National Survey Day: ಕಂದಾಯ ಇಲಾಖೆಯ ನೇಮಕಾತಿ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ
ಬೆಂಗಳೂರು, ಏಪ್ರಿಲ್ 10: ರಾಜ್ಯದ ಕಂದಾಯ ಇಲಾಖೆ ಕರ್ನಾಟಕದ ಸರ್ಕಾರದ ಮಾತೃ ಇಲಾಖೆ ಇದ್ದಂತೆ. ಈ ಇಲಾಖೆ ಅಚ್ಚುಕಟ್ಟಾಗಿ ಕೆಲಸ ಮಾಡಿದರೆ ರೈತ ಸಮುದಾಯ ನೆಮ್ಮದಿಯಾಗಿರುತ್ತದೆ. ಸಚಿವ ಕೃಷ್ಣಬೈರೇಗೌಡರ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಅತ್ಯುತ್ತಮ ಕೆಲಸಗಳಾಗುತ್ತಿವೆ. ಅವರೊಬ್ಬ ಪರಿಣಿತ ಮಂತ್ರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸದಿರು.
ಗುರುವಾರ ನಗರದ ವಿಧಾನಸೌಧದ ಮುಂಭಾಗ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಇಲಾಖೆಯ ನೌಕರರ ಸಂಘಗಳ 36ನೇ ರಾಷ್ಟ್ರೀಯ ಭೂಮಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಂದಾಯ ಇಲಾಖೆ ಸಚಿವರಾದ ಕೃಷ್ಣಬೈರೇಗೌಡರು ಇಲಾಖೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ನಾಲಿಗೆ ತುದಿಯಲ್ಲಿ ಅಂಕಿ ಅಂಶ ಇಟ್ಟುಕೊಂಡಿರುವ ಸಮರ್ಥ ಮಂತ್ರಿ ಅವರು. ಕೇವಲ ಮಂತ್ರಿ ಆದರೆ ಸಾಲದು. ಪರಿಣತಿ, ಕಾಳಜಿ ಇರಬೇಕು. ಇವೆರಡೂ ಕೃಷ್ಣಬೈರೇಗೌಡ ಅವರಲ್ಲಿದೆ ಎಂದು ಶ್ಲಾಘಿಸಿದರು.

ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿ ಕಂದಾಯ ಇಲಾಖೆಯ, ನೌಕರರ ಬಹಳಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಪೂರ್ತಿ ಸಮಸ್ಯೆ ಬಗೆಹರಿದಿಲ್ಲ ಎನ್ನುವ ಬೇಸರ ನನಗೂ ಇದೆ. ತಹಶೀಲ್ದಾರ್, ಎಸಿ ಕಚೇರಿಗಳಲ್ಲಿ ಸುಗಮವಾಗಿ, ಪ್ರಾಮಾಣಿಕವಾಗಿ ಕೆಲಸಗಳು ಆದರೆ ನಾಡಿನ ಜನತೆ, ರೈತ ಸಮುದಾಯ ಅತ್ಯಂತ ನೆಮ್ಮದಿಯಾಗಿರುತ್ತದೆ.
ನೇಮಕಾತಿ ಪತ್ರ ವಿತರಣೆ ಶೀಘ್ರ
ಕಂದಾಯ ಇಲಾಖೆಗೆ ಅಗತ್ಯ ಇರುವಷ್ಟು ಹಣ ಕೊಟ್ಟಿದ್ದೇವೆ, ಮುಂದೆಯೂ ಕೊಡುತ್ತೇವೆ. ಅಗತ್ಯ ಸಿಬ್ಬಂದಿ ಬಲವನ್ನೂ ಕೊಟ್ಟಿದ್ದೇವೆ. ಅಗತ್ಯ ಇದ್ದರೆ ಮತ್ತೂ ಕೊಡುತ್ತೇನೆ. ಖಾಲಿ ಇರುವ ಎಲ್ಲಾ ಸರ್ವೇಯರ್ ಹುದ್ದೆಗಳ ನೇಮಕಾತಿ ಅತ್ಯಂತ ಪಾರದರ್ಶಕವಾಗಿ ಆಗಿದೆ. ಸದ್ಯದಲ್ಲೇ ನೇಮಕಾತಿ ಪತ್ರವನ್ನೂ ಕೊಡುತ್ತೇವೆ. ಹಿಂದೆ ಗೋವಿಂದೇಗೌಡರು ಪ್ರಾಮಾಣಿಕವಾಗಿ ಒಂದು ಲಕ್ಷ ಶಿಕ್ಷಕರ ನೇಮಕಾತಿ ಮಾಡಿರುವ ರೀತಿಯಲ್ಲೇ ಕೃಷ್ಣಬೈರೇಗೌಡರು ಸರ್ವೇಯರ್ ಗಳ ನೇಮಕಾತಿ ಮಾಡಿದ್ದಾರೆ.
ಕಂದಾಯ ಇಲಾಖೆಯ 36 ಹುದ್ದೆಗಳ ನೇಮಕ..
ಪರವಾನಗಿ ಭೂಮಾಪಕರ ಕಾಯಂ ಮಾಡಲು ಗಂಭೀರ ಚಿಂತನೆ ಮಾಡಲಾಗುವುದು. ಜೊತೆಗೆ 36 ಮಂದಿ ಎಡಿಎಲ್ ಆರ್ ಗಳ ನೇಮಕವನ್ನೂ ಸದ್ಯದಲ್ಲೇ ಮಾಡಲಾಗುವುದು. ಭಾರತವು ಹಳ್ಳಿಗಳ ಮತ್ತು ರೈತರ ದೇಶ. ಗ್ರಾಮಗಳು ಮತ್ತು ರೈತರು ನೆಮ್ಮದಿಯಾಗಿ ಉತ್ಪಾದನೆಯಲ್ಲಿ ತೊಡಗಬೇಕಾದರೆ ಸರ್ವೇ ಕಾರ್ಯ ಸರಿಯಾಗಿ ಪೂರ್ಣಗೊಳ್ಳಬೇಕು. ಕೆರೆ ಕಟ್ಟೆಗಳ ಒತ್ತುವರಿ ತೆರವುಗೊಳಿಸಬೇಕು, ಪೋಡಿ ಮುಕ್ತ ಗ್ರಾಮಗಳಾಗಬೇಕು. ಇದಕ್ಕಾಗಿ ಇಲಾಖೆಯ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಶ್ರಮಿಸಿ, ಧ್ವನಿ ಇಲ್ಲದವರ ಪರವಾಗಿ ಕೆಲಸ ಮಾಡುವುದೇ ನಿಜವಾದ ಪುಣ್ಯದ ಕಾರ್ಯ ಎಂದು ಅವರು ಹೇಳಿದರು.

ಪ್ರತೀ ವರ್ಷ ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಆಚರಿಸಬೇಕು ಎಂದು ಇದೇ ವೇಳೆ ಮುಖ್ಯಮಂತ್ರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಇನ್ನು ಮುಂದೆ ಪ್ರತಿ ವರ್ಷವು ಈ ಆಚರಣೆ ನಡೆಯಲಿದೆ.











Click it and Unblock the Notifications