ಜನಾರ್ದನ ರೆಡ್ಡಿಗೆ ಮತ್ತೆ ಜೈಲುವಾಸ ಶುರು, ಖೈದಿ ನಂ 10902
ಬೆಂಗಳೂರು, ನವೆಂಬರ್ 11: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಮತ್ತೆ ಜೈಲು ವಾಸ ಶುರುವಾಗಿದೆ. ಪರಪ್ಪನ ಅಗ್ರಹಾರ ಸೇರಿರುವ ಅವರ ಖೈದಿ ಸಂಖ್ಯೆ 10902.
ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಇಡಿ ಯಲ್ಲಿದ್ದ ಕೇಸನ್ನು ಆರೋಪಿಗಳ ಪರ ಮಾಡಿಕೊಡುತ್ತೇನೆ ಎಂದು ಹೇಳಿ ರೆಡ್ಡಿ ಅವರು ಆರೋಪಿಗಳಿಂದ 20 ಕೋಟಿ ಲಂಚ ಪಡೆದಿದ್ದಾರೆ ಹಾಗೂ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂಬ ಆರೋಪವನ್ನು ಸಿಸಿಬಿಯು ಜನಾರ್ದನ ರೆಡ್ಡಿ ಮೇಲೆ ಹೊರಿಸಿ ಅವರನ್ನು ಬಂಧಿಸಿದೆ.

ಸಿಸಿಬಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಜನಾರ್ದನ ರೆಡ್ಡಿ ಅವರಿಗೆ ನ್ಯಾಯಾಧೀಶಕರು ನವೆಂಬರ್ 24 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಬೇಲ್ ದೊರಕುವವರೆಗೆ ರೆಡ್ಡಿ ಅವರು ವಿಚಾರಣಾಧೀನ ಖೈದಿಗಳ ಜೊತೆ ಇರಲಿದ್ದಾರೆ.
ರೆಡ್ಡಿ ಪರ ಹನುಮಂತರಾಯಪ್ಪ, ಹಿರಿಯ ವಕೀಲ ಆಚಾರ್ಯ, ಚಂದ್ರಶೇಖರ್ ಅವರುಗಳು ಜಾಮೀನಿಗಾಗಿ ಹೋರಾಡಲು ತಯಾರಿ ನಡೆಸಿದ್ದಾರೆ. ನಾಳೆ ಹೊಸ ಜಾಮೀನು ಅರ್ಜಿಯನ್ನು ಸಲ್ಲಿಸುತ್ತಿದ್ದು ಜಾಮೀನು ನೀಡಬೇಕೆಂದು ಮನವಿ ಮಾಡಲಿದ್ದಾರೆ.
ಆಂಬಿಡೆಂಟ್ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರನ್ನು ಆರನೇ ಆರೋಪಿಯನ್ನಾಗಿ ಮಾಡಲಾಗಿದೆ. ರೆಡ್ಡಿ ಅವರ ಮೇಲೆ 419,420,468, 120 (b), 201 ಐಪಿಸಿ ಸೆಕ್ಷನ್ ಸೇರಿದಂತೆ ಇನ್ನು ಕೆಲವು ಸೆಕ್ಷನ್‌ಗಳಡಿ ಆರೋಪಗಳನ್ನು ಹೊರಿಸಲಾಗಿದೆ.












Click it and Unblock the Notifications