ಕರ್ನಾಟಕ ಬಂದ್ : ಉತ್ತರವಿಲ್ಲದ ನೂರೆಂಟು ಪ್ರಶ್ನೆಗಳು!
Recommended Video

ಬೆಂಗಳೂರು, ಜನವರಿ 25 : ಇದು ಎಷ್ಟನೇ ಕರ್ನಾಟಕ ಬಂದ್? ಎಷ್ಟನೇ ಬಾರಿ ವಾಟಾಳ್ ನಾಗರಾಜ್ ಬಂದ್ ಕರೆ ನೀಡಿದ್ದಾರೆ? ಎಷ್ಟು ಬಂದ್ ಗಳು ಯಶಸ್ವಿಯಾಗಿವೆ? ಬಂದ್ ಹಿಂದಿನ ಉದ್ದೇಶಗಳು ಈಡೇರಿವೆಯಾ? ಈ ಬಂದ್ ಕರೆಗಳಿಂದಾಗಿ ಯಾರು ಎಷ್ಟು ನಷ್ಟ ಹೊಂದಿದ್ದಾರೆ? ಯಾರ್ಯಾರಿಗೆ ಎಷ್ಟೆಷ್ಟು ಲಾಭಗಳಾಗಿವೆ?
ಚಿತ್ರಗಳು : ಮಹದಾಯಿಗಾಗಿ ಕರ್ನಾಟಕ ಬಂದ್
ಹೋಗಲಿ, ಜನವರಿ 25ರಂದು ಗುರುವಾರ ಕರೆಯಲಾಗಿರುವ ಕರ್ನಾಟಕ ಬಂದ್ ಯಾರ ವಿರುದ್ಧ? ಮಧ್ಯಸ್ಥಿಕೆಗೆ ಹಿಂದೇಟು ಹಾಕುತ್ತಿರುವ ಕೇಂದ್ರ ಸರಕಾರದ ವಿರುದ್ಧವೋ? ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರದ ವಿರುದ್ಧವೋ? ಮಹದಾಯಿ ನೀರು ಬಿಡುತ್ತಿಲ್ಲವೆಂದು ಹೇಳಿರುವ ಗೋವಾ ಸರಕಾರದ ವಿರುದ್ಧವೋ? ಅಥವಾ, ಇಂದು ಮೈಸೂರಿನಲ್ಲಿ ಪರಿವರ್ತನಾ ಯಾತ್ರೆಗೆ ಆಗಮಿಸುತ್ತಿರುವ ಅಮಿತ್ ಶಾ ವಿರುದ್ಧವೋ?
ಕರ್ನಾಟಕ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಟಿಎ ನಾರಾಯಣ ಗೌಡರು ಮೊದಲು ಬೆಂಬಲ ನೀಡುವುದಿಲ್ಲವೆಂದು ಹೇಳಿ, ನಂತರ ಬೆಂಬಲ ನೀಡಿದ್ದೇಕೆ? ಅವರಿಗೆ ಬೆಂಬಲ ನೀಡಲು ಸಿಕ್ಕಿರುವ ಪ್ರೇರಣೆಯಾದರೂ ಏನು? ಲಾರಿ ಮಾಲಿಕರ ಸಂಘವೂ ಕೂಡ ಬೆಂಬಲ ಕೊಡಲ್ಲ, ಕೊಡುತ್ತೇನೆ, ಕೊಡಲ್ಲ ಎಂದು ಕ್ಷಣಕ್ಷಣಕ್ಕೆ ನಿರ್ಧಾರ ಬದಲಿಸುವುತ್ತಿರುವುದೇಕೆ?

ಬಂದ್ ಬಿಸಿ ಕೆಲವೇ ಪ್ರದೇಶಗಳಿಗೆ ಮಾತ್ರ ಸೀಮಿತ ಮಾಡಿರುವುದೇಕೆ? ಕನ್ನಡ ಹೋರಾಟಗಾರರು ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ, ಮತ್ತಿತರ ಆಯಕಟ್ಟಿನ ಸ್ಥಳದಲ್ಲಿಯೇ ತಮ್ಮ ಪ್ರತಾಪ ತೋರಿಸುತ್ತಿರುವುದೇಕೆ? ಕೆಂಗೇರಿ, ಉಲ್ಲಾಳ, ಮಲ್ಲಸಂದ್ರ, ನಾಗರಬಾವಿ, ಆವಲಹಳ್ಳಿ, ಗಿರಿನಗರ, ಹನುಮಂತನಗರ, ಶ್ರೀನಗರ, ಎನ್ ಆರ್ ಕಾಲೋನಿಗಳಲ್ಲಿ ಹೋರಾಟಗಾರರು ಪ್ರತಿಭಟನೆ ಏಕೆ ಮಾಡುತ್ತಿಲ್ಲ?
ಕರ್ನಾಟಕದ ಇಪ್ಪತ್ತೆಂಟು ಸಂಸದರು ಸಂಸತ್ತಿನ ಎದುರು ಇರುವ ಗಾಂಧಿ ಪ್ರತಿಮೆಯ ಬಳಿ ಫಲಕ ಹಿಡಿದುಕೊಂಡು ಪ್ರತಿಭಟನೆ ಏಕೆ ಮಾಡುತ್ತಿಲ್ಲ. ಮಹದಾಯಿ ವಿವಾದವನ್ನು ಮಧ್ಯಸ್ಥಿಕೆ ವಹಿಸಿ ಬಗೆಹರಿಸಬೇಕೆಂದು ಕೇಂದ್ರ ಸರಕಾರವನ್ನು, ನರೇಂದ್ರ ಮೋದಿಯವರನ್ನು ನಮ್ಮ ಸಂಸದರು ಏಕೆ ಕೋರುತ್ತಿಲ್ಲ? ನರೇಂದ್ರ ಮೋದಿಯವರಾದರೂ ಈ ವಿಷಯದಲ್ಲಿ ಏಕೆ ಆಸಕ್ತಿ ತೋರಿಸುತ್ತಿಲ್ಲ?
ಈ ಬಂದ್ ಮಾಡುವ ಮೂಲಕ ವಾಟಾಳ್ ನಾಗರಾಜ್ ಅವರಾಗಲಿ, ಕನ್ನಡಪರ ಹೋರಾಟಗಾರರಾಗಲಿ ಯಾವ ಸಂದೇಶವನ್ನು ನೀಡಲು ಯತ್ನಿಸುತ್ತಿದ್ದಾರೆ? ಮೈಸೂರು ಬ್ಯಾಂಕ್ ಎದಿರು, ರೈಲ್ವೆ ಸ್ಟೇಷನ್ ನಲ್ಲಿ, ಬಸ್ ನಿಲ್ದಾಣದಲ್ಲಿ ಚಾಪೆ ಹಾಸಿ ಉರುಳು ಸೇವೆ ಮಾಡುವ ವಾಟಾಳ್ ನಾಗರಾಜ್, ಮಹದಾಯಿ ನೀರಿಗಾಗಿ ಆಗ್ರಹಿಸಿ ನವದೆಹಲಿಯಲ್ಲಿ ಸಂಸತ್ ಭವನದ ಎದಿರು ಏಕೆ ಉರುಳುಸೇವೆ ಮಾಡುವುದಿಲ್ಲ?
ಪ್ರತಿಭಟನೆಯಲ್ಲಿ ನಿರತರಾಗಿರುವವರಿಗೆ, ಅವರಿವರ ವಿರುದ್ಧ ಧಿಕ್ಕಾರ ಕೂಗುತ್ತಿರುವವರಿಗೆ, ರಸ್ತೆರಸ್ತೆಗಳಲ್ಲಿ ಟೈರುಗಳಿಗೆ ಬೆಂಕಿ ಹಚ್ಚುವವರಿಗೆ, ರೈಲಿನ ಮುಂದೆ ಮಲಗಿ ಸಂಚಾರ ನಿಲ್ಲಿಸುವವರಿಗೆ, ಬಸ್ಸಿಗೆ ಕಲ್ಲೇಟು ಹೊಡೆಯುವವರಿಗೆ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವವರಿಗೆ, ಹೆಲ್ಮೆಟ್ ಇಲ್ಲದೆ ಬೈಕ್ ಮೇಲೆ ಜಾಥಾ ಮಾಡುವ ಎಷ್ಟು ಜನರಿಗೆ ತಾವು ಯಾವ ಕಾರಣಕ್ಕಾಗಿ ಬಂದ್ ಮಾಡುತ್ತಿದ್ದೇವೆಂಬುದು ಗೊತ್ತಾ?












Click it and Unblock the Notifications