ಬಿಜೆಪಿಗೆ ಜನಾರ್ದನ ರೆಡ್ಡಿ ಪಕ್ಷದ ಕಾರ್ಯಕರ್ತನ ಪ್ರಶ್ನೆಗಳು!
ಬೆಂಗಳೂರು, ಫೆಬ್ರವರಿ 27; ಕರ್ನಾಟಕದ ವಿಧಾನಸಭೆಯಿಂದ ನಾಲ್ವರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿದೆ. ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ಮೂರು ಸ್ಥಾನ ಗೆದ್ದಿದೆ. ಬಿಜೆಪಿಗೆ ಒಂದು ಸ್ಥಾನದಲ್ಲಿ ಜಯ ಸಿಕ್ಕಿದೆ. ಎನ್‌ಡಿಎ ಮೈತ್ರಿಕೂಟದ 5ನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ 36 ಮತಗಳನ್ನು ಪಡೆದು ಸೋತಿದ್ದಾರೆ.
ಈ ಚುನಾವಣೆಯ ಮತದಾನದ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಮಾಜಿ ಸಚಿವ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಮತ್ತು ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಎನ್‌ಡಿಎ ಮೈತ್ರಿಕೂಟ ಬೆಂಬಲಿಸದೇ ಕಾಂಗ್ರೆಸ್ ಅಭ್ಯರ್ಥಿಗೆ ಮತದಾನ ಮಾಡಿದ್ದಾರೆ ಎಂಬುದು ಚರ್ಚೆಯ ವಿಚಾರವಾಗಿದೆ.

ಮತಗಳ ಕೊರತೆ ಇದ್ದರೂ ಸಹ 5ನೇ ಅಭ್ಯರ್ಥಿ ಕಣಕ್ಕಿಳಿಸಿದ್ದ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಚುನಾವಣೆಯಲ್ಲಿ ಮುಖಭಂಗವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪಕ್ಷೇತರ ಶಾಸಕರ ಮತಗಳು ಸಹ ಎನ್‌ಡಿಎ 5ನೇ ಅಭ್ಯರ್ಥಿಗೆ ಹೋಗದಂತೆ ತಂತ್ರವನ್ನು ರೂಪಿಸಿ, ಮೈತ್ರಿಕೂಟಕ್ಕೆ ಹಿನ್ನಡೆ ಉಂಟು ಮಾಡಿದ್ದಾರೆ.
2022ರಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ, 2023ರ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಗೆದ್ದು ಶಾಸಕರಾದ ಜನಾರ್ದನ ರೆಡ್ಡಿ ಎನ್‌ಡಿಎ ಪರವಾಗಿ ಮತದಾನ ಮಾಡಲಿಲ್ಲ ಎಂಬ ಚರ್ಚೆಗೆ ಪಕ್ಷದ ಸಾಮಾನ್ಯ ಕಾರ್ಯಕರ್ತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. Mallikarjuna Achar B Gjr ಈ ಕುರಿತು ಬಿಜೆಪಿ ಕಾರ್ಯಕರ್ತರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಫೇಸ್‌ಬುಕ್ ಪೋಸ್ಟ್ ಮಾಹಿತಿ ಇಲ್ಲಿದೆ.
ಬಿಜೆಪಿಗೆ ಪ್ರಶ್ನೆಗಳು: ಸನ್ಮಾನ್ಯ ಶ್ರೀ ಜಿ. ಜನಾರ್ದನರೆಡ್ಡಿಯವರ ಬಗ್ಗೆ ಮಾತನಾಡುವ ಬಿಜೆಪಿ ಕಾರ್ಯಕರ್ತರೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತನಾಗಿ ತಮ್ಮಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ, ಉತ್ತರಿಸಿ ಎಂದು ಸವಾಲು ಹಾಕಿದ್ದಾರೆ.
* ರಾಜ್ಯಸಭಾ ಚನಾವಣೆಯಲ್ಲಿ ಮತ ಹಾಕುವ ಹಕ್ಕು ಅಧಿಕಾರ ನಮ್ಮ ನಾಯಕರಾದ ಶ್ರೀ ಜಿ ಜನಾರ್ದನರೆಡ್ಡಿಯವರದ್ದು ಇದನ್ನು ಪ್ರಶ್ನೆ ಮಾಡುವ ಹಕ್ಕು ನಿಮಗೆ ಇದೆಯಾ?
* ನಿಮ್ಮ ಪಕ್ಷದ ಅಭ್ಯರ್ಥಿಗೆ ಬೇಕಾಗಿದ್ದು 45 ಮತ ಆದರೆ ನೀವು ಹಾಕಿಕೊಂಡದ್ದು 48 ಮತ ಇದು ನಿಮ್ಮ ಮಿತ್ರ ಪಕ್ಷ ಜೆಡಿಎಸ್‌ಗೆ ಮಾಡಿದ ದ್ರೋಹವಲ್ಲವೇ?
* ನಿಮ್ಮದೇ ಪಕ್ಷದ ಶಾಸಕರು ಅಡ್ಡ ಮತದಾನ ಮಾಡಿರುವುದು ಮತ್ತು ಗೈರಾಗಿರುವುದು ನಿಮಗೆ ಕಾಣುವುದಿಲ್ಲವೇ?
* ನಮ್ಮ ನಾಯಕರೇನು ನಿಮ್ಮ ಪಕ್ಷದ ಟಿಕೆಟ್ ಪಡೆದು ಗೆದ್ದಿದ್ದಾರಾ?
* ಅಂದು ವಿರೋಧಿಗಳು ಸನ್ಮಾನ್ಯ ಜನಾರ್ಧನ್ ರೆಡ್ಡಿ ಅವರ ವಿರುದ್ಧ ಆರೋಪ ಮಾಡಿದಾಗ ಅದರ ಸತ್ಯಾಂಶವನ್ನು ಅರಿಯದೆ ಅವರನ್ನು ದೂರ ಇಟ್ಟಿದ್ದು ನೀವಲ್ಲವೇ?
* ಅಂದು ಆರೋಪ ಮಾಡಿದ್ದು 4000 ಕೋಟಿ ಆದರೆ ಇಂದಿಗೂ 4 ಕೋಟಿ ಅರೋಪ ಸಾಬೀತು ಮಾಡಿಲ್ಲದಿದ್ದರೂ ಸತತ 13 ವರ್ಷಗಳ ಕಾಲ ಅವರ ಕುಟುಂಬದಿಂದ ದೂರ ಇದ್ದಿದ್ದು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ?
* ದೇಶದಲ್ಲಿ ಲಕ್ಷಾಂತರ ಕೋಟಿಗಳ ಅವ್ಯಹಾರ ಮಾಡಿದವರು ಕೇವಲ 6 ತಿಂಗಳಿಂದ ಒಂದು ವರ್ಷದ ಒಳಗೆ ಹೊರಬಂದರು, ಆದರೆ ಸನ್ಮಾನ್ಯ ಶ್ರೀ ಜಿ. ಜನಾರ್ದನ ರೆಡ್ಡಿಯವರು 3.5 ವರ್ಷ ಮತ್ತು ಸತತ 10 ವರ್ಷಗಳಿಂದ ಒಟ್ಟು 13 ವರ್ಷ ಬಳ್ಳಾರಿಯಿಂದ ದೂರ ಇಟ್ಟಿರುವದು ನಿಮಗೆ ಅರಿವಿಲ್ಲವೇ?
* ತಮ್ಮ ಮಗಳಿಗೆ ಹೆರಿಗೆಯಾಗಿದೆ ಬಳ್ಳಾರಿ ಮನೆ ಬಿಡಲು ಸಮಯ ಬೇಕು ಎಂದು ಕೇಳಿದಾಗ ಹುಟ್ಟಿದ ಕೆಲ ಗಂಟೆಗಳಲ್ಲಿ ಮಗುವನ್ನು ನೋಡಲು ಅಧಿಕಾರಿಗಳು ಮನೆಗೆ ಬಂದಾಗ ನಿಮ್ಮ ಮನ ಕರಗಲಿಲ್ಲವೇ?
* 2008ರಲ್ಲಿ ದಕ್ಷಿಣ ಭಾರತದಲ್ಲಿ ನಿಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ಅದಕ್ಕೆ ಕಾರಣಕರ್ತರು ಯಾರು?
* ಸ್ವಾತಂತ್ಯ್ರ ಬಂದಾಗಿನಿಂದ ಬಳ್ಳಾರಿ ಜಿಲ್ಲೆಯಲ್ಲಿ 60 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಬುಡ ಸಮೇತ ಕಿತ್ತು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತಿಯಿಂದ, ಎಂ ಎಲ್ಎ, ಎಂಎಲ್‌ಸಿ ಮತ್ತು ಎಂಪಿಗಳನ್ನು ಮಾಡಿದ್ದು ತಮ್ಮ ಗಮನಕ್ಕಿಲ್ಲವೇ?
* ನಿಮ್ಮಿಂದ ಇಷ್ಟೆಲ್ಲಾ ದುಃಖ ಅನುಭವಿಸಿದರೂ ನಿಮ್ಮ ಪಕ್ಷಕ್ಕೆ ಬೆಂಬಲ ನೀಡುತ್ತೇನೆ ಮಾನ್ಯ ಶ್ರೀ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ನೇರವಾಗಿ ಮಾಧ್ಯಮದ ಮುಂದೆ ಹೇಳಿದ್ದು ನಿಮ್ಮ ಕಿವಿಗಳಿಗೆ ಕೇಳಿಸಲಿಲ್ಲವೆ?
* ಇಷ್ಟಕ್ಕೆಲ್ಲಾ ಕಾರಣರಾಗಿರುವ ಮತ್ತು ಮೈತ್ರಿಗೆ ಅಡ್ಡವಾಗಿರುವ ನಿಮ್ಮ ಪಕ್ಷದ ನಾಯಕರು ಯಾರು ಯಾರು ಎಂದು ಕೇಳುವ ಧೈರ್ಯ ನಿಮ್ಮಲ್ಲಿದೆಯೇ?
* ತಮ್ಮ ಎದೆಯ ಮೇಲೆ ಕೈಯಿಟ್ಟು ಹೇಳಿ ಇಷ್ಟೆಲ್ಲಾ ತಪ್ಪುಗಳು ತಮ್ಮ ಪಕ್ಷದಿಂದ ನಡೆದರೂ ಒಂದು ಸಲವಾದರೂ ತಮಗಾರಿಗೂ ಪ್ರಶ್ನಿಸಬೇಕು ಅನ್ನಿಸಲಿಲ್ಲವೇ?
* ಮಾನ್ಯ ಶ್ರೀ ಜಿ. ಜನಾರ್ದನರೆಡ್ಡಿಯವರು ಅನುಮತಿ ನೀಡಿದರೆ ಇನ್ನು ಆನೇಕ ವಿಷಯಗಳಿವೆ ಚರ್ಚಿಸಲು. ಬಿಜೆಪಿ ನಿಷ್ಟಾವಂತ ಕಾರ್ಯಕರ್ತರಾದ ನೀವು ಈ ಪ್ರಶ್ನೆಗಳನ್ನು ನಿಮ್ಮ ಹೃದಯವನ್ನು ಕೇಳಿಕೊಳ್ಳಿ, ನಿಮ್ಮ ಆತ್ಮಸಾಕ್ಷಿಗೆ ತೋಚಿದರೆ ಉತ್ತರಿಸಿ.












Click it and Unblock the Notifications