ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿಗೆ ಯಡಿಯೂರಪ್ಪರ ಅನುಭವ, ಜನಪ್ರಿಯತೆ ಪ್ರಮುಖ ವಿಷಯಗಳು!
ಬೆಂಗಳೂರು, ಜ. 10: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ಮತ್ತೆ ಅಧಿಕಾರ ಹಿಡಿಯುವ ತವಕದಲ್ಲಿರುವ ಬಿಜೆಪಿಗೆ ಈಗ ಪ್ರಮುಖ ಮುಖ ಎಂದರೆ ಅದು ಲಿಂಗಾಯತ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ.
ಹೌದು, ರಾಜ್ಯ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಎನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅನಿಭವ ಮತ್ತು ಜನಪ್ರಿಯತೆ ಈ ಬಾರಿಯ ಚುನಾವಣೆಯಲೂ ಬಿಜೆಪಿ ಕೈ ಹಿಡಿಯಬೇಕಿದೆ.
ರಾಜ್ಯದಲ್ಲಿ ಲಿಂಗಾಯತರು ದೊಡ್ಡ ಸಮುದಾಯವಾಗಿದ್ದು, ಜನಸಂಖ್ಯೆಯ ಸುಮಾರು 17 ಪ್ರತಿಶತ ಈ ಸಮುದಾಯದವರಿದ್ದಾರೆ. ಬಹುತೇಕ ಉತ್ತರ ಕರ್ನಾಟಕ ಪ್ರದೇಶದಲ್ಲಿದ್ದು, ಸಾಂಪ್ರದಾಯಿಕವಾಗಿ ಈವರೆಗೆ ಬಿಜೆಪಿಗೆ ಮತ ಹಾಕಿದ್ದಾರೆ. ಇನ್ನು, ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಕೂಡ ಲಿಂಗಾಯತ ಸಮುದಾಯದ ನಾಯಕರಾಗಿದ್ದಾರೆ.

ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿಗೆ ಲಿಂಗಾಯತ ಮತಗಳು ನಿರ್ಣಾಯಕ
"ನಿಸ್ಸಂದೇಹವಾಗಿ ಲಿಂಗಾಯತ ಮತಗಳು ನಮ್ಮ ಪಕ್ಷಕ್ಕೆ ಪ್ರಮುಖ ಮತಗಗಳಾಗಿವೆ. ಬಿಎಸ್ ಯಡಿಯೂರಪ್ಪ ಅವರು ನಮ್ಮ ಅತ್ಯಂತ ಜನಪ್ರಿಯ ಲಿಂಗಾಯತ ನಾಯಕರಲ್ಲಿ ಒಬ್ಬರು. ಹೀಗಾಗಿ ಬಿಜೆಪಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೋಯ್ಯಲು ಅವರ ಮೇಲೆ ಅವಲಂಭಿಸಿದ್ದೇವೆ" ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ 2022 ರಲ್ಲಿ, ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಸಮಿತಿಯು ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ಇದು ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಬಿಟ್ಟು ಕೊಡದೆ ಇರಲು ಮತ್ತು ಪಕ್ಷದಲ್ಲಿ ಅವರ ಸ್ಥಾನವನ್ನು ಯಾವಾಗಲು ಗೌರವಿಸಲಾಗುತ್ತದೆ ಎಂದು ತಿಳಿಸಲು ಹೈಕಮಾಂಡ್ ಮಾಡಿದ ನಿರ್ಧಾರ ಎನ್ನಲಾಗಿದೆ.

ಸಿಎಂ ಸ್ಥಾನವನ್ನು ಮುಲಾಜಿಲ್ಲದೆ ಬಿಟ್ಟ ಅನುಭವಿ ರಾಜಕಾರಣಿ ಬಿಎಸ್‌ವೈ
ಕಳೆದ ವರ್ಷ ಬಿಎಸ್‌ವೈ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ನಿರ್ಧರಿಸಿದಾಗ ಅವರು ಯಾವುದೇ ಮುಲಾಜಿಲ್ಲದೆ ಕೆಳಗಿಳಿದವರು. ಈ ವೇಳೆ ಸಂಘಟನೆಯು ತಮಗೆ ವಹಿಸಿದ ಯಾವುದೇ ಜವಾಬ್ದಾರಿಯನ್ನು ಮರು ಮಾತನಾಡದೇ ಸ್ವೀಕರಿಸಿದ್ದಾರೆ. ಅದು ಅನುಭವಿ ರಾಜಕಾರಣಿಯ ಲಕ್ಷಣವಾಗಿದೆ ಎಂದು ಮತ್ತೊಬ್ಬ ಬಿಜೆಪಿ ನಾಯಕ ಹೇಳಿದ್ದಾರೆ.
ಬಿಜೆಸ್‌ವೈ ಅವರ ಪ್ರಾಮುಖ್ಯತೆಯನ್ನು ಗುರುತಿಸಲು ಇತ್ತೀಚೆಗೆ ಗುಜರಾತ್ ರಾಜ್ಯಕ್ಕೆ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಕೇಂದ್ರ ವೀಕ್ಷಕರಾಗಿ ಅವರನ್ನು ಹೈಕಮಾಂಡ್ ಗುಜರಾತ್‌ಗೆ ಕಳುಹಿಸಿತ್ತು. ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಗುಜರಾತ್‌ನಲ್ಲಿ ಪಕ್ಷದ ನೂತನ ಶಾಸಕರ ಸಭೆಗೆ ಬಿಜೆಪಿಯ ಹಿರಿಯ ನಾಯಕರಾದ ರಾಜನಾಥ್ ಸಿಂಗ್, ಬಿ ಎಸ್ ಯಡಿಯೂರಪ್ಪ ಮತ್ತು ಅರ್ಜುನ್ ಮುಂಡಾ ಅವರನ್ನು ಕೇಂದ್ರ ವೀಕ್ಷಕರನ್ನಾಗಿ ನೇಮಿಸಲಾಗಿತ್ತು.

ಬಿಎಸ್‌ವೈ ಎಂಟು ಬಾರಿ ಶಾಸಕರಾದ ಕ್ಷೇತ್ರಕ್ಕೆ ಮಗನ ಎಂಟ್ರಿ!?
ತಾವು ಎಂಟು ಬಾರಿ ಶಾಸಕರಾಗಿದ್ದ ತಮ್ಮ ಸ್ವಂತ ಕ್ಷೇತ್ರವಾದ ಶಿಕಾರಿಪುರವನ್ನು ಈ ಭಾರಿ ತಮ್ಮ ಕಿರಿಯ ಪುತ್ರ ಬಿವೈ ವಿಜಯೇಂದ್ರಗಾಗಿ ಮುಂಬರುವ ರಾಜ್ಯ ಚುನಾವಣೆಯಲ್ಲಿ ಬಿಟ್ಟು ಕೊಡುತ್ತಾರೆ ಎಂಬ ಊಹಾಪೋಹಗಳು ಹರಡಿವೆ. ಆದರೆ, ಅಂತಿಮ ನಿರ್ಧಾರ ಇನ್ನೂ ದೆಹಲಿಯ ಹೈಕಮಾಂಡ್ ಮೇಲೆ ಅವಲಂಬಿಸಿದೆ.
"ಬಿಎಸ್‌ವೈ ಅವರು ರಾಜ್ಯದ ಮೂಲೆ ಮೂಲೆಯನ್ನು ಚೆನ್ನಾಗಿ ತಿಳಿದಿದ್ದಾರೆ. ಜನರ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಳ್ಳುವ ಅವರು ನಿರಂತರವಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಅವರ ಪ್ರತಿಕ್ರಿಯೆಯನ್ನು ಪಕ್ಷದ ಪ್ರಮುಖರು, ಪಕ್ಷದ ಹಿರಿಯ ಪದಾಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಪ್ರಸ್ತುತ ನಡೆಯುತ್ತಿರುವ ಬಿಜೆಪಿ ಜನಸಂಪರ್ಕ ಯಾತ್ರೆಯು 25 ವಿಧಾನಸಭಾ ಕ್ಷೇತ್ರಗಳಿಗೆ ಹೋಗಿದ್ದು, ಇವು ಬಿಎಸ್‌ವೈ ವ್ಯಪ್ತಿಯಲ್ಲಿ ಬರುತ್ತವೆ" ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಇನ್ನು, ರಾಜ್ಯದಲ್ಲಿ ಶೇಕಡಾ 14 ರಷ್ಟು ಮತದಾರರನ್ನು ಹೊಂದಿರುವ ಒಕ್ಕಲಿಗ ಸಮುದಾಯವು ಎಚ್‌ಡಿ ದೇವೇಗೌಡ ನೇತೃತ್ವದ ಜಾತ್ಯತೀತ ಜನತಾ ದಳ (ಜೆಡಿಎಸ್) ಗೆ ಸಾಂಪ್ರದಾಯಿಕ ಮತಬ್ಯಾಂಕ್ ಆಗಿದ್ದು, ದಕ್ಷಿಣದಲ್ಲಿ ಬಿಜೆಪಿಗೆ ದುರ್ಬಲ ಕ್ಷೇತ್ರವಾಗಿದೆ ಎಂದು ಹೇಳಲಾಗುತ್ತದೆ.

ತಿರುವುಗಳು, ವಿವಾದಗಳು, ಜೈಲು ಎಲ್ಲವನ್ನು ಒಳಗೊಂಡಿದೆ ಬಿಎಸ್‌ವೈ ಜೀವನ
2019ರಲ್ಲಿ ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ಖರೀದಿಸಿ ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಉರುಳಿಸುವಲ್ಲಿ ಬಿಜೆಪಿ ಯಶಸ್ವಿಯಾದಾಗ ಮಾತ್ರ ಬಿಜೆಪಿ ಜೆಡಿಎಸ್‌ನ ಭದ್ರಕೋಟೆಯನ್ನು ಭೇದಿಸಲು ಸಾಧ್ಯವಾಗಿತ್ತು.
ಮುಂದಿನ ತಿಂಗಳು 80 ನೇ ವರ್ಷಕ್ಕೆ ಕಾಲಿಡಲಿರುವ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಜೀವನವು ಹಲವು ತಿರುವುಗಳು ಮತ್ತು ವಿವಾದಗಳಿಂದ ಕೂಡಿದೆ. 2008 ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಾಧ್ಯವಾಗಿತ್ತು. 2011ರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು 2016 ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದರು. ನಂತರ ತಮ್ಮದೇ ಆದ ರಾಜಕೀಯ ಸಂಘಟನೆಯನ್ನು ಕಟ್ಟಿದ್ದ ಸ್ವಲ್ಪ ಸಮಯದ ನಂತರ ಮತ್ತೆ ಬಿಜೆಪಿಯೊಂದಿಗೆ ವಿಲೀನಗೊಂಡು 2014ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ಪರ್ಧಿಸಿ ಗೆದ್ದರು.
ಬಿಎಸ್‌ವೈ 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, 2 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಪಕ್ಷವು ಬಹುಮತವನ್ನು ಸಾಬೀತುಪಡಿಸಲು ಸಾಧ್ಯವಾಗದ ಕಾರಣ ರಾಜೀನಾಮೆ ನೀಡಿದರು.
ಒಂದು ವರ್ಷದ ನಂತರ, ಆಪರೇಷನ್ ಕಮಲ ನಡೆಸಿದ್ದ ನಂತರ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ 18 ಶಾಸಕರು ಬಿಜೆಪಿಗೆ ಹಾರಿದರು. ಯಡಿಯೂರಪ್ಪ ಅವರ ವೃತ್ತಿಜೀವನದಲ್ಲಿ ನಾಲ್ಕನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಜುಲೈ 2021 ರಲ್ಲಿ ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಸಿಎಂ ಸ್ಥಾನದಿಮದ ಕೆಳಗಿಳಿದು ತಮ್ಮ ಆಪ್ತರಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ.












Click it and Unblock the Notifications