ಬರ ಪರಿಸ್ಥಿತಿಯಲ್ಲೂ ಕೊಪ್ಪಳ ರೈತನ ಕೈ ಹಿಡಿದ ಕನಕಾಂಬರ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕೊಪ್ಪಳ, ಸೆಪ್ಟೆಂಬರ್ 25: ಬರ ಪರಿಸ್ಥಿತಿಯಲ್ಲೂ ಸ್ವಲ್ಪ ಪ್ರಮಾಣದ ಜಮೀನಿನಲ್ಲೇ ಭರ್ಜರಿ ಕನಕಾಂಬರ ಹೂವಿನ ಬೆಳೆ ಬೆಳೆದು, ಲಕ್ಷಗಟ್ಟಲೆ ಆದಾಯ ಗಳಿಸುತ್ತಿರುವ ಯಲಬುರ್ಗಾ ತಾಲೂಕು ಹೊಸಳ್ಳಿ ಗ್ರಾಮದ ರೈತ ಕರಿಬಸಯ್ಯ ಬಳಿಗೇರ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಸ್ವಲ್ಪ ಜಮೀನಿನಲ್ಲಿ ಕನಕಾಂಬರಿ ಬೆಳೆದು, 1 ಲಕ್ಷಕ್ಕೂ ಹೆಚ್ಚಿನ ಆದಾಯ ಗಳಿಸಿರುವ ಯಲಬುರ್ಗಾ ತಾಲ್ಲೂಕಿನ ಹೊಸಳ್ಳಿ ಗ್ರಾಮದ ರೈತ ಕರಿಬಸಯ್ಯ ಅಬಿನಂದನಾರ್ಹರು. ರೈತ ಕರಿಬಸಯ್ಯ ಬಳಿಗೇರ 2015ರ ಅಗಸ್ಟ್ ತಿಂಗಳಿನಲ್ಲಿ ಅರ್ಕ ಕನಕ ಎಂಬ ತಳಿಯನ್ನು ಜಿನ್ನಾಪುರದಿಂದ ಒಂದು ರುಪಾಯಿಗೆ ಎರಡು ಗಿಡಗಳಂತೆ 6000 ಸಸಿಗಳನ್ನು ಖರೀದಿ ಮಾಡಿದರು.

ತಮ್ಮ 18 ಗುಂಟೆ ಜಮೀನಿನಲ್ಲಿ ಬೇಸಿಗೆಯಲ್ಲಿ ಮಾಗಿ ಉಳುಮೆ ಮಾಡಿ, ಹನಿ ನೀರಾವರಿ ಅಳವಡಿಸಿಕೊಂಡು 2 1/2 * 1 1/2 ಅಡಿ ಅಂತರದಲ್ಲಿ ನಾಟಿ ಮಾಡಿದರು. ತೋಟಗಾರಿಕೆ ಇಲಾಖೆ ನೆರವನ್ನು ಪಡೆದು, ಸಾವಯವ ಗೊಬ್ಬರ ಮತ್ತು ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರ ಮತ್ತು ಲಘು ಪೋಷಕಾಂಶಗಳಾದ ಜಿಂಕ್, ಬೋರಾನ್ ಅನ್ನು ಗಿಡಗಳಿಗೆ ಒದಗಿಸಿದರು.

Kanakambara become profitable for farmers

ನಾಟಿ ಮಾಡಿದ 2 ತಿಂಗಳ ನಂತರ ಕುಡಿ ಚಿವುಟಿ, ಸಸ್ಯ ಚೋದಕ ಸಿಂಪಡಿಸಿದರು. ಈ ರೀತಿ ಆರೈಕೆ ಮಾಡಿದ ಬೆಳೆ 2015 ರ ಡಿಸೆಂಬರ್ ತಿಂಗಳಿನಿಂದ ಇಳುವರಿ ಕೊಡಲು ಆರಂಭಿಸಿದೆ. ಪುಷ್ಪಕೃಷಿಗಾಗಿ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿದ್ದು, ತೋಟಗಾರಿಕೆ ಇಲಾಖೆಯಿಂದ ಶೇ 90 ರಷ್ಟು ಸಬ್ಸಿಡಿ ರೈತನಿಗೆ ದೊರೆತಿದೆ.

ಮೊದಲು 2-2 1/2 ಕೆ.ಜಿ. ಇಳುವರಿ ಕೊಡುತ್ತಿದ್ದ ಬೆಳೆ ಜನೆವರಿ ತಿಂಗಳಿನಿಂದ ಪ್ರತಿ ದಿನ 5 ಕೆ.ಜಿ. ಯಷ್ಟು ಇಳುವರಿಯನ್ನು ಕೊಟ್ಟಿದೆ. ಇದುವರೆಗೂ ಸುಮಾರು 5 ಕ್ವಿಂಟಲ್ ನಷ್ಟು ಕನಕಾಂಬರ ಹೂವಿನ ಇಳುವರಿ ಪಡೆದಿದ್ದು, ಪ್ರತಿ ಕ್ವಿಂಟಾಲ್ ಗೆ ಸರಾಸರಿ 20,000 ರು. ಗಳಂತೆ, ಗಜೇಂದ್ರಗಡ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, 1. 20 ಲಕ್ಷ ರು. ಆದಾಯ ಗಳಿಸಿದ್ದಾರೆ ರೈತ ಕರಿಬಸಯ್ಯ.

ಯಲಬುರ್ಗಾ ತಾಲೂಕಿನ ಹೊಸಳ್ಳಿ ಗ್ರಾಮದ ಸುತ್ತಮುತ್ತ 20-25 ಎಕರೆ ಪ್ರದೇಶದಲ್ಲಿ ಕನಕಾಂಬರ ಬೆಳೆಯಲಾಗುತ್ತಿದೆ. ಬೇಸಿಗೆಯಲ್ಲಿ ಒಳ್ಳೆಯ ಇಳುವರಿ ಕೊಡುವ ಈ ಬೆಳೆ, ರೈತರಿಗೆ, ಅದರಲ್ಲೂ ಸಣ್ಣ ರೈತರಿಗೆ ಆಶಾದಾಯಕ ಬೆಳೆಯಾಗಿದೆ. ಕನಕಾಂಬರ ಕುಟುಂಬಕ್ಕೆ ಸೇರಿದ ಅತ್ಯಂತ ಸುಂದರ ಹಗುರವಾದ ಬಹು ಬೇಡಿಕೆವುಳ್ಳ, ಮಧ್ಯಮಾವಧಿ ಅಂದರೆ 2-3 ವರ್ಷದ ಬೆಳೆ.

Kanakambara become profitable for farmers

3 ನೇ ವರ್ಷದಿಂದ ಗಿಡದಲ್ಲಿ ಇಳುವರಿ ಕುಂಠಿತವಾಗುತ್ತದೆ. ಸದ್ಯ ಹವಾಮಾನಕ್ಕೆ ಅನುಗುಣವಾಗಿ ಇಳುವರಿ ಕಡಿಮೆ ಇದ್ದು, ಇನ್ನೂ ಒಂದೆರಡು ತಿಂಗಳು ಆದಾಯ ಕೊಡಬಲ್ಲ ಈ ಬೆಳೆಯಿಂದ ಅಂದಾಜು 1. 50 ಲಕ್ಷ ಆದಾಯದ ನಿರೀಕ್ಷೆ ಇದೆ ಎನ್ನುತ್ತಾರೆ ರೈತ.

ಸೊರಗು ರೋಗ, ರಸಹೀರುವ ಕೀಟಗಳು ಈ ಬೆಳೆಯ ಮುಖ್ಯ ಶತ್ರುಗಳು. ಕೊಪ್ಪಳದ ತೋಟಗಾರಿಕೆ ಇಲಾಖೆ ವಿಷಯ ತಜ್ಞ ವಾಮನಮೂರ್ತಿ, ಸಲಹೆಗಾರ ಚಂದ್ರಶೇಖರ ಅವರ ಮಾರ್ಗದರ್ಶನದಂತೆ ಕೀಟನಾಶಕ, ಲಘುಪೋಷಕಾಂಶಗಳು ಮತ್ತು ಶಿಲೀಂದ್ರ ನಾಶಕಗಳನ್ನು ಸಿಂಪಡಿಸಿ ಕೀಟ ಮತ್ತು ರೋಗಗಳ ನಿಯಂತ್ರಣ ಕೈಗೊಳ್ಳಲಾಯಿತು.

ಈ ಬೆಳೆಗೆ ಮುಖ್ಯ ಖರ್ಚೆಂದರೆ ಕಟಾವು ಮಾಡಲು ಆಳುಗಳು. ದಿನ ಕನಿಷ್ಠ 8 ರಿಂದ 10 ಆಳುಗಳ ಅವಶ್ಯಕತೆ ಇದೆ. ಈ ಕೃಷಿಯಿಂದ ತಮ್ಮ ಕುಟುಂಬವಷ್ಟೇ ಅಲ್ಲ, ಗ್ರಾಮದ 8 ರಿಂದ 10 ಕುಟುಂಬಗಳಿಗೂ ಉದ್ಯೋಗ ದೊರೆಯುತ್ತಿದ್ದು, ನನಗೆ ಹೆಮ್ಮೆಯ ವಿಷಯ ಎನ್ನುತ್ತಾರೆ ರೈತ ಕರಿಬಸಯ್ಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kanakambara flower become profitable for Koppala farmers. Farmer Karibasayya has made a profit of 1.2 lakhs with less land holding and water.
Please Wait while comments are loading...