ಮಂಡ್ಯ ಭದ್ರ ಕೋಟೆಯಲ್ಲಿ ಜೆಡಿಎಸ್ ಛಿದ್ರ ಛಿದ್ರ; ಮನ್ ಮುಲ್ ಅಧಿಕಾರ ತಪ್ಪುವ ಆತಂಕದಲ್ಲಿ ದಳಪತಿ?
ಮಂಡ್ಯ, ಮೇ22: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ತನ್ನ ಭದ್ರಕೋಟೆಯಾದ ಮಂಡ್ಯವನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಮಂಡ್ಯ ಹಾಲು ಒಕ್ಕೂಟದ (ಮನ್ಮುಲ್) ಮೇಲೂ ಜೆಡಿಎಸ್ ತನ್ನ ಹಿಡಿತ ಕಳೆದುಕೊಳ್ಳುವ ಭೀತಿಯಲ್ಲಿದೆ.
ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ ರಾಜೀನಾಮೆಯಿಂದ ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್,ಇದೀಗ 2023 ರ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ಕುಸಿದು ಪ್ರಾಬಲ್ಯ ಕಳೆದುಕೊಂಡಿದೆ. ಇದೇ ಸಮಯದಲ್ಲಿ ಜೆಡಿಎಸ್ ತೆಕ್ಕೆಯಲ್ಲಿದ್ದ ಮನ್‌ಮುಲ್ ಆಡಳಿತ ಚುಕ್ಕಾಣಿಯೂ ಜೆಡಿಎಸ್‌ನಿಂದ ಕೈತಪ್ಪುವ ಪರಿಸ್ಥಿತಿ ಎದುರಾಗಿದೆ.

12 ನಿರ್ದೇಶಕರ ಬಲದ ಮನ್‌ಮುಲ್‌ನಲ್ಲಿ 7 ಮಂದಿ ಜೆಡಿಎಸ್ ಬೆಂಬಲಿತ ನಿರ್ದೇಶಕರಿದ್ದರು. ಮೂವರು ಕಾಂಗ್ರೆಸ್, ಉಳಿದಿಬ್ಬರು ನಿರ್ದೇಶಕ ಬಿಜೆಪಿ ಬೆಂಬಲಿತರಾಗಿ ಆಯ್ಕೆಯಾಗಿದ್ದರು. ಮನ್‌ಮುಲ್ ಆಡಳಿತ ಮಂಡಳಿಗೆ 2019ರಲ್ಲಿ ನಡೆದ ಚುನಾವಣೆಗೆ ನಡೆದಾಗ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿತ್ತು. ಹೀಗಾಗಿ 7 ನಿರ್ದೇಶಕರ ಬಲ ಹೊಂದಿದ್ದ ಜೆಡಿಎಸ್ ಸಹಜವಾಗಿಯೇ ಮನ್‌ಮುಲ್‌ನ ಅಧಿಕಾರವನ್ನ ಹಿಡಿದಿತ್ತು.
ಅಧ್ಯಕ್ಷರಾಗಿ ಬಿ.ಆರ್.ರಾಮಚಂದ್ರ, ಉಪಾಧ್ಯಕ್ಷರಾಗಿ ಎಂ.ಎಸ್.ರಘುನಂದನ್ ಆಯ್ಕೆಯಾಗಿದ್ದಾರೆ. ಮೂರೂವರೆ ವರ್ಷ ಕಾಲ ಇವರಿಬ್ಬರೂ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅಧಿಕಾರ ನಡೆಸಿದ್ದಾರೆ. ಈ ಮಧ್ಯೆ ಜೆಡಿಎಸ್ ಪಕ್ಷದ ಆಂತರಿಕ ಒಪ್ಪಂದ ಮತ್ತು ಅಧಿಕಾರ ಹಂಚಿಕೆ ಸೂತ್ರದನ್ವಯ ಎರಡೂವರೆ ವರ್ಷಗಳ ಅಧಿಕಾರಾವಧಿ ಪೂರೈಸಿದ್ದ ರಾಮಚಂದ್ರ ಅವರು ತಿಂಗಳ ಹಿಂದೆ ಸಲ್ಲಿಸಿದ್ದ ರಾಜೀನಾಮೆ ಮೇ 16ರಂದು ಅಂಗೀಕಾರವಾಗಿದೆ.
ಇದೀಗ ರಾಮಚಂದ್ರ ರಾಜೀನಾಮೆ ಬೆನ್ನಲ್ಲೇ ಮನ್‌ಮುಲ್ ಅಧಿಕಾರವು ಜೆಡಿಎಸ್ ಗೆ ಕೈ ತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದರಿಂದ ಸುಜಾತ ಕೃಷ್ಣ ಅವರನ್ನು ಮನ್‌ಮುಲ್ ನಿರ್ದೇಶಕರಾಗಿ ಬಿಜೆಪಿ ಸರ್ಕಾರ ನೇಮಿಸಿತ್ತು. ಆದರೆ, ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿರುವುದರಿಂದ ಸುಜಾತ ಕೃಷ್ಣ ಅವರ ನಾಮನಿರ್ದೇಶನವೂ ರದ್ದಾಗಲಿದೆ.

ಮಂಡ್ಯ ಜೆಡಿಎಸ್ ಅಧ್ಯಕ್ಷ ರಮೇಶ್ ಅವರು ಮನ್‌ಮುಲ್ ನ ಅಧಿಕಾರವನ್ನು ಉಳಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದು, ಈ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಕಾರ್ಯತಂತ್ರ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ. ಇತ್ತ ಮನ್‌ಮುಲ್ ಅಧ್ಯಕ್ಷ ಚುನಾವಣೆಯಲ್ಲಿ ಸಂಖ್ಯಾಬಲ ಕಾಂಗ್ರೆಸ್‌ಗೆ ಇದೆ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದ್ದಾರೆ. ಹೊಸದಾಗಿ ನಾಮನಿರ್ದೇಶನಗೊಂಡ ನಿರ್ದೇಶಕರು ಮತ್ತು ಎಲ್ಲಾ ಮೂವರು ಅಧಿಕಾರಿಗಳು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಪಕ್ಷಗಳ ನಡುವೆ ಜಗಳ ಶುರುವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಮನ್ಮುಲ್ ನಿರ್ದೇಶಕ ಯು.ಸಿ.ಶಿವಪ್ಪ ಮತ್ತು ಬೋರೇಗೌಡ ನಡುವೆ ಪೈಪೋಟಿ ಏರ್ಪಟಿದೆ. ಇತ್ತ ಜೆಡಿಎಸ್ ಬೆಂಬಲಿತ ನಿರ್ದೇಶಕರಾದ ಬಾಲು ಮತ್ತು ರವಿ ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications