ಕುಮಾರಸ್ವಾಮಿಗೆ ಹಂದಿ ಎಂದ ಐಪಿಎಸ್ ಅಧಿಕಾರಿ ವಿರುದ್ಧ ಜೆಡಿಎಸ್ ಕಿಡಿ: ಕೂಡಲೇ ಕ್ರಮಕ್ಕೆ ಆಗ್ರಹ
ಬೆಂಗಳೂರು, ಸೆಪ್ಟೆಂಬರ್ 29: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ತೀರ್ಮಾನವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಜೊತೆಗೆ ಜನಪ್ರತಿನಿಧಿಗಳ ಕೋರ್ಟ್ನಲ್ಲೂ ಸಹ ಸಿಎಂ ಸಿದ್ದರಾಮಯ್ಯಗೆ ಹಿನ್ನೆಡೆಯಾಗಿದೆ. ಸಿಎಂ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿದೆ.
ಈ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ಮತ್ತೊಂದು ಬೆಳವಣಿಗೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಲೋಕಾಯುಕ್ತ ಎಸ್ಐಟಿ ಎಡಿಜಿಪಿ, ಹಿರಿಯ ಐಪಿಎಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಏಕಾಏಕಿ ಆರೋಪ ಮಾಡಿದ್ದಾರೆ. ತಮ್ಮ ವಿರುದ್ಧ ಆರೋಪ ಮಾಡಿದ ಕುಮಾರಸ್ವಾಮಿ ವಿರುದ್ಧ ಪತ್ರದ ಮೂಲಕ ಐಪಿಎಸ್ ಅಧಿಕಾರಿ ಚಂದ್ರಶೇಖರ್ ತಿರುಗೇಟು ನೀಡಿದ್ದು, ಹಂದಿಗೆ ಹೋಲಿಸಿದ್ದಾರೆ.

ಈ ಹೇಳಿಕೆ ಬಿಡುಗಡೆ ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧ ಜೆಡಿಎಸ್ ಕಿಡಿಕಾರಿದೆ. 'ಕಳ್ಳನ ಮನಸ್ಸು ಹುಳ್ಳಳ್ಳಗೆ'. ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ಅವರೇ ನಿಮ್ಮ ಮೇಲಿನ ಆರೋಪಗಳು ನಿಜವಲ್ಲವಾದರೇ, ಕಾನೂನಿನಡಿಯಲ್ಲಿ ಉತ್ತರ ನೀಡಬಹುದಿತ್ತು.
ಅದನ್ನು ಬಿಟ್ಟು ನೀವೊಬ್ಬ ಐಪಿಎಸ್ ಅಧಿಕಾರಿ ಎಂಬುದನ್ನು ಮರೆತು, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ವಿರುದ್ಧ ಹತಾಶೆ, ಸಿಟ್ಟು, ಆಕ್ರೋಶದಿಂದ ಕೀಳು ಮಟ್ಟದ, ಅವಹೇಳನಕಾರಿ ಪದಗಳನ್ನು ಬಳಸಿ ಉತ್ತರಿಸಿದ್ದೀರಿ. ನಿಮ್ಮ ಅಕ್ರಮ, ಭ್ರಷ್ಟಾಚಾರಗಳನ್ಮು ದಾಖಲೆಗಳ ಸಮೇತ ಮಾಧ್ಯಮಗಳ ಮುಂದೆ ಬಯಲು ಮಾಡಿದ್ದು ಅಪರಾಧವೇ? ಅದಕ್ಕೆ ಕೇಂದ್ರ ಸಚಿವರ ಕುರಿತು ನೀವು ಕೀಳು ಮಟ್ಟದ ಪದ ಬಳಸಿರುವುದು ಅಕ್ಷಮ್ಯ. ನೀವೊಬ್ಬ ಐಪಿಎಸ್ ಅಧಿಕಾರಿಯಾಗಿರಲು ಅನರ್ಹ.
ಭೂ ವ್ಯವಹಾರವೊಂದರಲ್ಲಿ 20 ಕೋಟಿಗೆ ಬೇಡಿಕೆ ಇಟ್ಟಿದ್ದ ಕಡು ಭ್ರಷ್ಟ ಅಧಿಕಾರಿ ನೀವೇ ಅಲ್ಲವೇ..? ಈ ಸಂಬಂಧ ನಿಮ್ಮ ವಿರುದ್ಧ ಇನ್ಸ್ ಪೆಕ್ಟರ್ ಒಬ್ಬರು ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿ ನಿಮ್ಮ ಪತ್ನಿ ಹೆಸರಿನಲ್ಲಿ ರಾಜಕಾಲುವೆ ಮೇಲೆ ನಿರ್ಮಿಸುತ್ತಿರುವ ಬಹು ಮಹಡಿಯ ವಾಣಿಜ್ಯ ಕಟ್ಟಡವನ್ನು ಎಷ್ಟು ಕೋಟಿ ಲಂಚ ಪಡೆದು ಕಟ್ಟುತ್ತಿದ್ದೀರಿ ತಿಳಿಸುವಿರಾ? ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವ ಅಕ್ರಮಗಳ ಬಗ್ಗೆಯೂ ತನಿಖೆ ನಡೆಯಬೇಕಲ್ಲವೇ..?

ಲೋಕಾಯುಕ್ತ ವಿಶೇಷ ತನಿಖಾ ದಳದ ಎಡಿಜಿಪಿಯಾಗಿರುವ ಎಂ. ಚಂದ್ರಶೇಖರ್ ಓರ್ವ ಭ್ರಷ್ಟ ಅಧಿಕಾರಿ ಈತನ ವಿರುದ್ಧ ಹಲವು ದೂರುಗಳು ದಾಖಲಾಗಿದ್ದು ಆರೋಪ ಪಟ್ಟಿ ಕೂಡ ಸಲ್ಲಿಕೆಯಾಗಿವೆ. ಹಲವು ಅಪರಾಧ ಮಾಡಿರುವ ಇಂತಹ ಕಳಂಕಿತ ಅಧಿಕಾರಿಗಳಿಂದ ಮುಕ್ತ, ನ್ಯಾಯ ಸಮ್ಮತ, ಪಾರದರ್ಶಕ ತನಿಖೆ ಅಸಾಧ್ಯ
ಗೃಹ ಸಚಿವ ಜಿ.ಪರಮೇಶ್ವರ್ ಅವರೇ, ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರ ಬಗ್ಗೆ ಕೀಳು ಮಟ್ಟದ ಪದ ಬಳಸಿರುವ ಈ ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮ ಜರುಗಿಸಿ. ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ಅವರ ಅಕ್ರಮಗಳ ಬಗ್ಗೆಯೂ ಸರ್ಕಾರ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.












Click it and Unblock the Notifications