ಜಿಟಿ ದೇವೇಗೌಡರ ಕೋಪ ತಣಿಸಲು ದಾಳ ಉರುಳಿಸಿದ ಜೆಡಿಎಸ್
ಬೆಂಗಳೂರು, ಮಾರ್ಚ್ 03: ಕರ್ನಾಟಕ ಜೆಡಿಎಸ್ ನಾಯಕರು, ಚಾಮುಂಡೇಶ್ವರಿ ಕ್ಷೇತ್ರದ ಪಕ್ಷದ ಶಾಸಕ ಜಿ. ಟಿ. ದೇವೇಗೌಡ ನಡುವಿನ ಮುನಿಸು ಗುಟ್ಟಾಗಿ ಉಳಿದಿಲ್ಲ. ಪಕ್ಷದ ಎಲ್ಲಾ ಚಟುವಟಿಕೆಗಳಿಂದ ಜಿ. ಟಿ. ದೇವೇಗೌಡ ದೂರವಾಗಿದ್ದಾರೆ. ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾಗಿದ್ದರೂ ಸಹ ಭಾನುವಾರ ಬೆಂಗಳೂರಿನಲ್ಲಿ ನಡೆದ ಪ್ರಮುಖ ಸಭೆಗೆ ಅವರು ಗೈರಾಗಿದ್ದರು.
ಜಿ. ಟಿ. ದೇವೇಗೌಡ ಮುನಿಸು ಶಮನ ಮಾಡಲು ಜೆಡಿಎಸ್ ದಾಳ ಉರುಳಿಸಿದೆ. ಹುಣಸೂರು ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ ಪುತ್ರ ಜಿ. ಡಿ. ಹರೀಶ್ ಗೌಡ ಅವರನ್ನು ಪಕ್ಷದ ಮುಖ್ಯ ಸಚೇತಕರಾಗಿ ನೇಮಕ ಮಾಡಲಾಗಿದೆ.

ಸೋಮವಾರ ಈ ಕುರಿತು ಜೆಡಿಎಸ್ ನಾಯಕರು ವಿಧಾನಸಭೆ ಸ್ಪೀಕರ್‌ಗೆ ಪತ್ರವನ್ನು ಬರೆದಿದ್ದಾರೆ. ಈ ಮೂಲಕ ಕೇಂದ್ರ ಸಚಿವ ಹೆಚ್. ಡಿ. ಕುಮಾರ ಸ್ವಾಮಿ ಮತ್ತು ಜಿ. ಟಿ. ದೇವೇಗೌಡ ನಡುವಿನ ಮುನಿಸು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಜಿ. ಟಿ. ದೇವೇಗೌಡ ಗೈರು: 2023ರ ವಿಧಾನಸಭೆ ಚುನಾವಣೆ ಬಳಿಕ ಜಿ. ಟಿ. ದೇವೇಗೌಡ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದಾರೆ. 2024ರ ಲೋಕಸಭೆ ಚುನಾವಣೆ ಬಳಿಕವಂತೂ ಅವರು ಪಕ್ಷದ ಕಾರ್ಯಕ್ರಮ, ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮೈಸೂರಿನಲ್ಲಿ ಕಳೆದ ವಾರ ಹೆಚ್. ಡಿ. ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿದರೂ ಜಿ. ಟಿ. ದೇವೇಗೌಡ ಗೈರಾಗಿದ್ದರು.
ಭಾನುವಾರ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್. ಡಿ. ದೇವೇಗೌಡರ ನೇತೃತ್ವದಲ್ಲಿ ಪಕ್ಷದ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಪಕ್ಷದ ದ್ವೈವಾರ್ಷಿಕ ಚುನಾವಣೆ, ಸದಸ್ಯತ್ವ ಅಭಿಯಾನ, ತಾಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆ ತಯಾರಿ, ವಿಧಾನಮಂಡಲ ಅಧಿವೇಶನ ಸೇರಿ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು.
ಆದರೆ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾಗಿದ್ದ ಜಿ. ಟಿ. ದೇವೇಗೌಡ ಈ ಸಭೆಗೆ ಗೈರಾಗಿದ್ದರು. ಪಕ್ಷದ ನಾಯಕರ ಜೊತೆ ಜಿ. ಟಿ. ದೇವೇಗೌಡರ ಕೋಪ ಹೊಸತಲ್ಲ. ಹಿಂದೆಯೂ ಅವರು ಬಂಡಾಯ ಎದ್ದು ಪಕ್ಷಾಂತರ ಮಾಡುವ ಮುನ್ಸೂಚನೆ ಕೊಟ್ಟಿದ್ದರು. ಬಳಿಕ ತಣ್ಣಗಾಗಿದ್ದರು.
ಮೈಸೂರು ಜಿಲ್ಲಾ ರಾಜಕಾರಣದಲ್ಲಿ ಪ್ರಭಾವ ಹಾಗೂ ಹಿಡಿತ ಹೊಂದಿದ್ದಾರೆ. ಜಿ. ಟಿ. ದೇವೇಗೌಡ. ಆದರೆ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಜೊತೆ ಅವರು ಮುನಿಸಿಕೊಂಡಿದ್ದಾರೆ. ಆದ್ದರಿಂದ ಪಕ್ಷದ ಚಟುವಟಿಕೆಗಳಿಂದ ದೂರವಿದ್ದಾರೆ.
2018ರ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿಯಲ್ಲಿ ಸೋಲಿಸಿದ ನಾಯಕ ಜಿ. ಟಿ. ದೇವೇಗೌಡ. ಆದರೆ ಪಕ್ಷದಲ್ಲಿ ಅವರಿಗೆ ಸರಿಯಾದ ಸ್ಥಾನ ಮಾನ ನೀಡಿಲ್ಲ ಎಂಬುದು ಅವರ ಮುನಿಸಿಗೆ ಕಾರಣ ಎಂದು ಅಂದಾಜಿಸಲಾಗಿದೆ.
ಕಳೆದ ವಾರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮೈಸೂರಿನಲ್ಲಿ ನಡೆಸಿದ ಸಭೆಗೆ ಜಿ. ಟಿ. ದೇವೇಗೌಡ ಗೈರಾಗಿದ್ದರು. ಈ ಕುರಿತು ಮಾತನಾಡಿದ್ದ ನಿಖಿಲ್, "ಅವರು ಕ್ಷೇತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಆದ್ದರಿಂದ ಸಭೆಗೆ ಬಂದಿಲ್ಲ. ಪಕ್ಷದ ಹಿರಿಯ ನಾಯಕರು ಅವರು, ತನಗೆ ಅವರ ಬಗ್ಗೆ ಅಪಾರವಾದ ಗೌರವವಿದೆ" ಎಂದು ಹೇಳಿದ್ದರು.
"ಜಿ. ಟಿ. ದೇವೇಗೌಡರಿಗೆ ಯಾವುದೇ ಮುನಿಸು ಇಲ್ಲ. ಅವರ ಮಗ ಮತ್ತು ಆತ್ಮೀಯ ಸ್ನೇಹಿತ ಹರೀಶ್ ಗೌಡ ತನ್ನ ಪಕ್ಕದಲ್ಲೇ ಕೂತಿದ್ದಾರಲ್ಲ. 2025ರ ಹೊಸ ವರ್ಷ ಆರಂಭದಲ್ಲಿ ನಾನು ಎಲ್ಲರಿಗಿಂತ ಮೊದಲು ಫೋನ್ ಮಾಡಿದ್ದು ಜಿ. ಟಿ. ದೇವೇಗೌಡರಿಗೆ" ಎಂದು ತಿಳಿಸಿದ್ದರು.












Click it and Unblock the Notifications