಿದೆ. ಸಿಎಂ ಸ್ಥಾನದಲ್ಲಿದ್ದವರ ಮೇಲೆ ಪೋಕ್ಸೋ ಕೇಸ್ ದಾಖಲಾಗಿರುವುದು ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಸಂಚಲನ ಮೂಡಿಸಿದ್ದು, ಎಲ್ಲರ ಚಿತ್ತ ಇಂದು ಇಬ್ಬರೂ ಸಿಎಂಗಳ ಭವಿಷ್ಯ ನಿರ್ಧರಿಸುವ ತೀರ್ಪಿನತ್ತ ಇದೆ.












Click it and Unblock the Notifications