ಗಲಾಟೆ ಮಾಡ್ಕೊಂಡು ಸದನದ ಅಮೂಲ್ಯ ಸಮಯ ಹಾಳ್ ಮಾಡ್ಬೇಡಿ
ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸೋಮವಾರದಿಂದ (ನ 16) ಆರಂಭವಾಗಿದೆ. ಮೇಲ್ನೋಟಕ್ಕೆ ಈ ಅಧಿವೇಶನ ಕೂಡಾ ಆರೋಪ, ಪ್ರತ್ಯಾರೋಪಕ್ಕೆ ಆಪೋಶನಗೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ದಿನವೊಂದಕ್ಕೆ ಲಕ್ಷಾಂತರ ರೂಪಾಯಿ ತೆರಿಗೆದಾರರ ಹಣ ಖರ್ಚಾಗುವ ಅಧಿವೇಶನ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗುತ್ತಿರುವುದು ನಮ್ಮ ದೇಶದ ಇತಿಹಾಸ ಮತ್ತು ಸಾರ್ವಜನಿಕರ ದೌರ್ಭಾಗ್ಯ. ಇದೆಲ್ಲಾ ಗೊತ್ತಿದ್ದರೂ ಸತ್ಪ್ರಜೆಗಳಾಗಿ ಮತ ಚಲಾಯಿಸುವ ದರ್ದ್ ನಮಗ್ಯಾಕೆ ಎನ್ನುವ ನೋವು ಕಾಡಿದರೆ ಅದನ್ನು ಕ್ಯಾರ್ ಮಾಡುವವರು ಯಾರೂ ಇಲ್ಲ.
ಟಿಪ್ಪು ಜಯಂತಿ, ಅಸಹಿಷ್ಣುತೆ, ಕಾರ್ನಾಡ್, ಮಾಂಸ, ಬಿಹಾರ ಚುನಾವಣೆಯ ವಿಷಯ ಮುಂದಿಟ್ಟುಕೊಂಡು ಸದನದ ಸಮಯವನ್ನು ಹಾಳು ಮಾಡಬೇಡಿ, ಒಂದಷ್ಟು ಜನಮೆಚ್ಚುವ ಕೆಲಸ ಮಾಡಿ. ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಈ ಅಧಿವೇಶನವಾದರೂ ಉಪಯೋಗಕ್ಕೆ ಬರಲಿ ಎನ್ನುವುದು ಸಾರ್ವಜನಿಕರ ಆಶಯ. (ವಿಧಾನಸಭೆಗೆ ಮುತ್ತಿಗೆ ಹಾಕಲು ಬಿಜೆಪಿ ಸಜ್ಜಾಗಿದೆ)
ರಾಜಕೀಯ ಎಂದ ಮೇಲೆ ಬೈಯೋದು, ಹೊಗಳೋದು, ಗೂಬೆ ಕೂರಿಸಿವುದು ಮಾಮೂಲಿಯಾದರೂ, ಹಲವಾರು ಜನಪರ ನಿಲುವು, ಮಸೂದೆ ಮಂಡನೆ, ಅನುಮೋದನೆಗೆ ಉಪಯೋಗವಾಗ ಬೇಕಾಗಿರುವ ಅಧಿವೇಶನದ ಸಮಯವನ್ನು ವೃಥಾ ಟೀಕೆಗೆ ಬಳಸಿಕೊಳ್ಳಬೇಡಿ. ಅಸೆಂಬ್ಲಿಯಲ್ಲಿ ಸಬ್ಸಿಡಿ ದರದಲ್ಲಿ ನಿಮಗೆ ಸಿಗುವ ಊಟೋಪಚಾರಗಳೂ ವೇಸ್ಟ್ ಆಗದಿರಲಿ.
ನಿಮ್ಮ ರಾಜಕೀಯ ಮೇಲಾಟಕ್ಕೆ ಬೇಕಾದಷ್ಟು ಇತರ ವೇದಿಕೆಗಳು ಇರುವುದರಿಂದ, ಅಲ್ಲಿ ನಿಮ್ಮ ಶಕ್ತಿಯುಕ್ತಿ ಪ್ರದರ್ಶನ ನಡೆಸಿ, ಜನರಿಗೂ ಇದರಿಂದ ಪುಕ್ಸಟೆ ಮನೋರಂಜನೆ ಸಿಕ್ಕಾಗೂ ಆಗುತ್ತೆ. ಜೊತೆಗೆ ತಿಂದಿದ್ದೂ ಅರಗಿಸಿಕೊಂಡಂಗಾಗುತ್ತೆ.
ರಾಜ್ಯದ ಹಲವು ಜ್ವಲಂತ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಒಟ್ಟಿಗೆ ಕೂತು, ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ. ಅದಕ್ಕೆ ಸೂಕ್ತ ವೇದಿಕೆಯೆಂದರೆ ಅದು ಅಧಿವೇಶನ. ಪಕ್ಷಬೇಧ ಮರೆತು ಕೇಂದ್ರಕ್ಕೆ ಒತ್ತಡ ತರುವಂತಹ ಕೆಲಸಗಳೂ ಆಗಬೇಕಾಗಿರುತ್ತದೆ. (10 ದಿನಗಳ ಚಳಿಗಾಲದ ಅಧಿವೇಶನ : ಮೊದಲ ದಿನ ಏನಾಯ್ತ)
ಹಾಗಾಗಿ, ಈ ಚಳಿಗಾಲದ ಅಧಿವೇಶನವನ್ನು ಟಿಪ್ಪು, ಅಸಹಿಷ್ಣುತೆ, ಕಾರ್ನಾಡ್ ಅವರಿಗೆ ಮುಡಿಪಾಗಿಡದೇ, ಜನರ ಆಶೋತ್ತರಕ್ಕೆ ಸ್ಪಂದಿಸಿ ದೇವರು ಮೆಚ್ಚುವಂತಹ ಕೆಲಸವನ್ನು ಮಾಡಿ ಎನ್ನುವುದು ಮತದಾರನ ಕೋರಿಕೆ. ತುರ್ತಾಗಿ ಒಂದು ನಿರ್ಧಾರಕ್ಕೆ ಬರಬೇಕಾಗಿರುವ ಕೆಲವೊಂದು ಸಮಸ್ಯೆಗಳು, ಸ್ಲೈಡಿನಲ್ಲಿ..

ಕಳಸಾ ಬಂಡೂರಿ
ಉತ್ತರ ಕರ್ನಾಟಕ ಭಾಗದ ಮೂರು ಜಿಲ್ಲೆಗಳಿಗೆ ನೀರಿನ ಮೂಲವಾಗಿರುವ ಮಹದಾಯಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಳಸಾ ಬಂಡೂರಿ ನಾಲೆ ವಿವಾದಕ್ಕೆ, ರಾಜ್ಯದ ಮೂರೂ ಪ್ರಮುಖ ಪಕ್ಷಗಳು ಒಟ್ಟಾಗಿ ಒಂದು ನಿರ್ಧಾರಕ್ಕೆ ಬರಬೇಕಾಗಿದೆ. ದಶಕಗಳಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಂದರೆ ಅದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಮೋದಿ, ಬಿಜೆಪಿ, ಕಾಂಗ್ರೆಸ್, ಗೋವಾ ಎಂದು ಇನ್ನೊಬ್ಬರ ಅಂಗಣದಲ್ಲಿ ಚೆಂಡು ಬಿಸಾಕುವುದನ್ನು ಬಿಟ್ಟು, ಒಂದು ಒಳ್ಳೆ ನಿರ್ಧಾರಕ್ಕೆ ಈ ಅಧಿವೇಶನದಲ್ಲಿ ಬನ್ನಿ.

ಎತ್ತಿನಹೊಳೆ
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರ ನೀರದಾಹ ತೀರಿಸುವ ಸಂಸದ ವೀರಪ್ಪ ಮೊಯ್ಲಿಯವರ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಬಗ್ಗೆ ಸದನದಲ್ಲಿ ಕೂಲಂಕುಷ ಚರ್ಚೆಯಾಗ ಬೇಕಾಗಿದೆ. ಈ ಯೋಜನೆಯಿಂದಾಗುವ ಸಾಧಕ ಬಾಧಕಗಳೇನು ಎನ್ನುವುದು ಈ 4 ಜಿಲ್ಲೆಗಳ ಜೊತೆಗೆ ದಕ್ಷಿಣಕನ್ನಡ ಜಿಲ್ಲೆಯ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಜನಪ್ರತಿನಿಧಿಗಳು ಮಾಡಬೇಕಾಗಿದೆ.

ವಿದ್ಯುತ್ ಸಮಸ್ಯೆ
ಪ್ರಮುಖವಾಗಿ ನೀರಾವರಿಗೆ ಮತ್ತು ಗ್ರಾಮೀಣ ಭಾಗದ ಜನರಿಗೆ ವಿದ್ಯುತ್ ಸಮಸ್ಯೆ ಇನ್ನಿಲ್ಲದಂತೇ ಕಾಡುತ್ತಿದೆ. ಬರಗಾಲವಿರುವುದರಿಂದ ವಿದ್ಯುತ್ ಉತ್ಪಾದನೆ ಕಮ್ಮಿ ಎನ್ನುವುದು ಒಪ್ಪಿಕೊಳ್ಳುವ ವಿಚಾರವಾದರೂ, ಎಲ್ಲಾ ಪಕ್ಷಗಳು ಒಟ್ಟಾಗಿ ಅಂತಿಮ ನಿಲುವಿಗೆ ಬರಬೇಕಾಗಿದೆ. ಶಾಖೋತ್ಪನ್ನ ಘಟಕಗಳ ಮೇಲ್ದರ್ಜೆ, ಕೇಂದ್ರಕ್ಕೆ ಮನವಿ ಸಲ್ಲಿಸುವುದು ಹೀಗೆ.. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸದನದ ಸಮಯವನ್ನು ಬಳಸಿಕೊಳ್ಳಿ.

ಕಾವೇರಿ
ಜೀವನದಿ ಕಾವೇರಿ ವಿವಾದ ಇಂದು ನಿನ್ನೆಯದಲ್ಲ. ಆದರೂ, ಸದನದಲ್ಲಿ ಮೊದಲು ಪ್ರಮುಖ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಬೇಕಿದೆ. ಬರುವ ವರ್ಷ ತಮಿಳುನಾಡು ಚುನಾವಣೆಯಿರುವುದರಿಂದ ಜಯಲಲಿತಾ ಮತ್ತೆ ಈ ಸಮಸ್ಯೆಯನ್ನು ಕೆದುಕುವುದು ನಿಶ್ಚಿತ. ಹಾಗಾಗಿ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಚರ್ಚಿಸಬೇಕಿದೆ. ರಾಜ್ಯದ ಸಮಸ್ಯೆಯನ್ನು ಖಡಕ್ಕಾಗಿ ಮತ್ತು ಸರ್ವೋಚ್ಚ ನ್ಯಾಯಾಲಯಕ್ಕೆ ಮನದಟ್ಟು ಮಾಡುವ ವಕೀಲ ವೃಂದದವರ ಅವಶ್ಯಕತೆಯಿದೆ.

ರೈತನ ಆತ್ಮಹತ್ಯೆ
ಸಮೂಹ ಸನ್ನಿಯಂತೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಈ ಸಮಯದಲ್ಲಿ ಪಕ್ಷಗಳು 'ಪಕ್ಷಭೇದ' ಮರೆತು ರೈತರ ಪರವಾಗಿ ನಿಲ್ಲಬೇಕಿದೆ. ಸದನದಲ್ಲಿ ಅನ್ನದಾತನ ರಕ್ಷಣೆಗೆ ಏನು ಕ್ರಮ ತೆಗೆದುಕೊಳ್ಳಬಹುದು ಎನ್ನುವುದರ ಬಗ್ಗೆ ಚರ್ಚೆ ನಡೆಯಲಿ.

ಕಾನೂನು ಸುವ್ಯವಸ್ಥೆ
ಅತ್ಯಾಚಾರ, ಕಳ್ಳತನ, ಕೊಲೆ ಮುಂತಾದ ಘಟನೆಗಳಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟು ಹೋಗಿದೆ. ಅತ್ಯಾಚಾರದ ವಿಚಾರದಲ್ಲಿ ರಾಜಕಾರಣಿಗಳು ಬೇಕಾಬಿಟ್ಟಿ ಹೇಳಿಕೆ ನಿಲ್ಲಬೇಕಿದೆ. ಈ ವಿಷಯವನ್ನೂ ಸದನದಲ್ಲಿ ಪ್ರಸ್ತಾವಿಸಿ, ಸ್ಪೀಕರ್ ಸದಸ್ಯರಿಗೆ ಬೇಕಾಬಿಟ್ಟಿ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಬೇಕಿದೆ.












Click it and Unblock the Notifications