ಸ್ವಾಮೀಜಿ ವಿರುದ್ಧ ಎಫ್‌ಐಆರ್, ಕಾಂಗ್ರೆಸ್ ಒಕ್ಕಲಿಗ ನಾಯಕರು ಕುಲದ್ರೋಹಿಗಳೆಂದ ಜೆಡಿಎಸ್
ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಿ ಎಂದು ಹೇಳಿಕೆ ನೀಡಿದ್ದ ಸಂಬಂಧ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರ ಸ್ವಾಮೀಜಿಯವರ ಮೇಲೆ ಎಫ್‌ಐಆರ್ ದಾಖಲಾಗಿರುವ ವಿಚಾರವಾಗಿ ಜೆಡಿಎಸ್ ಪಕ್ಷ ಕಿಡಿಕಾರಿದೆ. ಕ್ಷಮೆಯಾಚಿಸಿದ ಸ್ವಾಮೀಜಿ ಮೇಲೆ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ ಎಂದು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದೆ.
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರ ಸ್ವಾಮೀಜಿಯವರು ತಮ್ಮ ಹೇಳಿಕೆ ಹಿಂಪಡೆದಿದ್ದಾರೆ. ಆದರೂ ಅವರ ವಿರುದ್ಧ ದುರುದ್ದೇಶಪೂರ್ವಕವಾಗಿ ಕೇಸು ದಾಖಲಿಸಿ ಎಫ್‌ಐಆರ್ ಹಾಕಿರುವುದು ಖಂಡಿತ ತಪ್ಪು ಎಂದು ಹರಿಹಾಯ್ದಿದೆ.

ತಮ್ಮ ಹೇಳಿಕೆಯಿಂದ ಬೇಸರವಾಗಿದ್ದರೆ ವಿಷಾದವಿದೆ ಎಂದು ಪೂಜ್ಯರು ಹೇಳಿದ್ದಾರೆ. ಈ ವಿಚಾರವನ್ನು ಇಲ್ಲಿಗೇ ಕೈಬಿಡಿ ಎಂದು ಕೋರಿದ್ದಾರೆ. ಆದರೆ, ಒಕ್ಕಲಿಗ ವಿರೋಧಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಸಮುದಾಯದ ಸ್ವಾಮೀಜಿಗಳ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ. ಈ ಸರ್ಕಾರ ಒಕ್ಕಲಿಗರ ವಿರುದ್ಧ ವಿಷ ಕಾರುತ್ತಿರುವುದು ಇದೇ ಮೊದಲಲ್ಲ ಎಂದು ಆಕ್ರೋಶ ಹೊರಹಾಕಿದೆ.
ಒಕ್ಕಲಿಗ ವಿರೋಧಿ ಕಾಂಗ್ರೆಸ್ ಸರ್ಕಾರದ ನಡೆಗೆ ನಮ್ಮ ಧಿಕ್ಕಾರವಿದೆ. ಶ್ರೀಗಳ ಮೇಲೆ ದಾಖಲಿಸಿರುವ ಎಫ್‌ಐಆರ್ ವಿಚಾರವಾಗಿ ಕಾಂಗ್ರೆಸ್‌ನಲ್ಲಿರುವ ಒಕ್ಕಲಿಗ ಮಂತ್ರಿಗಳು ಮತ್ತು ಶಾಸಕರು ಜಾಣಮೌನಕ್ಕೆ ಶರಣಾಗಿರುವುದು ನಾಚಿಕೆಗೇಡು. ಜಾಣಮೌನ ಕುಲದ್ರೋಹಿಗಳ ಗುಣ. ಇಂಥವರಿಗೆ ಮುಂದಿನ ದಿನಗಳಲ್ಲಿ ಒಕ್ಕಲಿಗ ಕುಲಭಾಂದವರು ತಕ್ಕಪಾಠ ಕಲಿಸುವುದು ನಿಶ್ಚಿತ ಎಂದು ಹೇಳಿದೆ.

ಪ್ರತಿಯೊಂದಕ್ಕೂ ನಾಲಿಗೆ ಹರಿಬಿಡುವ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಚೆಲುವರಾಯ ಸ್ವಾಮಿ, ಕೃಷ್ಣಭೈರೇಗೌಡ ಅವರು ಮುಗುಮ್ಮಾಗಿ ಮೌನಕ್ಕೆ ಒಳಗಾಗಿ ಸಮುದಾಯ ಶ್ರೀಗಳನ್ನು ಅಪಮಾನಿಸುತ್ತಿದ್ದರೂ ಸುಮ್ಮನಿರುವುದು ಅಕ್ಷಮ್ಯ ಎಂದು ಖಂಡಿಸಿದೆ.
ಬಿಜೆಪಿ ನಾಯಕರಿಂದ ಎಚ್ಚರಿಕೆ!
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ವಿಚಾರವಾಗಿ ರಾಜ್ಯ ಬಿಜೆಪಿಯ ಒಕ್ಕಲಿಗ ನಾಯಕರು ಕೂಡ ಎಚ್ಚರಿಕೆ ನೀಡಿದ್ದಾರೆ. ಸ್ವಾಮೀಜಿ ಅವರನ್ನು ಸರ್ಕಾರ ಮುಟ್ಟಲು ಬಂದರೆ ಇಡೀ ಒಕ್ಕಲಿಗ ಸಮುದಾಯ ತಿರುಗಿ ಬೀಳುವುದು ನಿಶ್ಚಿತ ಎಂದು ವಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರಕ್ಕೆ ವಾರ್ನಿಂಗ್ ಕೊಟ್ಟಿದ್ದಾರೆ.
ಇಂದು ಬೆಂಗಳೂರಿನಲ್ಲಿ ಒಕ್ಕಲಿಗರ ಮಠಕ್ಕೆ ಭೇಟಿ ನೀಡಿದ ಬಿಜೆಪಿ ನಾಯಕರು, ಸ್ವಾಮೀಜಿಯವರಿಗೆ ಬೆಂಬಲ ನೀಡಿದ್ದಾರೆ. ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಸ್ವಾಮೀಜಿ ಕುಮಾರ ಚಂದ್ರಶೇಖರನಾಥ ಅವರಿಗೆ ಧೈರ್ಯದ ಮಾತುಗಳನ್ನಾಡಿದ್ದು, ಒಕ್ಕಲಿಗ ಸಮಾಜದೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದ್ದಾರೆ.
ಹಿಂದೂಗಳ ಸಂಸ್ಥೆಗಳನ್ನು ವಕ್ಫ್ ಮಂಡಳಿ ನುಂಗಿ ನೀರು ಕುಡಿಯುತ್ತಿದೆ. ಸ್ವಾಮೀಜಿಗಳು ಹಿಂದೂಗಳಿಗೆ ಆದ ಅನ್ಯಾಯದ ಬಗ್ಗೆ ಮಾತನಾಡಿದ್ದು, ಬಳಿಕ ಅದರಲ್ಲಿ ತಪ್ಪಿದ್ದರೆ ಕ್ಷಮೆಯೂ ಕೇಳಿದ್ದಾರೆ. ಇಷ್ಟಾದರೂ ಯಾರೋ ಮತಾಂಧ ದೂರು ಕೊಟ್ಟಿರುವುದಕ್ಕೆ ಅವರ ವಿರುದ್ಧವೇ ಎಫ್‌ಐಆರ್ ದಾಖಲಿಸಲು ಸರ್ಕಾರಕ್ಕೆ ಎಷ್ಟು ಧೈರ್ಯ ಎಂದು ಅಶೋಕ್ ಕೇಳಿದ್ದಾರೆ.












Click it and Unblock the Notifications